ಕೂಡಿಗೆ, ಡಿ. ೩: ಕಪ್ಪೆಯನ್ನು ನುಂಗಲು ಬಂದು ಗಾಣಕ್ಕೆ ಸಿಲುಕಿ ನರಳಾಡಿದ್ದ ನಾಗರಹಾವು ಎರಡು ತಿಂಗಳ ಚಿಕಿತ್ಸೆ ಬಳಿಕ ಇದೀಗ ಸಂಪೂರ್ಣವಾಗಿ ಗುಣಮುಖವಾಗಿದೆ.

ಹಾರಂಗಿ ಅಯ್ಯಪ್ಪ ದೇವಾಲಯ ಬಳಿಯ ಮೆಹಬೂಬ್ ಸಾಬ್ ಮೀನು ಹಿಡಿಯಲೆಂದು ಗಾಣಕ್ಕೆ ಕಪ್ಪೆಯನ್ನು ಸಿಕ್ಕಿಸಿ ನದಿಗೆ ಹಾಕಿದ್ದರು. ಆದರೆ ಮೀನು ಸಿಗದ ಕಾರಣ ಕಪ್ಪೆ ಸಹಿತ ಗಾಣವನ್ನು ತಂದು ಮನೆಯಂಗಳದಲ್ಲಿ ಇಟ್ಟಿದ್ದರು. ಸೆ.೩೦ರಂದು ನಾಗರಹಾವೊಂದು ಕಪ್ಪೆಯನ್ನು ನುಂಗಲು ಬಂದಿದ್ದು, ಕಪ್ಪೆಯನ್ನು ನುಂಗಿದ ನಾಗರಹಾವಿನ ಗಂಟಲಿಗೆ ಗಾಣ ಸಿಲುಕಿಕೊಂಡಿದೆ. ನಾಗರಹಾವು ಒದ್ದಾಡುತ್ತಿರುವುದನ್ನು ಗಮನಿಸಿದ ಮನೆ ಮಾಲೀಕ ಮೆಹಬೂಬ್ ಸಾಬ್ ಸ್ನೇಕ್ ಗಫೂರ್ ಅವರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸ್ನೇಕ್ ಗಫೂರ್ ಹಾವಿನ ಬಾಯಿಯಿಂದ ಗಾಣ ತೆಗೆಯಲು ಶ್ರಮಿಸಿ ಸಾಧ್ಯವಾಗದೆ ಸ್ನೇಕ್ ಬಾವ ಸೇರಿದಂತೆ ಕೊಡಗಿನ ವೈದ್ಯರುಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಆದರೆ, ಹಾವಿಗೆ ಚಿಕಿತ್ಸೆ ನೀಡಲು ಕೊಡಗಿನಲ್ಲಿ ಸೂಕ್ತ ಸೌಲಭ್ಯ ಇಲ್ಲವಾದ ಕಾರಣ ಮೈಸೂರಿನ ಸ್ನೇಕ್ ಶ್ಯಾಂ ಅವರನ್ನು ಸಂಪರ್ಕಿಸಿ ಅವರ ಪುತ್ರ ಸೂರ್ಯಕೀರ್ತಿ ಅವರಿಗೆ ವಿಷಯ ತಿಳಿಸಿದ ಬಳಿಕ ಮೈಸೂರಿನಲ್ಲಿ ಚಿಕಿತ್ಸೆಗೆ ಅವಕಾಶವಿರುವುದಾಗಿ ತಿಳಿಸಿದ ನಂತರ ೪ ವರ್ಷ ಪ್ರಾಯದ ೫ ಅಡಿ ಉದ್ದದ ಈ ನಾಗರಹಾವನ್ನು ಬಸ್ ಮೂಲಕ ಮೈಸೂರಿಗೆ ಸ್ನೇಕ್ ಗಫೂರ್ ಕಳುಹಿಸಿಕೊಟ್ಟಿದ್ದರು. ಅಲ್ಲಿ ಸೂರ್ಯಕೀರ್ತಿ ಅವರ ನೇತೃತ್ವದಲ್ಲಿ ಡಾ.ಅಭಿಲಾಷ್ ಅವರು ಸೂಕ್ತ ಚಿಕಿತ್ಸೆ ನೀಡಿ ಅಪಾಯದಿಂದ ಹಾವನ್ನು ಪಾರು ಮಾಡಿದ್ದಾರೆ. ಎಕ್ಸರೆ ಮೂಲಕ ಗಾಣ ಹೊಟ್ಟೆಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಂಡು ವೈದ್ಯಕೀಯ ಶಾಸ್ತçದ ಪ್ರಕಾರ ಹಾವಿನ ಗುದದಿಂದ ಗಾಣವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಣದೊಂದಿಗೆ ನುಂಗಿದ್ದ ಕಪ್ಪೆ ಹೊಟ್ಟೆಯಲ್ಲಿ ಜೀರ್ಣವಾಗಿದ್ದು, ಗಾಣ ಮಾತ್ರ ಹೊಟ್ಟೆಯಲ್ಲೇ ಉಳಿದುಕೊಂಡಿತ್ತು. ಇದೊಂದು ಅಪರೂಪದ ಘಟನೆ ಎಂದು ತಿಳಿಸಿರುವ ಸೂರ್ಯಕೀರ್ತಿ ಅವರು ಶನಿವಾರ ಹಾವನ್ನು ಕೂಡುಮಂಗಳೂರು ಗ್ರಾಮದ ಗಫೂರ್ ಮನೆ ಹತ್ತಿರ ತಂದು ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಯಡವನಾಡು ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

ಈ ಸಂದರ್ಭ ಉರಗ ರಕ್ಷಕರಾದ ಕೂಡಿಗೆಯ ಸ್ನೇಕ್ ಗಫೂರ್, ಸೋಮವಾರಪೇಟೆಯ ಸ್ನೇಕ್ ರಘು ಇದ್ದರು.

- ಕೆ.ಕೆ. ನಾಗರಾಜಶೆಟ್ಟಿ.