ಗೋಣಿಕೊಪ್ಪಲು, ಡಿ. ೨: ಕಳೆದ ೪ ವರ್ಷಗಳಿಂದ ತಿತಿಮತಿ ಮರಪಾಲ ಭಾಗದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯು ನೆನೆಗುದಿಗೆ ಬಿದ್ದಿರುವ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ರೈತ ಸಂಘದ ಮುಖಂಡರು ಹಾಗೂ ಗಿರಿಜನ ಮುಖಂಡರು ಸ್ಥಳ ಪರಿಶೀಲನೆ ನಡೆಸಿದರು. ಪ್ರಸ್ತುತ ಅಳವಡಿಸಿರುವ ಬ್ಯಾರಿಕೇಡ್ ನಿರ್ಮಾಣದಿಂದ ಹಾಡಿ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಕೊಡಗು ಜಿಲ್ಲಾ ಸಿಸಿಎಫ್ ಬಿ.ಎನ್.ಎನ್.ಮೂರ್ತಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದೆ ಸ್ಥಳ ಪರಿಶೀಲನೆಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳದಲ್ಲಿದ್ದ ರೈತ ಸಂಘದ ಮುಖಂಡರು, ಆದಿವಾಸಿಗಳ ಮುಖಂಡರುಗಳೊAದಿಗೆ ಹಾಡಿಯಲ್ಲಿಯೇ ಸುದೀರ್ಘ ಚರ್ಚೆ ನಡೆಸಿದರು.
ಕೆಲವು ವರ್ಷಗಳಿಂದ ತಿತಿಮತಿ ಭಾಗದಲ್ಲಿ ಕಾಡಾನೆಗಳ ಉಪಟಳವನ್ನು ತಪ್ಪಿಸುವ ಸಲುವಾಗಿ, ಅರಣ್ಯದಿಂದ ರೈತರ ಕಾಫಿ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅರಣ್ಯದಿಂದ ಕಾಡಾನೆಗಳು ನಾಡಿಗೆ ಬರದಂತೆ ಎಚ್ಚರಿಕೆ ವಹಿಸಲು ೩ ಕೋಟಿ ವೆಚ್ಚದಲ್ಲಿ ಅರಣ್ಯ ಇಲಾಖೆ ವತಿಯಿಂದ ರೈಲ್ವೆ ಬ್ಯಾರಿಕೇಡನ್ನು ಅಳವಡಿಸಲಾಗುತ್ತಿತ್ತು. ಈ ವೇಳೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಿರಸುಳಿ ಭಾಗದಲ್ಲಿ ವಾಸಿಸುತ್ತಿರುವ ನೂರಾರು ಗಿರಿಜನ ಕುಟುಂಬಗಳನ್ನು ಅರಣ್ಯಕ್ಕೆ ಸೇರಿಸಿ ಬ್ಯಾರಿಕೇಡನ್ನು ಅಳವಡಿಸುತ್ತಿರುವ ಬಗ್ಗೆ ಅಲ್ಲಿನ ಗಿರಿಜನ ಮುಖಂಡರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿ ಬ್ಯಾರಿಕೇಡ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಇದರಿಂದಾಗಿ ಈ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದರಿಂದ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬರಲು ಸಾಧ್ಯವಾಗಲಿಲ್ಲ.
