ಮಡಿಕೇರಿ, ನ. ೨೮: ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆಸ್ಪತ್ರೆಗೆ ನುಗ್ಗಿದ ಕಳ್ಳನೋರ್ವ ವೈದ್ಯರ ಕೊಠಡಿಯೊಳಗಡೆ ಇರಿಸಲಾಗಿದ್ದ ಬ್ಯಾಗ್‌ಗಳಿಂದ ಹಣ, ಎಟಿಎಂ ಕಾರ್ಡ್ಗಳನ್ನು ಕಳವು ಮಾಡಿದ್ದಲ್ಲದೆ, ಆಸ್ಪತ್ರೆ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ನಿನ್ನೆ ಸಂಜೆ ೭.೩೦ರ ವೇಳೆಗೆ ಜಿಲ್ಲಾಸ್ಪತ್ರೆಗೆ ನುಗ್ಗಿದ ಕಳ್ಳ ಆಸ್ಪತ್ರೆಯೊಳಗಡೆ ಸುಳಿದಾಡಿ ಯಾರೂ ಇಲ್ಲದೇ ಇದ್ದ ವೈದ್ಯರ ಕೊಠಡಿಯೊಳಗಡೆ ಇದ್ದ ವೈದ್ಯ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಜಾಲಾಡಿ ಬ್ಯಾಗ್ ಸಹಿತ ಒಳಗಡೆ ಇದ್ದ ಹಣ

(ಮೊದಲ ಪುಟದಿಂದ) ಹಾಗೂ ಎಟಿಎಂ ಕಾರ್ಡ್ಗಳನ್ನು ಎಗರಿಸಿದ್ದಾನೆ. ಅಲ್ಲದೆ, ಒಂದು ಬ್ಯಾಗ್‌ನಲ್ಲಿ ದೊರೆತ ಆಸ್ಪತ್ರೆಯ ಹೊರಾವರಣದಲ್ಲಿ ನಿಲ್ಲಿಸಿದ್ದ ವೈದ್ಯ ವಿದ್ಯಾರ್ಥಿಗೆ ಸೇರಿದ ದ್ವಿಚಕ್ರ ವಾಹನವನ್ನೂ(ಕೆ.ಎ.೦೫-ಎಲ್‌ಕೆ ೫೭೬೮) ಅಪಹರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಮುಖಕ್ಕೆ ಮಾಸ್ಕ್ ಧರಿಸಿ ಒಳನುಗ್ಗಿರುವ ಕಳ್ಳನ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈದ್ಯರ ಕೊಠಡಿ ಬಳಿ ಹಲವಾರು ಬಾರಿ ಅತ್ತಿಂದಿತ್ತ ಸುಳಿದಾಡುತ್ತಾ ಕೊಠಡಿಯೊಳಗಡೆ ಯಾರೂ ಇಲ್ಲದ ಸಂದರ್ಭ ಒಳನುಗ್ಗಿ ಬ್ಯಾಗ್‌ಗಳನ್ನು ಹೊತ್ತೊಯ್ಯುತ್ತಿರುವದು ಕ್ಯಾಮರಾದಲ್ಲಿ ಸೆರೆಯಾಗಿದೆ. ಒಟ್ಟು ಏಳು ಮಂದಿಯ ಬ್ಯಾಗ್‌ಗಳನ್ನು ಅಪಹರಿಸಿ ಅದರಲ್ಲಿದ್ದ ಹಣವನ್ನು ದೋಚಿದ್ದಾನೆ. ವಾಹನ ಕಳೆದುಕೊಂಡಿರುವ ತರಿಕೆರೆಯ ವೈದ್ಯ ವಿದ್ಯಾರ್ಥಿನಿ ಎಸ್.ಸೃಷ್ಟಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಪೊಲೀಸರು; ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಠಾಣಾಧಿಕಾರಿ ಶ್ರೀನಿವಾಸ್, ಸಿಬ್ಬಂದಿಗಳು, ಬೆರಳಚ್ಚು ತಜ್ಞರು, ಶ್ವಾನ ದಳದವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಈ ಹಿಂದೆಯೂ ಕೋವಿಡ್ ಸಂದರ್ಭದಲ್ಲಿ ಇದೇ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಸೋಂಕಿತರ ಮೊಬೈಲ್, ಬ್ಯಾಗ್, ಚಿನ್ನಾಭರಣಗಳು ಕಳವಾಗಿದ್ದವು.