ವರದಿ : ವಾಸು ಎ.ಎನ್ ಸಿದ್ದಾಪುರ, ಡಿ. ೧ : ನೆಲ್ಯಹುದಿಕೇರಿ, ಅಭ್ಯತ್‌ಮಂಗಲ, ವಾಲ್ನೂರು ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಸಜ್ಜಾಗಿದ್ದಾರೆ. ನೆಲ್ಯಹುದಿಕೇರಿ ಅಭ್ಯತ್‌ಮಂಗಲ, ವಾಲ್ನೂರು-ತ್ಯಾಗತ್ತೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಾ ಮನೆಗಳ ಹಾಗೂ ಮಾನವನ ಮೇಲೆ ದಾಳಿ ನಡೆಸುತ್ತಿರುವ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲು ಈಗಾಗಲೇ ಸರ್ಕಾರದ ವತಿಯಿಂದ ಆದೇಶ ಲಭಿಸಿದೆ.

ಈ ಹಿನ್ನೆಲೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಕುಶಾಲನಗರ ವಲಯ ಅರಣ್ಯ ಇಲಾಖಾಧಿಕಾರಿ ಶಿವರಾಂರವರ ನೇತೃತ್ವದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದೀಗ ಒಂಟಿ ಸಲಗವು ಸುತ್ತಾಡುತ್ತಿರುವ ಕಾಫಿ ತೋಟಗಳಲ್ಲಿ ಸಲಗದ ಚಲನವಲನ ಕಂಡು ಹಿಡಿಯಲು ಶ್ರಮಪಡುತ್ತಿದ್ದಾರೆ. ಆದರೆ ಒಂಟಿ ಸಲಗವು ದಿನನಿತ್ಯ ಸ್ಥಳ ಬದಲಾವಣೆ ಮಾಡುತ್ತಿರುವುದರಿಂದ ಸುಳಿವು ದೊರೆತಿಲ್ಲ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೆರೆ ಹಿಡಿಯಲು ಗುರುತಿಸಿರುವ ಪುಂಡಾನೆಯು ನೆಲ್ಯಹುದಿಕೇರಿ ಹಾಗೂ ವಾಲ್ನೂರು ತ್ಯಾಗತ್ತೂರು ಗ್ರಾಮಗಳಲ್ಲಿ ಮನೆಯ ಎದುರಿನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದ ಘಟನೆಗಳು ನಡೆದಿತ್ತು. ಅಲ್ಲದೇ ಕೃಷಿ ಫಸಲುಗಳನ್ನು ಹಾಗೂ ಭತ್ತದ ಬೆಳೆಗಳನ್ನು ತಿಂದು ತುಳಿದು ನಾಶಗೊಳಿಸುತ್ತ ಜನವಸತಿ ಪ್ರದೇಶಗಳಲ್ಲಿ ಕಂಡು ಬರುತ್ತ ಗ್ರಾಮಸ್ಥರಿಗೆ ಆತಂಕ ಸೃಷ್ಠಿಸುತ್ತಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಹಲವಾರು ಬಾರಿ ದೂರು ನೀಡಿದ್ದರು. ಏತನ್ಮಧ್ಯೆ ಸರ್ಕಾರವು ಕೂಡ ಕಾಡಾನೆಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಟಾಸ್ಕ್ಪೋರ್ಸ್ ರಚನೆ ಮಾಡಿ ಆದೇಶ ಹೊರಡಿಸಿತು. ಇದೀಗ ಟಾಸ್ಕ್ಪೋರ್ಸ್ನ ನೇತೃತ್ವ ವಹಿಸಿರುವ ಮಡಿಕೇರಿ ವಿಭಾಗ ಡಿ.ಸಿ.ಎಫ್ ಪೂವಯ್ಯರವರ ಮಾರ್ಗದರ್ಶನದಲ್ಲಿ ಒಂಟಿಸಲಗವನ್ನು

(ಮೊದಲ ಪುಟದಿಂದ) ಸೆರೆ ಹಿಡಿಯಲು ಅರಣ್ಯ ಇಲಾಖೆಯು ಸಿದ್ಧತೆ ಕೈಗೊಂಡಿದೆ. ಪುಂಡಾನೆಯ ಚಲನವಲನ ಕಂಡು ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿಗಳು ಕಾಫಿ ತೋಟಗಳಲ್ಲಿ ಸುತ್ತಾಡುತ್ತಿದ್ದಾರೆ. ದುಬಾರೆಯ ಸಾಕಾನೆ ಶಿಬಿರಗಳಿಂದ ಆನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅನುಭವ ಹೊಂದಿರುವ ಸಾಕಾನೆಗಳ ನೆರವಿನಿಂದ ಪುಂಡಾನೆಯನ್ನು ಸೆರೆ ಹಿಡಿಯಲು ಮುಂದಿನವಾರ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದು ಬಂದಿದೆ. ಸಾಕಷ್ಟು ಬಾರಿ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಹಟ್ಟಲು ಪ್ರಯತ್ನಿಸಿದರೂ ಕೂಡ ಅರಣ್ಯ ಇಲಾಖಾಧಿಕಾರಿಗಳನ್ನು ಬೆನ್ನಟ್ಟಿದ್ದ ಘಟನೆಗಳು ನಡೆದಿತ್ತು. ಅಲ್ಲದೇ ಕಾಡಾನೆಗಳು ಕಾಫಿ ತೋಟಗಳನ್ನು ಬಿಟ್ಟು ಕದಲುತ್ತಿರಲಿಲ್ಲ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆಯಿಟ್ಟು ತೋಟದಲ್ಲೇ ಇರುತ್ತಿದ್ದವು. ಆದರೆ ಕೇವಲ ಒಂದು ಕಾಡಾನೆಯನ್ನು ಸೆರೆ ಹಿಡಿದರೆ ಯಾವುದೇ ಪ್ರಯೋಜನವಿಲ್ಲವೆಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.