ಈ ವಿಷಯದಲ್ಲಿ ಆದಿವಾಸಿ ಮುಖಂಡರು ರೈತ ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಕಳೆದ ನಾಲ್ಕು ವರ್ಷದಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಬಗ್ಗೆ ಗಮನ ಸೆಳೆದು ಗಿರಿಜನರಿಗೆ ಅನುಕೂಲವಾಗುವಂತೆ ಬ್ಯಾರಿಕೇಡ್ ಅಳವಡಿಸಲು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ತಮ್ಮ ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಡಿಕೇರಿಯಲ್ಲಿ ನಡೆದ ಐಕ್ಯತಾ ಹೋರಾಟದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಗಿರಿಜನರಿಗೆ ಅನುಕೂಲವಾಗುವಂತೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ವಿಚಾರದಲ್ಲಿ ಗಣನೆಗೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಈ ವೇಳೆ ಕೊಡಗು ಜಿಲ್ಲಾ ಸಿಸಿಎಫ್ ಬಿ.ಎನ್.ಎನ್. ಮೂರ್ತಿ ರೈಲ್ವೆ ಬ್ಯಾರಿಕೇಡ್ ವಿಚಾರದಲ್ಲಿ ಆದಿವಾಸಿಗಳೊಂದಿಗೆ, ರೈತ ಮುಖಂಡರು ಖುದ್ದಾಗಿ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಸಿಎಫ್ ಬಿ.ಎನ್.ಎನ್. ಮೂರ್ತಿ, ಹಿರಿಯ ಅಧಿಕಾರಿಗಳೊಂದಿಗೆ ರೈತ ಸಂಘದ ಮುಖಂಡರೊಡಗೂಡಿ ಮರಪಾಲ ಸಮೀಪವಿರುವ ಆಯಿರಸುಳಿ ಗಿರಿಜನ ಹಾಡಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಆದಿವಾಸಿಗಳ ಮುಖಂಡ ಪಿ.ಸಿ.ರಾಮು ಮಾತನಾಡಿ ಅರಣ್ಯ ಇಲಾಖೆಯು ಆದಿವಾಸಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಹಿಂದೆಯೇ ಕ್ರಮಗಳನ್ನು ಕೈಗೊಳ್ಳಬೇಕು. ರೈಲ್ವೆ ಬ್ಯಾರಿಕೇಡ್
(ಮೊದಲ ಪುಟದಿಂದ) ಅಳವಡಿಸುವ ವೇಳೆ ಗಿರಿಜನರ ವಿಶ್ವಾಸ ಪಡೆಯದೆ ಬ್ಯಾರಿಕೇಡ್ ನಿರ್ಮಾಣಕ್ಕೆ ಇಲಾಖೆಯು ಮುಂದಾಗಿತ್ತು. ಇದರಿಂದಾಗಿ ಕೆಲವು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಗಿರಿಜನರನ್ನು ಹೊರತುಪಡಿಸಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಮುಂದುವರೆಸಬೇಕು ಎಂದು ಹಿರಿಯ ಅಧಿಕಾರಿಗಳ ಗಮನ ಸೆಳೆದರು.
ಮರಪಾಲ ಸಮೀಪದ ಆಯಿರಸುಳಿ ಹಾಡಿಯ ಗಿರಿಜನರು ವಾಸಿಸುತ್ತಿರುವ ಸ್ಥಳವನ್ನು ಸೇರಿಸಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣವಾಗಿರುವುದರಿಂದ ಕಾಡಾನೆಗಳು ಅರಣ್ಯದಿಂದ ಹಾಡಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಾಡಿ ನಿವಾಸಿಗಳನ್ನು ಬೇರ್ಪಡಿಸಿ ಸುಮಾರು ೧.೫ ಕಿ.ಮೀ. ಸುತ್ತಳತೆಯಲ್ಲಿ ಬ್ಯಾರಿಕೇಡ್ ಅನ್ನು ಅಳವಡಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸ್ಥಳದಲ್ಲಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಸಿಸಿಎಫ್ ಮೂರ್ತಿಯವರಿಗೆ ಸಲಹೆ ನೀಡಿದರು.
ಹಿರಿಯ ಅರಣ್ಯ ಅಧಿಕಾರಿಗಳು ಹಾಗೂ ರೈತ ಮುಖಂಡರು, ಆದಿವಾಸಿ ಮುಖಂಡರು ಹಾಡಿಯ ಸಂಪೂರ್ಣ ಮಾಹಿತಿಯನ್ನು ಪರಿಶೀಲನೆ ನಡೆಸಿದರು. ಸುಮಾರು ೧.೫ ಕಿ.ಮೀ. ರೈಲ್ವೆ ಬ್ಯಾರಿಕೇಡನ್ನು ಅಳವಡಿಸಿದ್ದಲ್ಲಿ ಸಮಸ್ಯೆಗೆ ಪರಿಹಾರ ಲಭಿಸುವ ಬಗ್ಗೆ ಚರ್ಚೆಗಳು ನಡೆದವು ಮುಂದಿನ ಹಂತದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಸಿಎಫ್ ಮೂರ್ತಿ ಈ ವೇಳೆ ವ್ಯಕ್ತಪಡಿಸಿದರು.
