ಮಡಿಕೇರಿ, ಡಿ. ೨: ೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗಿತ್ತು, ಈ ಮನೆಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಾರಾಟ ಮಾಡುವುದು, ಬಾಡಿಗೆಗೆ ಅಥವಾ ಭೋಗ್ಯಕ್ಕೆ ನೀಡಬಾರದು. ಒಂದು ವೇಳೆ ಆ ರೀತಿ ಮಾಡಿದಲ್ಲಿ ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ, ರಾಜೀವ್‌ಗಾಂಧಿ ವಸತಿ ನಿಗಮ, ಪ್ರಾಕೃತಿಕ ವಿಕೋಪ ಪುನರ್ ವಸತಿ ಯೋಜನೆಯಡಿ ೨೦೧೮ ರ ಆಗಸ್ಟ್ನಲ್ಲಿ ಪ್ರವಾಹಕ್ಕೆ ಒಳಗಾದ ಸಂತ್ರಸ್ತರಿಗೆ ಪುನರ್‌ವಸತಿಗಾಗಿ ನಿರ್ಮಿಸಿರುವ ಬಡಾವಣೆಯ ಉದ್ಘಾಟನೆ ಹಾಗೂ ಮನೆಗಳ ವಿತರಣೆ ಮಾಡಿ ಅವರು ಮಾತನಾಡಿದರು.

ಮನೆಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಿಕೊಳ್ಳಬಾರದು. ಈಗಾಗಲೇ ಹಂಚಿಕೆ ಮಾಡಲಾಗಿರುವ ಸಂತ್ರಸ್ತರಿಗೆ ಬೇರೆ ಕಡೆ ಸ್ವಂತ ಮನೆ ಹೊಂದಿದ್ದಲ್ಲಿ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು. ೨೦೧೮ ರಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ, ಮಠ ಆಸ್ತಿ-ಪಾಸ್ತಿ ಕಳೆದುಕೊಂಡರು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದಾಗ ೯.೮೫ ಲಕ್ಷ ರೂ. ವೆಚ್ಚದ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಅದರಂತೆ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತ್ರಸ್ತರು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ, ಒಳಚರಂಡಿ, ವಿದ್ಯುತ್ ದೀಪ ಸೇರಿದಂತೆ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈಗಾಗಲೇ ಮಾದಾಪುರ, ಗಾಳಿಬೀಡು, ಬಿಳಿಗೇರಿ, ಮದೆನಾಡು ಇತರ ಕಡೆಗಳಲ್ಲಿ ಮನೆ ನಿರ್ಮಾಣ ಮಾಡಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ.

ಮನೆ ನಿರ್ಮಾಣದಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರ ಪ್ರಯತ್ನ ಸಾಕಷ್ಟು ಇದೆ. ವಸತಿ ಸಚಿವರಾಗಿ ಮನೆಗಳ ಶೀಘ್ರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

ಮನೆ ಹಾಗೂ ಮನೆಯ ಸುತ್ತಮುತ್ತ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರತೀ ವರ್ಷ ಒಂದು ಸಾವಿರವನ್ನಾದರೂ ಪ್ರತೀ ಮನೆಯವರು ಸಂಗ್ರಹಿಸಿ ಸಮಿತಿ ರಚನೆ ಮಾಡಿಕೊಂಡು ಸಮಸ್ಯೆಗಳನ್ನು

(ಮೊದಲ ಪುಟದಿಂದ) ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದರು. ಮನೆ ಮುಂಭಾಗ ಶೆಡ್ ನಿರ್ಮಾಣ ಮಾಡಲು ಮುಂದಾಗಬಾರದು. ಹಿಂಬದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಶೆಡ್ ನಿರ್ಮಿಸಿಕೊಳ್ಳಬಹುದಾಗಿದೆ. ಮುಂಭಾಗದಲ್ಲಿ ಯಾವುದೇ ಕಾರಣಕ್ಕೂ ಮನೆಯ ನಕಾಶೆಯನ್ನು ಬದಲಿಸಬಾರದು.

ಸಂತ್ರಸ್ತರು ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕಲ್ಪಿಸಬೇಕು. ಮೂರು ತಿಂಗಳಿಗೊಮ್ಮೆ ಬಡಾವಣೆಗೆ ಭೇಟಿ ನೀಡಿ ಅಹವಾಲು ಆಲಿಸಲಾಗುವುದು ಎಂದು ಹೇಳಿದರು. ಕರ್ನಾಟಕ ಜೀವ ವೈವಿದ್ಯ ಮಂಡಳಿ ರಾಜ್ಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ೨೦೧೮ ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪವನ್ನು ಸ್ಮರಿಸಿಕೊಂಡರೆ ಇಂದಿಗೂ ಸಹ ಕನವರಿಕೆ ಉಂಟಾಗುತ್ತದೆ. ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಮನೆಯನ್ನು ಒದಗಿಸಲಾಗಿದೆ.

ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗಿದ್ದು, ಮನೆಯ ಸುತ್ತಮುತ್ತ ತರಕಾರಿ, ಹಣ್ಣು, ಹೂ ಮತ್ತಿತರ ಗಿಡಗಳನ್ನು ನೆಟ್ಟು ಕೈತೋಟ ನಿರ್ಮಾಣ ಮಾಡುವಂತಾಗಬೇಕು. ಇದರಿಂದ ಪರಿಸರ ಸಂರಕ್ಷಿಸಬಹುದು ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಕಂದಾಯ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಬಡಾವಣೆ ಅಭಿವೃದ್ಧಿ ಹಾಗೂ ಕುಂದುಕೊರತೆ ನಿವಾರಣೆಗೆ ಮುಂದಾಗಬೇಕು.

ಕೆ.ನಿಡುಗಣೆ ಗ್ರಾ.ಪಂ.ಪ್ರಾದೇಶಿಕ ಕಚೇರಿ ಬಳಿ ನಿರ್ಮಾಣವಾಗಿರುವ ಮನೆಗೆ ತುಂಬಾ ಬೇಡಿಕೆ ಇದೆ. ಮನೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಒಂದು ಕಡೆ ಸ್ವಂತ ಮನೆಗೆ ಹೋಗುವ ಸಂತಸವಿದ್ದರೆ. ಮತ್ತೊಂದು ಕಡೆ ಇರುವ ಮನೆಯನ್ನು ಬಿಟ್ಟು ಬರುವ ನೋವು ಸಹ ಇರುತ್ತದೆ. ಒಟ್ಟಾರೆ ಎಲ್ಲವನ್ನು ಸಮತೋಲನವಾಗಿ ಸ್ವೀಕರಿಸಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಂತ್ರಸ್ತರು ಮುಂದಾಗಬೇಕು. ಬಡಾವಣೆಯನ್ನು ಒಂದು ವರ್ಷದವರೆಗೆ ನಿರ್ವಹಣೆ ಮಾಡಲಾಗುವುದು. ಮತ್ತೆ ಬಡಾವಣೆ ಕುಂದುಕೊರತೆ ಮತ್ತಿತರ ಸಂಬAಧ ತಾವೇ ಪರಿಹರಿಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು. ಅರ್ಹರಲ್ಲದವರು ಮನೆ ಪಡೆದಿದ್ದಲ್ಲಿ ಪರಿಶೀಲಿಸಿ ಸರ್ಕಾರದ ನಿಯಮಗಳಂತೆ ಕ್ರಮವಹಿಸಲಾಗುವುದು ಎಂದರು.

ರಾಜೀವ್ ಗಾಂಧಿ ವಸತಿ ನಿಗಮದ ಯೋಜನಾ ನಿರ್ದೇಶಕ ಎಚ್. ಶ್ರೀನಿವಾಸ್ ಮಾತನಾಡಿ, ಈಗಾಗಲೇ ಕರ್ಣಂಗೇರಿಯಲ್ಲಿ ೩೫ ಮನೆ, ಮದೆನಾಡು ೮೦, ಜಂಬೂರು ೩೮೩, ಬಿಳಿಗೇರಿ ೨೨, ಕೆ.ನಿಡುಗಣೆ ಗ್ರಾಮದಲ್ಲಿ ೭೫ ಹಾಗೆಯೇ ಗಾಳಿಬೀಡು ಗ್ರಾಮದಲ್ಲಿ ೧೪೦ ರಲ್ಲಿ ೬೦ ಮನೆಗಳನ್ನು ಹಸ್ತಾಂತರಿಸಲಾಗಿದೆ. ಒಟ್ಟಾರೆ ಇದುವರೆಗೆ ೬೬೬ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು. ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಡೀನ್ ಬೋಪಣ್ಣ, ಗ್ರಾ.ಪಂ.ಉಪಾಧ್ಯಕೆÀ್ಷ ರೀಟಾ ಮುತ್ತಣ್ಣ, ತಹಶೀಲ್ದಾರ್ ಪಿ.ಎಸ್.ಮಹೇಶ್, ಗ್ರಾ.ಪಂ.ಸದಸ್ಯರು ಇತರರು ಇದ್ದರು. ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.