ಮಡಿಕೇರಿ, ಡಿ. ೧: ಪ್ರಕೃತಿಯ ಮುನಿಸಿಗೆ ಬೆಟ್ಟ-ಗುಡ್ಡಗಳೇ ಜರಿದು ಬಂದು ಮನೆ- ಮಠಗಳು ಮಣ್ಣುಪಾಲಾದರೆ., ನದಿ ನೀರು ಉಕ್ಕಿ ಹರಿದು ಜೀವನವೇ ಕೊಚ್ಚಿ ಹೋಗಿದೆ., ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದವರ ರಕ್ಷಣೆಗೆ ಬಂದ ಸರಕಾರ ಸಂತ್ರಸ್ತರಿಗೆ ಸೂರು ನೀಡಲು ಮುಂದಾಯಿತು. ಆದರೆ., ವರ್ಷ ನಾಲ್ಕು ಕಳೆದರೂ ತಲೆ ಮೇಲೆ ಕೈ ಹೊತ್ತು ಕುಳಿತವರ ತಲೆ ಮೇಲೆ ಇನ್ನೂ ಕೂಡ ಸೂರಿನ ನೆರಳು ಹಾಸಲಾಗಿಲ್ಲ., ಮನೆಗಳು ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಇನ್ನೂ ಕೂಡ ಸಂತ್ರಸ್ತರಿಗೆ ಗೂಡು ಸೇರಲಾಗಿಲ್ಲ., ಆಡಳಿತ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮನೆಗಳು ಕಾಡು ಪಾಲಾಗಿದ್ದರೆ, ಇತ್ತ ಇನ್ನೊಂದೆಡೆ ಹಂಚಿಕೆಗೆ ಸಿದ್ಧವಾಗಿರುವ ಬಡಾವಣೆಯಲ್ಲಿ ಅವ್ಯವಸ್ಥೆಗಳು ತಾಂಡವವಾಡುತ್ತಿವೆ.., ಮೊದಲೇ ನೊಂದಿರುವವರ ಆಸೆಯ ಕನಸುಗಳು ಕನಸಾಗಿಯೇ ಉಳಿದು ಹೋಗಿದೆ..!

೨೦೧೮ರ ಆ ಪ್ರಕೃತಿ ವಿಕೋಪದ ಚಿತ್ರಣ ಯಾರಿಂದಲೂ ಮರೆಯ ಲಾಗದು., ಅಂದು ಮನೆ- ಮಠ ಕಳೆದುಕೊಂಡವರು ಇಂದಿಗೂ ಸಂತ್ರಸ್ತರಾಗಿಯೇ ಉಳಿದಿರುವದು ಮತ್ತೊಂದು ದುರಂತವೆAದೇ ಹೇಳಬಹುದು. ಸಂತ್ರಸ್ತರಾದವರಿಗೆ ಅಂದಿನ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ತಲಾ ರೂ. ೧೦ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ತೀರ್ಮಾನ ಕೈಗೊಂಡು ಅನುದಾನ ಕೂಡ ಬಿಡುಗಡೆಗೊಳಿಸಿದ್ದರು. ೨೦೧೯ರಲ್ಲಿ ಮನೆ ನಿರ್ಮಾಣ ಕಾಮಗಾರಿ ಆರಂಭಗೊAಡಿತು. ಸರಕಾರ ಅಂಗ ಸಂಸ್ಥೆಯಾದ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಾಮಗಾರಿಯ ಗುತ್ತಿಗೆ ನೀಡಲಾಯಿತು. ಹಾಗೋ ಹೇಗೋ ಕುಂಟುತ್ತಾ ಮದೆ ಪಂಚಾಯಿತಿಯ ಗೋಳಿಕಟ್ಟೆ ಬಳಿ, ಕೆ. ನಿಡುಗಣೆಯ ಕರ್ಣಂಗೇರಿಯಲ್ಲಿ ಹಾಗೂ ಮಾದಾಪುರ ಪಂಚಾಯಿತಿಯ ಜಂಬೂರು ಬಾಣೆಯಲ್ಲಿ ಒಂದಷ್ಟು ಮನೆಗಳನ್ನು ಸಂತ್ರಸ್ತರಿಗೆ ಹಂಚಲಾಯಿತು. ಇದರೊಂದಿಗೆ ಗಾಳಿಬೀಡು ಗ್ರಾಮ ಪಂಚಾಯಿತಿಯ ಕೋಳಿಗೂಡು ಎಂಬಲ್ಲಿ ಹಾಗೂ ಕೆ.ನಿಡುಗಣೆ ಪಂಚಾಯಿತಿಯ ಅಬ್ಬಿಫಾಲ್ಸ್ ರಸ್ತೆಯಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಕೂಡ ಸಂತ್ರಸ್ತರಿಗೆ ಲಭ್ಯವಾಗಿಲ್ಲ ಎಂಬದೇ ಬೇಸರದ ಸಂಗತಿ..!

