ಕರಿಕೆ, ಡಿ. ೪: ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಕುದುಪಜೆ ಕಲ್ಪನಾ ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿಗಳಾದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಿಯಾಜ್ ಅಹಮದ್ ಉಪಸ್ಥಿತಿಯಲ್ಲಿ ಇಲ್ಲಿನ ಎಳ್ಳುಕೊಚ್ಚಿ ವಿಎಸ್‌ಎಸ್ ಸಭಾಂಗಣದಲ್ಲಿ ನಡೆಯಿತು.
ಸಭೆ ಆರಂಭವಾಗುತ್ತಿದ್ದAತೆಯೇ ಗ್ರಾಮದ ನಿವಾಸಿಗಳು ತಮ್ಮ ಗ್ರಾಮಗಳ ರಸ್ತೆ, ಕುಡಿಯುವ ನೀರು ವಿದ್ಯುತ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಸಭೆಯ ಮುಂದೆ ತೆರೆದಿಟ್ಟರು.
ಈ ಬಾರಿ ಹೆಚ್ಚು ಮಳೆ ಸುರಿದ ಕಾರಣ ಗ್ರಾಮೀಣ ಸಂಪರ್ಕ ರಸ್ತೆಗಳು ಕಿತ್ತು ನಿಂತಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ, ಕೂಡಲೇ ರಸ್ತೆಯ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಬೇಕು. ಅಲ್ಲದೆ ಗ್ರಾಮವು ಗುಡ್ಡಗಾಡು ಪ್ರದೇಶವಾದ್ದರಿಂದ ಗ್ರಾಮೀಣ ರಸ್ತೆಯ ಎರಡು ಇಕ್ಕೆಲಗಳಲ್ಲಿ ಕಾಡು ತುಂಬಿ ಸಂಚರಿಸಲು ಅಸಾಧ್ಯವಾಗಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ ರಸ್ತೆ ದುರಸ್ತಿಗೆ ಹೆಚ್ಚಿನ ಅನುದಾನ ಮೀಸಲಿರಿಸಬೇಕೆಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಹೊಸಮನೆ ಹರೀಶ್, ಚಂಗಪ್ಪ, ಕವಿತಾ ಪ್ರಭಾಕರ್ ಸೇರಿದಂತೆ ಇತರ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದಲ್ಲಿ ಬಾಚಿಮಲೆಯಿಂದ ಹಳೆ ಮನೆವರೆಗೆ ಜಲಜೀವನ್ ಮಿಶನ್ ಯೋಜನೆಯಡಿ ಮಂಜೂರು ಆದ ಕಾಮಗಾರಿ ಕಳಪೆ ಆಗಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಕಸ ವಿಲೇವಾರಿ ಘಟಕವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಒತ್ತಾಯ ಕೇಳಿಬಂತು.
ಜಲ ಜೀವನ್ ಯೋಜನೆಯಡಿ ಪ್ರತೀ ಮನೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ನಿವೇಶನ ರಹಿತ ಕಡು ಬಡವರನ್ನು ಗುರುತಿಸಿ ವಸತಿ ನೀಡಲು ಕ್ರಮ ವಹಿಸುವುದಲ್ಲದೆ ಸೂಕ್ತ ರೀತಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಬಡವರಿಗೆ ಒದಗಿಸಬೇಕು, ಅಕ್ರಮ ಸಕ್ರಮ ಕಾರ್ಯಕ್ರಮದಡಿಯಲ್ಲಿ ಹಕ್ಕುಪತ್ರ ವಿತರಣೆ ಚುರುಕು ಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಬಳಿಕ ಗ್ರಾಮಸ್ಥರ ಸಮಸ್ಯೆಗಳಿಗೆ ಉತ್ತರಿಸಿದ ಸಭಾಧ್ಯಕ್ಷೆ ಕಲ್ಪನಾ ಜಗದೀಶ್ ಬಾಕಿ ಇರುವ ಗ್ರಾಮಗಳಲ್ಲಿ ಕುಡಿವ ನೀರಿನ ಜಲ ಜೀವನ್ ಯೋಜನಾ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿ ಸಲಾಗುವುದು. ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸಲು ಹಂತ ಹಂತವಾಗಿ ಕ್ರಮವಹಿಸಲಾಗುತ್ತಿದೆ ಹಾಗೆಯೇ ಸ್ವಚ್ಛ ಭಾರತ್ ಯೋಜನೆಯಡಿ ಕಸ ವಿಲೇವಾರಿ ಘಟಕವನ್ನು ಸದ್ಯದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕಂದಾಯ, ಆರೋಗ್ಯ, ಜಿ.ಪಂ. ಇಂಜಿನಿಯರಿAಗ್, ಚೆಸ್ಕಾಂ, ಬಿಎಸ್‌ಎನ್‌ಎಲ್, ಕೃಷಿ, ತೋಟಗಾರಿಕೆ ಲೋಕೋಪಯೋಗಿ, ಅರಣ್ಯ, ಶಿಕ್ಷಣ, ಸಮಗ್ರ ಗಿರಿಜನ ಅಭಿವೃದ್ಧಿ, ಆರಕ್ಷಕ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಆಯಾ ಇಲಾಖೆಯ ಬಗ್ಗೆ ಗ್ರಾಮಸ್ಥರ ಪ್ರಶ್ನೆಗೆ ಸಮರ್ಪಕವಾಗಿ ಮಾಹಿತಿ ನೀಡಿದರು.
