ಗೋಣಿಕೊಪ್ಪ ವರದಿ, ಡಿ. ೩: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಮತ್ತು ವಿಸ್ತರಣಾ ಶಿಕ್ಷಣ ಘಟಕ, ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಮತ್ತು ವೀರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವೀರಾಜಪೇಟೆ ಸಂಸ್ಥೆಗಳ ಸಹಯೋಗದಲ್ಲಿ ತಾ. ೫ ರಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕೃಷಿ ಮಹೋತ್ಸವ ಹಾಗೂ ವಿಶ್ವ ಮಣ್ಣು ದಿನಾಚರಣೆಯನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ ೧೦.೩೦ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ರೈತರ ಆದಾಯ ಹೆಚ್ಚಳಕ್ಕೆ ಕೃಷಿ ವೈವಿಧ್ಯೀಕರಣ ಧ್ಯೇಯ ವಾಕ್ಯದಲ್ಲಿ ಕೊಡಗಿನ ಕೃಷಿಯಲ್ಲಿನ ಅವಕಾಶಗಳು, ವೈಜ್ಞಾನಿಕ ಕೃಷಿ ಪದ್ದತಿಗಳು, ಸಮಗ್ರ ಕೃಷಿ ಪಾಲನೆ, ವಿಚಾರ ವಿನಿಮಯ, ವಸ್ತು ಪ್ರದರ್ಶನ, ಚರ್ಚೆಗಳು ನಡೆಯಲಿವೆ. ಕೃಷಿ ಆದಾಯ ಹೆಚ್ಚಿಸಿಕೊಳ್ಳಲು ಕೈಗೊಳ್ಳಬಹುದಾದ ಕೃಷಿ ಸಂಬAಧಿತ ಚಟುವಟಿಕೆಗಳು ಹಾಗೂ ಉಪಕಸುಬುಗಳ ಬಗ್ಗೆ ಪ್ರಮುಖವಾಗಿ ಮಾಹಿತಿ ನೀಡಲಾಗುತ್ತದೆ.
ವಿಚಾರಗೋಷ್ಠಿಯಲ್ಲಿ ಪ್ರಗತಿಪರ ರೈತರಿಂದ ಮಾಹಿತಿ, ಪರಿಣಿತ ವಿಜ್ಞಾನಿಗಳಿಂದ ವಿಷಯ ಮಂಡನೆ ಹಾಗೂ ಸಂವಾದ ನಡೆಯಲಿದೆ. ಗೋಷ್ಠಿಯ ಉದ್ಘಾಟನೆಯನ್ನು ಕೆಳದಿ ಶಿವಪ್ಪ ನಾಯಕ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಹೇಮ್ಲಾನಾಯಕ್ ನೆರವೇರಿಸಲಿದ್ದು, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಮೃತ್ಯುಂಜಯ ಸಿ. ವಾಲಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಭಾನಾ ಶೇಖ್ ಪಾಲ್ಗೊಳ್ಳಲಿದ್ದಾರೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಕಟಣೆ ತಿಳಿಸಿದೆ.