ಗುಜರಾತ್ ವಿಧಾನಸಭಾ ಚುನಾವಣೆ: ೨ನೇ ಹಂತದ ಮತದಾನ

ಅಹಮದಾಬಾದ್, ಡಿ. ೪: ಗುಜರಾತ್ ವಿಧಾನಸಭೆಯ ೯೩ ಸ್ಥಾನಗಳಿಗೆ ತಾ. ೫ ರಂದು (ಇಂದು) ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮುಕ್ತ ಹಾಗೂ ಸುಗಮ ಮತದಾನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಹಮದಾಬಾದ್, ವಡೋದರಾ, ಗಾಂಧಿನಗರ ಮತ್ತಿತರ ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ೬೧ ಪಕ್ಷಗಳ ೮೩೩ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್ ೯೦ ಕ್ಷೇತ್ರಗಳಲ್ಲಿ, ಎನ್‌ಸಿಪಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಉಳಿದಂತೆ ಬಿಟಿಪಿ ೧೨, ಬಿಎಸ್‌ಪಿ ೪೪ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಹಾರ್ದಿಕ್ ಪಟೇಲ್, ಅಲ್ಫೇಶ್ ಠಾಕೂರ್, ಜಿಗ್ನೇಶ್ ಮೆವಾನಿ ಸೇರಿದಂತೆ ಹಲವರು ಚುನಾವಣಾ ಕಣದಲ್ಲಿದ್ದಾರೆ.

ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು

ಮೀರ್‌ಪುರ್, ಡಿ. ೪: ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ೧ ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಮೀರ್‌ಪುರ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ೧೮೬ ರನ್‌ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಭಾರತ ನೀಡಿದ ೧೮೭ ರನ್‌ಗಳ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ೯ ವಿಕೆಟ್ ನಷ್ಟಕ್ಕೆ ೧೮೭ ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಬಾಂಗ್ಲಾದೇಶ ಪರ ಲಿಟನ್ ದಾಸ್ ೪೧, ಅನಾಮುಲ್ ಹಕ್ ೧೪, ಶಕೀಬ್ ಅಲ್ ಹಸನ್ ೨೯, ಮುಶ್ಫಿಕರ್ ರಹೀಮ್ ೧೮, ಮೆಹಿದಿ ಹಸನ್ ಮಿರಾಜ್ ಅಜೇಯ ೩೮ ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತದ ಪರ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ೩, ಕುಲದೀಪ್ ಸೇನ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ೨ ವಿಕೆಟ್, ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ತಲಾ ೧ ವಿಕೆಟ್ ಪಡೆದರು.

ದೇವಸ್ಥಾನಗಳು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ: ಸ್ಟಾಲಿನ್

ಚೆನ್ನೆöÊ, ಡಿ. ೪: ದೇವಾಲಯಗಳು ಸಾರ್ವಜನಿಕರಿಗೆ ಮೀಸಲಾಗಿದ್ದು, ಯಾರೊಬ್ಬರ ವೈಯಕ್ತಿಕ ಆಸ್ತಿಯಾಗಲು ಸಾಧ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಪ್ರತಿಪಾದಿಸಿದ್ದಾರೆ. ಎಲ್ಲಾ ಜಾತಿಗಳಿಂದ ಅರ್ಚಕರ ನೇಮಕ ಸೇರಿದಂತೆ ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಕೈಗೊಂಡ ವಿವಿಧ ಕಲ್ಯಾಣ ಕ್ರಮಗಳನ್ನು ಸಹಿಸಲಾಗದ ಕೆಲವು ಶಕ್ತಿಗಳು ಆಧಾರರಹಿತ ಆರೋಪಗಳ ಮೂಲಕ ಡಿಎಂಕೆ ಸರ್ಕಾರದ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ತಿರುವನ್ಮಿಯೂರಿನ ಅರುಲ್ಮಿಗು ಮರುಂತೀಶ್ವರರ್ ದೇವಾಲಯದಲ್ಲಿ ನಡೆದ ೩೧ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ರಾಜಪ್ರಭುತ್ವವಾಗಲಿ ಅಥವಾ ಪ್ರಜಾಪ್ರಭುತ್ವವಾಗಲಿ, ದೇವಾಲಯಗಳು ಜನರಿಗೆ ಮಾತ್ರ ಇರುವುದು. ಯಾವುದೇ ರೀತಿಯ ಆಡಳಿತವನ್ನು ಲೆಕ್ಕಿಸದೆ ಅವು ಸಾರ್ವಜನಿಕರಿಗೆ ಇವೆ. ದೇಗುಲಗಳು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ. ವ್ಯಕ್ತಿಗಳ ನಿಯಂತ್ರಣದಲ್ಲಿದ್ದ ದೇವಾಲಯಗಳ ಪರಿಸ್ಥಿತಿ ಬದಲಾಯಿಸಲು ಈ ಇಲಾಖೆಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ತಾ. ೫ ರಿಂದ ೪೮ ಲಕ್ಷ ಮಕ್ಕಳಿಗೆ ಲಸಿಕೆ