ಕಾಡಾನೆಗಳು ರೈತರ ತೋಟಗಳಿಗೆ ನುಸಳದಂತೆ ಪ್ರಸ್ತುತ ತಿತಿಮತಿ ಭಾಗದಲ್ಲಿ ಅಳವಡಿಸಿರುವ ರೈಲ್ವೆ ಬ್ಯಾರಿಕೇಡ್ ಹಲವೆಡೆ ಆನೆಗಳ ನುಸುಳುವಿಕೆಯಿಂದ ಮುರಿದು ಬಿದ್ದಿದೆ. ಅನೇಕ ಕಡೆಗಳಲ್ಲಿ ರೈಲ್ವೆ ಬ್ಯಾರಿಕೇಡ್ಗೆ ಅಳವಡಿಸಿರುವ ಬೋಲ್ಟ್ಗಳು ತೀವ್ರ ಸಡಿಲಗೊಂಡಿವೆ. ಅತೀ ತೇವಾಂಶ ಪ್ರದೇಶವಾದ ಕುಂಞರಾಮ ಕಟ್ಟೆಯ ಸಮೀಪ ನಿರ್ಮಿಸಲಾಗಿರುವ ಪಿಲ್ಲರ್ ತೀವ್ರ ಹಾಳಾಗಿದೆ. ಈ ಜಾಗದಲ್ಲಿ ಗುಣಮಟ್ಟದಿಂದ ಮತ್ತೊಂದು ಪಿಲ್ಲರ್ ಅಳವಡಿಸಬೇಕು ಇದರಿಂದ ರೈತರ ತೋಟಕ್ಕೆ ಬರುವ ಕಾಡಾನೆಗಳನ್ನು ತಡೆಗಟ್ಟಬಹುದು ಎಂದು ಚೆಕ್ಕೇರ ಬೆಳ್ಯಪ್ಪ ಈ ಸಂದರ್ಭ ತಿಳಿಸಿದರು.
ಭೇಟಿಯ ಸಂದರ್ಭ ತಿತಿಮತಿ ಭಾಗದ ರೈತ ಸಂಘದ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಸೇರಿದಂತೆ ರೈತ ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ, ಆದಿವಾಸಿ ಮುಖಂಡರಾದ ಸಿದ್ದಪ್ಪ, ಚುಬ್ರು, ರಾಮು, ಮಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಹರ್ಷಕುಮಾರ್ ಚಿಕ್ಕ ನರಗುಂದ, ವೀರಾಜಪೇಟೆ ಡಿಸಿಎಫ್ ಶಿವರಾಮ್ ಬಾಬು, ಹುಣಸೂರು ಎಸಿಎಫ್ ದಯಾನಂದ್, ವೀರಾಜಪೇಟೆ ಎಸಿಎಫ್ ನೆಹರು, ನಾಗರಹೊಳೆ ಎಸಿಎಫ್ ಗೋಪಾಲ್, ತಿತಿಮತಿ ಎಸಿಎಫ್ ಹೆಚ್.ಸೀಮಾ, ಮಡಿಕೇರಿ ಎಸಿಎಫ್ ಶ್ರೀನಿವಾಸ್ ನಾಯಕ್, ಆರ್ಎಫ್ಓಗಳಾದ ದಿಲೀಪ್ ಕುಮಾರ್, ಗಿರೀಶ್, ಅಶೋಕ್ ಪಿ. ಹುನಗುಂದ್, ಮಹಮ್ಮದ್ ಜಸೀನ್, ಶಂಕರ್, ರಂಗಸ್ವಾಮಿ ಸೇರಿದಂತೆ ಇನ್ನಿತರ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.
- ಹೆಚ್.ಕೆ. ಜಗದೀಶ್