ಮನೆಗಳು ಕಾಡುಪಾಲು..!

ಗಾಳಿಬೀಡು ಪಂಚಾಯಿತಿಯ ಕೋಳಿಗೂಡಿನಲ್ಲಿ ನಿರ್ಮಾಣವಾಗಿ ರುವ ೧೬೦ ಮನೆಗಳ ಹಕ್ಕುಪತ್ರಗಳನ್ನು ತರಾತುರಿಯಲ್ಲಿ ಕಳೆದ ಜನವರಿಯಲ್ಲಿ ಉಸ್ತುವಾರಿ

(ಮೊದಲ ಪುಟದಿಂದ) ಸಚಿವರ ಸಮ್ಮುಖದಲ್ಲಿ ವಿತರಣೆ ಮಾಡಲಾಗಿದೆ. ಆದರೆ ಆ ಸಂದರ್ಭದಲ್ಲಿ ಶೇ. ೫೦ ರಷ್ಟು ಕೂಡ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಅದಾದ ಬಳಿಕ ಕೆಲಸ ಕಾರ್ಯಗಳನ್ನು ಪೂರೈಸಲಾಗಿದೆ. ಆದರೆ ಇದುವರೆಗೂ ಯಾರಿಗೂ ಮನೆಯ ಬೀಗದ ಕೀಲಿ ಕೈ ನೀಡಿರುವದಿಲ್ಲ. ಕಳೆದ ಮೂರು ತಿಂಗಳಿAದ ಕೆಲವರು ಸಂಬAಧಿಸಿದ ಅಧಿಕಾರಿಗಳಿಂದ ಕೀಲಿ ಕೈ ಕೇಳಿ ಪಡೆದುಕೊಂಡು ತಮಗೆ ಸಿಕ್ಕಿದ ಮನೆಗಳಿಗೆ ಸೇರಿಕೊಂಡಿದ್ದಾರೆ. ೧೬೦ ಮನೆಗಳ ಪೈಕಿ ೪-೫ ಮನೆಗಳಲ್ಲಿ ಮಾತ್ರ ವಾಸವಿದ್ದಾರೆ. ಇನ್ನುಳಿದ ಮನೆಗಳೆಲ್ಲವೂ ಕಾಡುಪಾಲಾಗಿದೆ. ಮೊದಲೇ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಬಡಾವಣೆಯಲ್ಲಿ ಇನ್ನೂ ಕೂಡ ಯಾವದೇ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಯಾರೂ ಕೂಡ ಮನೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ನೀರು-ಕರೆಂಟ್ ಇಲ್ಲ..!

ಮನೆಗಳಿಗೆ ತೆರಳಲು ದಾರಿಯೇ ಇಲ್ಲದ ಬಡಾವಣೆಯಲ್ಲಿ ಹತ್ತನೇ ಮನೆಯ ವ್ಯಕ್ತಿ ತಲಪಬೇಕಾದರೆ ಹತ್ತು ಮನೆಯ ಎದುರಿನ ಮೆಟ್ಟಿಲುಗಳನ್ನು ಏರಿ ಸಾಗಬೇಕು. ಆ ದಾರಿಯುದ್ದಕ್ಕೂ ವಿದ್ಯುತ್ ಬೆಳಕು ಕೂಡ ಇಲ್ಲ., ಇನ್ನೊಬ್ಬರ ಮನೆಯ ಎದುರು ಸಾಗುವಾಗ ಏನಾದರೂ ಕಿರಿ ಕಿರಿಯಾದರೆ ಜಗಳ ಖಂಡಿತಾ.., ಹೀಗಿರುವಾಗ ಮನೆಗಳ ವಿದ್ಯುತ್ ದೀಪಗಳನ್ನು ಅಳವಡಿಸಿಲ್ಲ. ಬಡಾವಣೆಗಾಗಿ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆಯಾದರೂ ಯಾರ ಮನೆಗೂ ನೀರು ಸರಬರಾಜಾಗುತ್ತಿಲ್ಲ. ಟ್ಯಾಂಕ್‌ನ ಕೆಳಗಡೆ ಪೈಪ್ ಒಡೆದು ಹೋಗಿ ನೀರು ನೆಲಮಾಳಿಯಲ್ಲಿ ಹರಿದು ಹೋಗುತ್ತಿದೆ. ಆದರೂ ಸಂಬAಧಿಸಿದವರು ಗಮನ ಹರಿಸದಿರುವದು ಸಂತ್ರಸ್ತರ ಸಂಕಷ್ಟಕ್ಕೆ ಮತ್ತೊಂದು ಸಾಕ್ಷಿ..!

