ಕುಶಾಲನಗರ, ನ. ೨೯: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೩ನೇ ಮಹಾ ಅಧಿವೇಶನ ಡಿಸೆಂಬರ್ ೨೪ ರಿಂದ ದಾವಣಗೆರೆಯಲ್ಲಿ ೩ ದಿನಗಳ ಕಾಲ ನಡೆಯಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್ ತಿಳಿಸಿದ್ದಾರೆ.

ಅವರು, ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ೩ ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಯುವಜನ, ಮಹಿಳಾ ಅಧಿವೇಶನಗಳು ನಡೆಯಲಿವೆ. ಸಾಂಸ್ಕೃತಿಕ ಪರಂಪರೆ ಮತ್ತಿತರ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು, ಇತಿಹಾಸ, ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ, ಮಾರಾಟದ ವ್ಯವಸ್ಥೆ ನಡೆಯಲಿದೆ. ವಚನ ಗಾಯನ, ನೃತ್ಯ ರೂಪಕ, ನಾಟಕ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ ಎಂದು ತಿಳಿಸಿದರು.

ಅಧಿವೇಶನಕ್ಕೆ ಆಗಮಿಸುವ ಸದಸ್ಯರು, ಪದಾಧಿಕಾರಿಗಳು ಡಿಸೆಂಬರ್ ೧೦ರ ಒಳಗೆ ಹೆಸರು ನೋದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಅಧಿವೇಶನದ ಕಾರ್ಯಾಲಯ ಅಥವಾ ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು. ಇದೇ ಸಂದರ್ಭ ಪದಾಧಿಕಾರಿಗಳು ಮಹಾಸಭಾದ ಕರಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ, ಖಜಾಂಚಿ ಉದಯಕುಮಾರ್, ಪ್ರಮುಖರಾದ ಭಾಗೀರಥಿ ಜಗದೀಶ್, ಅನುರಾಧ ಚಂದ್ರಶೇಖರ್, ಪಿ. ಮಹದೇವಪ್ಪ, ವಿರೂಪಾಕ್ಷ, ಎಸ್.ಎಸ್. ನಾಗರಾಜ್, ಟಿ.ಎನ್. ಶಿವಾನಂದ, ನಟೇಶ್ ಕುಮಾರ್ ಮತ್ತಿತರರು ಇದ್ದರು.