ವೀರಾಜಪೇಟೆ, ನ. ೨೮: ಎಲ್ಲಾ ಮೂಲಭೂತ ಸೌಕರ್ಯವನ್ನು ಸಾರ್ವಜನಿಕರಿಗೆ ಒದಗಿಸಿಕೊಡುವ ನಿಟ್ಟಿನಲ್ಲಿ ರಾಜ್ಯದ ೪೧ ಕಡೆಗಳಲ್ಲಿ ಏಕಕಾಲದಲ್ಲಿ ತೀವ್ರ ನಿಗಾ ಘಟಕಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಚಾಲನೆ ನೀಡುವ ಬಗ್ಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ೧೦ ಹಾಸಿಗೆಯುಳ್ಳ ಸುಸಜ್ಜಿತ ತೀವ್ರ ನಿಗಾ ಘಟಕಕ್ಕೆ ಚಾಲನೆ ನೀಡಲಾಗಿದೆ ಎಂದು ವೀರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೦ ಹಾಸಿಗೆಯುಳ್ಳ ತೀವ್ರ ನಿಗಾ ಘಟಕ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು; ಸಾರ್ವಜನಿಕ ಆಸ್ಪತ್ರೆಯಲ್ಲಿ ಸದ್ಯಕ್ಕೆ ಎಲ್ಲಾ ಸೌಲಭ್ಯಗಳು, ಆರೋಗ್ಯ ಸೇವೆಗಳು ದೊರಕುತ್ತದೆ. ಆದರೆ ಅದಕ್ಕೆ ಬೇಕಾದ ವೈದ್ಯರುಗಳ ಕೊರತೆ ಇದೆ. ಇಲ್ಲಿ ಪ್ರತಿದಿನ ೫೦೦ಕ್ಕೂ ಹೆಚ್ಚು ಹೊರರೋಗಿಗಳು ಬಂದು ಹೋಗುತ್ತಾರೆ. ಫಿಜಿಷಿಯನ್ ಹಾಗೂ ಅನಸ್ಥೆಷಿಯಾ ವೈದ್ಯರುಗಳ ಕೊರತೆ ಇದೆ. ಮಡಿಕೇರಿಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಆದ ವೈದ್ಯರುಗಳು ಇದ್ದಾರೆ, ಆದರೆ ಅವರನ್ನು ಇಲ್ಲಿಗೆ ಕಳುಹಿಸುವ ಮನಸ್ಸು ಅವರು ಮಾಡುತ್ತಿಲ್ಲ, ಆಸ್ಪತ್ರೆಗೆ ವೈದ್ಯರುಗಳ ನೇಮಕ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇದ್ದೇ ಇದೆ. ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅದೇ ರೀತಿ ಕರುಣಾ ಟ್ರಸ್ಟ್ ನವರು ತೀವ್ರ ನಿಗಾ ಘಟಕಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಬಿಜೆಪಿ ಪ್ರಮುಖ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ಪುರಸಭೆ ಅಭಿಯಂತರ ಹೇಮ್ ಕುಮಾರ್, ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ ಮಂದಣ್ಣ, ಬಿಜೆಪಿಯ ಸಚಿನ್ ಕುಟ್ಟಯ್ಯ, ತಸ್ಲಿಂ ಅಕ್ತರ್, ಆಸ್ಪತ್ರೆ ಸಿಬ್ಬಂದಿಗಳು, ಶುಶ್ರೂಷಕರು, ವೈದ್ಯರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.