ದಾರಿಯೇ ದೊಡ್ಡ ಸಮಸ್ಯೆ..!

ಕೋಳಿಗೂಡಿನಲ್ಲಿ ಒಂದಷ್ಟು ಕುಟುಂಬಗಳು ನೆಲೆಸಿವೆ., ಇದರೊಂದಿಗೆ ಇದೀಗ ಸಂತ್ರಸ್ತರಿಗೂ ಮನೆ ಮಾಡಲಾಗಿದೆ. ಆದರೆ., ಅಲ್ಲಿಗೆ ಹೋಗಬೇಕೆಂದರೆ ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡೇ ಹೋಗಬೇಕು..! ಆ ಪರಿಯಲ್ಲಿದೆ ಆ ದಾರಿ..! ಒಂದಿಷ್ಟು ದೂರ ಕಾಂಕ್ರಿಟ್ ರಸ್ತೆ ಇದೆ, ಇನ್ನುಳಿದ ರಸ್ತೆಯಲ್ಲಿ ನಡೆದಾಡುವದು ಕೂಡ ಕಷ್ಟಕರವೇ,., ಶಾಲಾ-ಕಾಲೇಜು ಮಕ್ಕಳು, ದ್ವಿಚಕ್ರ ವಾಹನ ಸವಾರರಿಗಂತೂ ಈ ಮಾರ್ಗ ದುಸ್ಸಾಹಸದ ಹಾದಿಯೇ ಸರಿ. ಗ್ರಾಮ ಪಂಚಾಯಿತಿ ಇತ್ತ ತಿರುಗಿಯೂ ನೋಡುತ್ತಿಲ್ಲವೆಂಬದು ಅಲ್ಲಿರುವ ನಿವಾಸಿಗಳ ಅಳಲು..!

ಕೆ.ನಿಡುಗಣೆಯಲ್ಲಿ..!ಇನ್ನೂ ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿಗೆ ಸೇರಿದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಬಳಿ ೭೬ ಸಂತ್ರಸ್ತರಿಗಾಗಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇದುವರೆಗೆ ಬೇರೆಡೆಗಳಲ್ಲಿ ನೀಡಿರುವ ಮನೆಗಳು., ವ್ಯವಸ್ಥೆಗಳು ಒಂದಿಷ್ಟಾದರೂ ಪರವಾಗಿಲ್ಲ ಎನ್ನಬಹುದು. ಇಲ್ಲಿ ನಿರ್ಮಾಣ ಮಾಡಲಾಗಿರುವ ಮನೆಗಳನ್ನು ನೋಡಿದರೆ ‘ಮದುವೆ ಮನೆಯಲ್ಲಿ ಚೆನ್ನಾಗಿ ಊಟ ಮಾಡಿ., ಎಲೆ, ಅಡಿಕೆ ಜಗಿದು ಉಗಿದಂತಿದೆ..’ ಯಾಕೆಂದರೆ ರಾಜೀವ್ ಗಾಂಧಿ ಸಂಸ್ಥೆಯ ಕೊನೆಯ ಕಾಮಗಾರಿ ಇದಾಗಿದೆ. ಕಾಮಗಾರಿ ಮುಗಿಯುವ ಮುನ್ನವೇ ಸಂಬAಧಿಸಿದ ಇಂಜಿನಿಯರ್‌ಗಳು ಊರು ಬಿಟ್ಟಾಗಿದೆ. ಇರುವ ನಾಲ್ಕು ಮಂದಿ ಕೆಲಸಗಾರರೊಂದಿಗೆ ಪಶ್ಚಿಮ ಬಂಗಾಳದ ಮೇಸ್ತಿçಯೊಬ್ಬರು ಮಾತ್ರ ಇದ್ದಾರೆ. ತಾ. ೨ ರಂದು (ಇಂದು) ಮನೆಗಳ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ಇರುವದರಿಂದ ಮನೆಗಳ ಬಳಿ ಬೆಳೆದಿದ್ದ ಕಾಡು ಕಡಿಸುವದು, ಗುಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವದು ಕಂಡು ಬಂದಿತು.