ಬೆಂಗಳೂರು, ಡಿ. ೪: ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜೆಇ ಮೆದುಳು ಜ್ವರ (ಜಪಾನೀಸ್ ಎನ್ ಸೆಫಲೈಟಿಸ್) ನಿಯಂತ್ರಣಕ್ಕಾಗಿ ಡಿಸೆಂಬರ್ ೫ ರಿಂದ ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಡಿ ೧-೧೫ ವರ್ಷದ ಅಂದಾಜು ೪೮ ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಜೆಇ ಮೆದುಳು ಜ್ವರ 'ಪ್ಲೇವಿವೈರಸ್' ಎಂಬ ವೈರಾಣುವಿನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಹಂದಿಗಳು ಮತ್ತು ಕಾಡಿನ ಪಕ್ಷಿಗಳಲ್ಲಿರುವ ಈ ವೈರಾಣುವಿಗೆ ಮಾನವರು ಕಟ್ಟಕಡೆಯ ಹೋಸ್ಟ್ ಆಗಿರುತ್ತಾರೆ. ಜೆಇ ಲಸಿಕಾ ಅಭಿಯಾನ ಕುರಿತು ಮಾಹಿತಿ ನೀಡಿದ ಸಚಿವರು, ಡಿಸೆಂಬರ್ ಮೊದಲನೇ ವಾರದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯದ ಇನ್ನಿತರ ಪ್ರದೇಶಗಳಲ್ಲಿ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಉಚಿತವಾಗಿ ಜೆನವ್ಯಾಕ್ ಜೆಇ ಲಸಿಕೆಗಳನ್ನು ಸರಬರಾಜು ಮಾಡಿದೆ ಎಂದರು. ಪ್ರಪಂಚದಾದ್ಯAತ ೨೪ ರಾಷ್ಟçಗಳಲ್ಲಿ ಜಪಾನೀಸ್ ಎನ್‌ಸೆಫಲೈಟಿಸ್ (ಜೆಇ) ಪಿಡುಗು ಗುರುತಿಸಲಾಗಿದೆ. ಭಾರತವೂ ಸೇರಿದಂತೆ ಏಷ್ಯಾದ ೧೧ ಏಷ್ಯಾ ರಾಷ್ಟçಗಳು ಈ ಪಟ್ಟಿಯಲ್ಲಿದೆ. ಪ್ರತಿ ವರ್ಷ ಸರಾಸರಿ ೬೮,೦೦೦ ಪ್ರಕರಣಗಳು ವರದಿಯಾಗುತ್ತಿದ್ದು, ಮರಣ ಪ್ರಮಾಣ ಶೇ. ೨೦ ರಿಂದ ಶೇ. ೩೦ ರಷ್ಟಿದೆ. ಗುಣಮುಖರಾದ ಶೇ.೩೦ ರಿಂದ ಶೇ. ೫೦ ರಷ್ಟು ಪ್ರಕರಣಗಳಲ್ಲಿ ನರದೌರ್ಬಲ್ಯ, ಬುದ್ಧಿಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟಾಗಿವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. ಜೆಇ ಮೆದುಳು ಜ್ವರದ ಮೊದಲ ಪ್ರಕರಣ ೧೯೫೫ ರಲ್ಲಿ ತಮಿಳುನಾಡಿನ ವೆಲ್ಲೂರ್ ನಲ್ಲಿ ವರದಿಯಾಗಿತ್ತು. ಕರ್ನಾಟಕದಲ್ಲಿ ೧೯೭೮ ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ನಿಮ್ಹಾನ್ಸ್ -ಸ್ಟೇಟ್ ಅಪೆಕ್ಸ್ ಲ್ಯಾಬೊರೇಟರಿ, ವಿಮ್ಸ್-ಬಳ್ಳಾರಿ, ಕಿಮ್ಸ್-ಹುಬ್ಬಳ್ಳಿ, ಡಿಪಿಎಚ್‌ಎಲ್-ಕೋಲಾರ, ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್-ಉಡುಪಿ, ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ)-ಬೆಂಗಳೂರು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು ೧೦ ಜೆಇ ಎಂಡೆಮಿಕ್ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮಕ್ಕಳಿಗೆ ೯ ತಿಂಗಳು ತುಂಬಿದ ನಂತರ ಮೊದಲನೇ ಡೋಸ್ ಮತ್ತು ೧.೫ ವರ್ಷದ ವಯಸ್ಸಿನಲ್ಲಿ ೨ನೇ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ಅಭಿಯಾನದಲ್ಲಿ ೧-೧೫ ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಡೋಸ್ ಲಸಿಕೆ ನೀಡಲಾಗುವುದು ಎಂದು ಸಚಿವರು ವಿವರಿಸಿದರು. ನಾವೀಗ ಮೆದುಳು ಜ್ವರದ ವಿರುದ್ಧ ಯುದ್ಧ ಸಾರಬೇಕಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆಯು ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಹೈಟೆನ್ಷನ್ ವಯರ್ ಸ್ಪರ್ಶಿಸಿದ್ದ ಬಾಲಕ ಸಾವು

