ಮಡಿಕೇರಿ, ನ. ೩೦: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಬೇಕು ಮತ್ತು ತಾವೇ ಅಭ್ಯರ್ಥಿಗಳೆಂದು ಘೋಷಿಸಿ ಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕೆಂದು ಜಾತ್ಯತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ನರಸಿಂಹಮೂರ್ತಿ ತಿಳಿಸಿದ್ದಾರೆ.

ನಗರದಲ್ಲಿ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ನೋಡಿಕೊಳ್ಳಬೇಕು. ವರಿಷ್ಠರು ಘೋಷಿಸುವ ಅಭ್ಯರ್ಥಿಯೇ ಅಂತಿಮವಾಗಲಿದ್ದು, ಯಾರೂ ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಪ್ರಚಾರಕ್ಕಿಳಿಯಬಾರದೆಂದು ತಿಳಿಸಿದರು.

ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಜನಪರ ಸೇವೆ ಮತ್ತು ರೈತರ ಮೇಲಿನ ಕಾಳಜಿಯಿಂದ ಕುಮಾರ ಸ್ವಾಮಿಯವರೇ ಮತ್ತೆ ಮುಖ್ಯಮಂತ್ರಿ ಯಾಗಬೇಕೆನ್ನುವ ಜನಾಭಿಪ್ರಾಯವಿದೆ. ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷರ ಬದಲಾವಣೆಯ ಮಾತೇ ಇಲ್ಲ, ಈ ವಿಚಾರದಲ್ಲಿ ಯಾರೂ ಗೊಂದಲ ಸೃಷ್ಟಿಸಬಾರದು ಎಂದು ನರಸಿಂಹಮೂರ್ತಿ ಹೇಳಿದರು.

ಮತ್ತೊಬ್ಬ ಉಸ್ತುವಾರಿ ಉಮೇಶ್ ಗೌಡ ಮಾತನಾಡಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರ ನೇತೃತ್ವದಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ೨೦- ೨೫ ವರ್ಷಗಳಿಂದ ಈ ಜಿಲ್ಲೆಯನ್ನು ಪ್ರತಿನಿಧಿಸಿದವರು ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಅವಿರತ ಶ್ರಮ ವಹಿಸುವಂತೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಜಿಲ್ಲೆಯ ಜನ ಬೇಸತ್ತಿದ್ದು, ಈ ಬಾರಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವರಿಷ್ಠರು ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ಅವರ ಗೆಲುವಿಗೆ ಯತ್ನಿಸಲಾಗುವುದು ಎಂದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುನೀಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾವತಿ, ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಪ್ರಮುಖರಾದ ಗುಲಾಬಿ ಜನಾರ್ಧನ, ರುಬೀನಾ, ಪಾಣತ್ತಲೆ ವಿಶ್ವನಾಥ್, ಸಿ.ಎಲ್. ವಿಶ್ವ, ಯೂಸುಫ್ ಕೊಂಡAಗೇರಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಕುಶಾಲನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಡಿ. ರವಿ, ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಣೇಶ್, ಜಿಲ್ಲಾ ಯುವ ಜೆಡಿಎಸ್ ವಕ್ತಾರ ರವಿಕಿರಣ್ ರೈ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.