ಸೋಮವಾರಪೇಟೆ, ನ. ೩೦: ಮನೆಯಲ್ಲಿ ನೇಣು ಬಿಗಿದುಕೊಂಡು ವಿವಾಹಿತ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಕಾರೆಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕಾರೆಕೊಪ್ಪ ಗ್ರಾಮ ನಿವಾಸಿ ಜನಾರ್ಧನ್ ಅವರ ಪುತ್ರ ಹೇಮಂತ್ (೩೮) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಕಳೆದ ೧೦ ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಹೇಮಂತ್ ಅವರು ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಇಂದು ಪತ್ನಿ ನಳಿನಾಕ್ಷಿ ಅವರು ಕೂಲಿ ಕೆಲಸಕ್ಕೆ ತೆರಳಿದ್ದು, ಮಕ್ಕಳಾದ ೧೧ ವರ್ಷ ಪ್ರಾಯದ ಮೋನಿಶ್, ೯ ವರ್ಷದ ಮೌಲ್ಯ ಅವರುಗಳು ಶಾಲೆಗೆ ತೆರಳಿದ್ದರು.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮುಂಭಾಗದ ಕೊಠಡಿಯಲ್ಲಿ ಪತ್ನಿಯ ಸೀರೆಯಿಂದ ಹೇಮಂತ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಜೆ ೫ ಗಂಟೆ ಸುಮಾರಿಗೆ ಪುತ್ರ ಮೋನಿಶ್ ಮನೆಗೆ ಆಗಮಿಸಿದ ಸಂದರ್ಭ ಘಟನೆ ಕಂಡುಬAದಿದ್ದು, ತಕ್ಷಣ ಚಾಕುವಿನಿಂದ ಸೀರೆಯನ್ನು ತುಂಡರಿಸಿ ಬದುಕಿಸುವ ಪ್ರಯತ್ನ ನಡೆಸಿದ್ದಾನೆ. ಅಷ್ಟರಲ್ಲಾಗಲೇ ಹೇಮಂತ್ ಅವರ ಪ್ರಾಣಪಕ್ಷಿ ಹಾರಿತ್ತು. ಸ್ಥಳೀಯರು ಆಗಮಿಸಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಂತ್ಯಕ್ರಿಯೆ ಡಿ. ೧ ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.