ಕೇರಳದ ಅನಧಿಕೃತ ಆಟೋಗಳಿಗೆ ಕಡಿವಾಣ ಹಾಕಲು ಒತ್ತಾಯ
ಗ್ರಾಮದಿಂದ ಸುಳ್ಯಕ್ಕೆ ಪ್ರತಿದಿನ ಖಾಸಗಿ ಬಸ್ಸೊಂದು ಸಂಚರಿಸುತ್ತಿದ್ದು, ಇದು ಸಮೀಪದ ಪಾಣತ್ತೂರಿಗಾಗಿ ಹಾದುಹೋಗುತ್ತಿದ್ದು ಬಸ್ಸಿನಲ್ಲಿ ಹತ್ತಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪಾಣತ್ತೂರಿಗೆ ಪ್ರಯಾಣಿಸುತ್ತಿದ್ದು ಅಲ್ಲಿನ ಆಟೋ ಚಾಲಕರು, ಬಸ್ ನಗರಕ್ಕೆ ತೆರಳಿ ನಿಲುಗಡೆಗೆ ಸಮ್ಮತ್ತಿಸುತ್ತಿಲ್ಲ. ಆದರೆ ಅಲ್ಲಿನ ಪರವಾನಿಗೆ ರಹಿತ ಆಟೋರಿಕ್ಷಾಗಳಿಗೆ ಕರಿಕೆ ಗ್ರಾಮ ಪಂಚಾಯಿತಿ ವತಿಯಿಂದ ಚೆಂಬೇರಿಯಲ್ಲಿ ನಿಲ್ದಾಣಕ್ಕೆ ಕಾನೂನು ಬಾಹಿರ ಅವಕಾಶ ಮಾಡಿಕೊಟ್ಟಿದ್ದು ಇದು ಅತೀ ಸೂಕ್ಷö್ಮ ವಿಚಾರವಾಗಿದ್ದು ಎರಡು ರಾಜ್ಯದ ಗಡಿ ವಿಷಯದಲ್ಲಿ ಗೊಂದಲದ ವಾತಾವರಣ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೇರಳ - ಕರ್ನಾಟಕದ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಮಾತುಕತೆ ನಡೆಸಿ ಬಸ್ ನಿಲುಗಡೆಗೆ ಅವಕಾಶ ಕಲ್ಲಿಸಲು ಕ್ರಮ ವಹಿಸುವಂತೆ ಪೊಲೀಸ್ ಉಪ ನಿರೀಕ್ಷಕರಿಗೆ ಗ್ರಾಮಸ್ಥರು ಒಕ್ಕೊರಲಿನಿಂದ ತಿಳಿಸಿದರು. ಇದಕ್ಕೆ ಉತ್ತರಿಸಿದ ಭಾಗಮಂಡಲ ಆರಕ್ಷಕ ಉಪನಿರೀಕ್ಷಕಿ ಪ್ರಿಯಾಂಕಾ ತ್ಯಾಗರಾಜ್ ಅವರು ಇದು ಗಡಿಯ ವಿಚಾರವಾಗಿದ್ದು ಇಲ್ಲಿನ ದಾಖಲಾತಿ ಹೊಂದಿರುವ ಆಟೋ ಚಾಲಕರು ಜೀವನ ನಿರ್ವಹಣೆಗೆ ಕೆ.ಎಲ್. ನೋಂದಣಿ ಸಂಖ್ಯೆಯ ಆಟೋ ಚಾಲನೆ ಮಾಡುತ್ತಿರುವ ಮಾಹಿತಿ ಇದ್ದು ಈ ಭಾಗದ ಆಟೋಚಾಲಕರ ಸಭೆ ಕರೆದು ಅವರ ಆಟೊಗಳಿಗೆ ಪೊಲೀಸ್ ಇಲಾಖೆ ವತಿಯಿಂದ ನಂಬರ್ ಅಳವಡಿಸಲು ಕ್ರಮವಹಿಸಲಾಗುವುದು. ಈಗಾಗಲೇ ಭಾಗಮಂಡಲ ಮತ್ತು ಚೇರಂಬಾಣೆ ಆಟೋಗಳಿಗೆ ನಂಬರ್ ಅಳವಡಿಸಲಾಗಿದ್ದು ಇದರಿಂದ ಅನಧಿಕೃತ ಆಟೋಗಳ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗೆ ಅನೂಕೂಲವಾಗಲಿದೆ ಎಂದರಲ್ಲದೆ ಡಿಸೆಂಬರ್‌ನಲ್ಲಿ ಈ ಕಾರ್ಯ ಪೂರ್ಣಗೊಳಿಸುವ ಭರವಸೆ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಲಚಂದ್ರ ನಾಯರ್, ಸದಸ್ಯರಾದ ಕೆ.ಎ. ನಾರಾಯಣ, ಪುರುಷೋತ್ತಮ ಸೇರಿದಂತೆ ಇತರ ಸದಸ್ಯರು, ಮಾಜಿ ಅಧ್ಯಕ್ಷರು, ಸದಸ್ಯರು, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿ ದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಣಪತಿ ಕಾರ್ಯಕ್ರಮ ನಿರೂಪಿಸಿದರು.
- ಸುಧೀರ್ ಹೊದ್ದೆಟ್ಟಿ