*ಗೋಣಿಕೊಪ್ಪ, ಡಿ. ೧: ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಡಿಸೆಂಬರ್ ೪ ರಂದು ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ಚೆಪ್ಪುಡೀರ ಪ್ರದೀಪ್ ಪೂವಯ್ಯ ತಿಳಿಸಿದರು.
೫೦ ಮೀಟರ್ ದೂರದಲ್ಲಿರುವ ತೆಂಗಿನ ಕಾಯಿಗೆ ೦.೨೨, ೩೦ ಮೀ. ದೂರದ ಕಾಯಿಗೆ ೧೨ ಬೋರ್ ಕೋವಿಯಲ್ಲಿ ಸ್ಪರ್ಧೆ, ೧೮ ಮೀ. ದೂರದ ಮೊಟ್ಟೆಗೆ ಏರ್‌ಗನ್‌ನಲ್ಲಿ ಗುಂಡು ಹೊಡೆಯುವ ಸ್ಪರ್ಧೆ, ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಮೂರು ವಿಭಾಗದ ೩ ಸ್ಥಾನಕ್ಕೆ ನಗದು ಮತ್ತು ಟ್ರೋಫಿ ಬಹುಮಾನವಾಗಿ ನೀಡಲಾಗುವುದು. ಒಟ್ಟು ೧.೨೦ ಲಕ್ಷ ರೂ. ಬಹುಮಾನ ನೀಡಲಾಗುವುದು. ಸುಮಾರು ೨೫೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅನ್ನದಾನ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು. ೯೯೦೨೬೧೨೩೩೩, ೬೩೬೨೩೬೧೨೧೯ ಸಂಖ್ಯೆ ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್, ಉಪಾಧ್ಯಕ್ಷ ಆಪಟ್ಟೀರ ಪ್ರದೀಪ್, ಸದಸ್ಯರಾದ ಚೆಪ್ಪುಡೀರ ಬೆಳ್ಯಪ್ಪ, ವಿನಯ್ ಅಯ್ಯಪ್ಪ ಇದ್ದರು.