ನಾಪೋಕ್ಲು, ನ. ೩೦: ರಾಮ ಟ್ರಸ್ಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿವಂಗತ ಮೇಕೇರಿರ ಕಾರ್ಯಪ್ಪ ಸ್ಮರಣಾರ್ಥ ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶನಿವಾರ ಆಯೋಜಿಸಲಾದ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕಳತ್ಮಾಡಿನ ಲಯನ್ಸ್ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿದ್ದು ಮಡಿಕೇರಿಯ ಜನರಲ್ ತಿಮ್ಮಯ್ಯ, ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಹಾಗೂ ಗಾಳಿಬೀಡಿನ ಜವಹರ ನೆಹರು ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಕ್ರಮವಾಗಿ ತೃತೀಯ, ಚತುರ್ಥ ಹಾಗೂ ಐದನೇ ಸ್ಥಾನ ಪಡೆದವು. ಸ್ಪರ್ಧೆಯಲ್ಲಿ ಜಿಲ್ಲೆಯ ೧೯ ತಂಡಗಳು ಪಾಲ್ಗೊಂಡಿದ್ದವು.

ಸಮಾರೋಪ ಸಮಾರಂಭದಲ್ಲಿ ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಬೋಪ್ಪಂಡ ಜಾಲಿ ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಸಂಸ್ಥೆಯ ನಿರ್ದೇಶಕ ನಿವೃತ್ತ ಪ್ರೊ. ಕಲ್ಯಾಟಂಡ ಪೂಣಚ್ಚ, ಬೊಳ್ಳಚೆಟ್ಟೀರ ಸುರೇಶ್, ನಾಯಕಂಡ ದೀಪು ಚಂಗಪ್ಪ, ಬಿದ್ದಾಟಂಡ ಪಾಪ ಮುದ್ದಯ್ಯ, ಅಪ್ಪಾರಂಡ ಅಪ್ಪಯ್ಯ, ಎಂ.ಎಸ್. ಸುಬ್ರಮಣ್ಯ ಭಟ್, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಕಲ್ಯಾಟಂಡ ಶಾರದಾ ಅಪ್ಪಣ್ಣ, ವಿವಿಧ ಶಾಲೆಯ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು. ರಸಪ್ರಶ್ನೆ ಕಾರ್ಯಕ್ರಮವನ್ನು ಬಲ್ಲಮಾವಟ್ಟಿ ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ, ಶಿಕ್ಷಕರಾದ ಸಿ.ಎಸ್. ಸುರೇಶ್ ಮತ್ತು ಶಿಕ್ಷಕ ಅಯ್ಯಪ್ಪ ನಡೆಸಿಕೊಟ್ಟರು.