ಬೆಂಗಳೂರು, ಡಿ. ೪: ೩ ದಿನಗಳ ಹಿಂದೆ ಹೈಟೆನ್ಷನ್ ವಯರ್ ಸ್ಪರ್ಶಿಸಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಬಾಲಕರ ಪೈಕಿ ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಸುಪ್ರೀತ್ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ದುರ್ಘಟನೆ ನಡೆದಿತ್ತು. ಡಿಸೆಂಬರ್ ೧ ರಂದು ಶಾಲೆಯಿಂದ ಮನೆಗೆ ಬಂದಿದ್ದ ಬಾಲಕರಿಬ್ಬರು ಮನೆಯ ಮಹಡಿ ಮೇಲಿದ್ದ ಪಾರಿವಾಳವನ್ನು ಹಿಡಿಯಲು ಹೋಗಿದ್ದರು. ಈ ವೇಳೆ ಕಬ್ಬಿಣದ ರಾಡ್‌ನಿಂದ ಹೈಟೆನ್ಷನ್ ವಯರ್ ಅನ್ನು ಬಾಲಕರು ಮುಟ್ಟಿದ್ದರು. ಘಟನೆಯ ತೀವ್ರತೆ ಎಷ್ಟಿತ್ತು ಎಂದರೆ ಮನೆಯಲ್ಲಿದ್ದ ಎಲೆಕ್ಟ್ರಿಕ್ ಉಪಕರಣಗಳೆಲ್ಲವೂ ಸ್ಫೋಟಗೊಂಡಿತ್ತು. ಘಟನೆಯಿಂದ ಬಾಲಕ ಸುಪ್ರೀತ್ ದೇಹದಲ್ಲಿ ಸುಮಾರು ಶೇ. ೯೦ ರಷ್ಟು ಸುಟ್ಟ ಗಾಯಗಳಾಗಿತ್ತು. ಇನ್ನೊಬ್ಬ ಬಾಲಕ ಚಂದ್ರು ಕೂಡಾ ಸುಮಾರು ಶೇ.೭೦ ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ. ದುರ್ಘಟನೆ ನಡೆದ ತಕ್ಷಣವೇ ಬಾಲಕರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಇಬ್ಬರ ಪೈಕಿ ಓರ್ವ ಬಾಲಕ ಬೆಳಿಗ್ಗೆ ೭.೩೦ರ ವೇಳೆಗೆ ಕೊನೆಯುಸಿರೆಳೆದಿದ್ದಾನೆ.