ಬೇಕಾದರೆ ಮಾಡಿಕೊಳ್ಳಲಿ..!

ಎಲ್ಲ ಕಡೆಗಳಲ್ಲೂ ಕನಿಷ್ಟ ಮನೆಗಳ ಎದುರು ತಡೆಗೋಡೆ, ಎತ್ತರದ ಪ್ರದೇಶಗಳಲ್ಲಿ ಕಬ್ಬಿಣದ ಸರಳುಗಳು, ಇಂಟರ್‌ಲಾಕ್ ಎಲ್ಲವನ್ನೂ ಅಳವಡಿಸಲಾಗಿದೆ. ಆದರೆ, ಕೆ.ನಿಡುಗಣೆಯಲ್ಲಿ ಮನೆಗಳ ನಿರ್ಮಾಣವೇ ಸರಿಯಾಗಿಲ್ಲ. ಗೋಡೆಗಳೆಲ್ಲ ತೇಪೆ ಹಾಕಿದಂತಿವೆ. ಕಿಟಕಿಗಳು ಈಗಲೇ ಕಿತ್ತು ಬರುವಂತಿವೆ. ಪೈಪ್‌ಗಳು ಅಲ್ಲಲ್ಲಿ ಒಡೆದು ಹೋಗಿವೆ. ಎತ್ತರದ ಜಾಗದಲ್ಲಿರುವ ಮನೆಗಳಲ್ಲಿ ಮಕ್ಕಳು, ವಯೋ ವೃದ್ಧರಿದ್ದರೆ ರಸ್ತೆಗೆ ಬೀಳುವ ಅಪಾಯ ಕಂಡಿತಾ. ಈ ಬಗ್ಗೆ ಕೇಳಿದಾಗ ಅಲ್ಲಿದ್ದ ಮೇಲ್ವಿಚಾರಕ ಹೇಳಿದ್ದು ಹೀಗೆ., ‘ನಮಗೆ ಇಷ್ಟೇ ಮಾಡೋಕೆ ಹೇಳಿದು., ಇನ್ನು ಬೇಕಾದರೆ ಮನೆಗೆ ಬಂದವರು ಮಾಡಿಕೊಳ್ತಾರೆ..’

ಏಕೆ ಈ ಅನಾದರ..?

ಪ್ರಕೃತಿಯ ಮುನಿಸಿಗೆ ಪಾಪದ ಜನರು ಸಂತ್ರಸ್ತರಾದರೇ ಹೊರತು ಯಾರೂ ಕೂಡ ಬಯಸಿ ಬಂದುದಲ್ಲ.., ಸಾಮಾನ್ಯ ಪ್ರಜೆಯ., ಅದರಲ್ಲೂ ನೊಂದವರ ಕಣ್ಣೀರೊರೆಸುವದು ಸರಕಾರ, ಆಡಳಿತ., ಅಧಿಕಾರಿಗಳ ಕರ್ತವ್ಯವೂ ಹೌದು., ಅಂತಹದರಲ್ಲಿ ಸರ್ವಸ್ವವನ್ನೇ ಕಳೆದುಕೊಂಡು ಸಂತ್ರಸ್ತರಾದವರ ಬಾಳಿನಲ್ಲಿ ಮತ್ತೊಂದು ನೋವಿನ ಬರೆ ಎಳೆಯುವದು ಎಷ್ಟು ಸರಿ ಎಂಬದು ನೊಂದವರ ಪ್ರಶ್ನೆ..!?