ಮಡಿಕೇರಿ, ಡಿ. ೧: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಕೊಡಗು ಜಿಲ್ಲಾ ಘಟಕ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಅಂಗನವಾಡಿ ನೌಕರರು ತಮ್ಮ ಬೇಡಿಕೆ ಈಡೇರಿಸಬೇಕೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅದಾದ ಬಳಿಕ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬೇಡಿಕೆಗಳು
ನ್ಯಾಯಾಲಯದ ಆದೇಶದ ಅನುಸಾರ ನೌಕರರಿಗೆ ‘ಗ್ರಾö್ಯಜ್ಯುಟಿ’ ಪಾವತಿಸಬೇಕು, ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕು, ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾವಣೆ ಮಾಡಬೇಕು, ದಾಖಲೆಯ ನಿರ್ವಹಣೆಯನ್ನು ಸಡಿಲಗೊಳಿಸಬೇಕು, ತಪ್ಪು ಮಾಡಿದ ಆರೋಪಗಳು ಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳುವ ಮುನ್ನ ವಿಚಾರಣೆ ನಡೆಸಬೇಕು, ವೇತನ ಸಕಾಲಕ್ಕೆ ಪಾವತಿಸಬೇಕು, ಮುಂಬಡ್ತಿ ನೀಡದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಈ ಸಂದರ್ಭ ಸಂಘಟನೆ ಪ್ರಮುಖರಾದ ಭಾಗೀರಥಿ, ಎಸ್.ಎನ್. ಸಾವಿತ್ರಿ, ವನಜಾಕ್ಷಿ, ಜಮುನಾ, ವಿ.ಎಸ್. ಸುಮಿತ್ರ, ನಳಿನಾಕ್ಷಿ, ರಾಜೇಶ್ವರಿ, ಎ.ವಿ. ಶೀಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.