ಗೋಣಿಕೊಪ್ಪಲು, ನ.೨೮: ಕಂದಾಯ ಇಲಾಖೆಯಲ್ಲಿ ಕೆಲಸ ನಿಮಿತ್ತ ಬರುವ ನಾಗರಿಕರು ಅಲೆದಾಡುವುದನ್ನು ತಪ್ಪಿಸಲು ಇಲಾಖೆಯ ಸಿಬ್ಬಂದಿಗಳು ಕ್ರಮ ಕೈಗೊಳ್ಳಬೇಕು. ತ್ವರಿತವಾಗಿ ಅವರ ಕಡತ ವಿಲೇವಾರಿ ಮೂಲಕ ಸ್ಪಂದಿಸಿ, ಅಲೆದಾಡಿಸುತ್ತಿರುವ ಆರೋಪದಿಂದ ಅಧಿಕಾರಿಗಳು ಹೊರ ಬರಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರ್ ಹೆಚ್ಚಿನ ನಿಗಾವಹಿಸುವಂತೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಹುದಿಕೇರಿ ಹೋಬಳಿಯ ನೂತನ ಕಂದಾಯ ಕಚೇರಿಯನ್ನು ಉದ್ಘಾಟಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೆ.ಜಿ.ಬೋಪಯ್ಯ, ಸರ್ಕಾರ ಹಲವು ಯೋಜನೆಗಳನ್ನು ಕಂದಾಯ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿದೆ. ಹೀಗಾಗಿ ಪ್ರತಿ ಹೋಬಳಿಗೆ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ೧೮.೬ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡವು ನಿರ್ಮಾಣವಾಗಿದ್ದು ಇದರ ಪ್ರಯೋಜನವನ್ನು ನಾಗರಿಕರು ಪಡೆಯಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ಆಗಮಿಸುವ ವೇಳೆ ಉತ್ತಮ ಸೇವೆ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ತ್ವರಿತ ಗತಿಯಲ್ಲಿ ತಲುಪಿಸುವಂತಾಗಲು ಕ್ರಮ ಕೈಗೊಳ್ಳಬೇಕೆಂದರು.
ಸರ್ಕಾರದ ಯೋಜನೆಗಳು, ಸವಲತ್ತುಗಳು ಗ್ರಾಮೀಣ ಜನತೆಗೆ ಅತ್ಯಂತ ವೇಗವಾಗಿ ಸಿಗಲು ಆಧುನಿಕ ಶೈಲಿಯಲ್ಲಿ ಪ್ರತಿ ಹೋಬಳಿಗೆ ಕಂದಾಯ ಕಚೇರಿಗಳನ್ನು ನಿರ್ಮಾಣ ಮಾಡಲು ಸರ್ಕಾರ ಅನುದಾನವನ್ನು ಒದಗಿಸಿದೆ. ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದ್ದು ಹಂತ ಹಂತವಾಗಿ ಸಿಬ್ಬಂದಿಗಳನ್ನು ನೇಮಕಗೊಳಿಸುವ ಕೆಲಸ ನಡೆಯಲಿದೆ. ಪೋಡಿ, ಪೌತಿ ಖಾತೆ ಸೇರಿದಂತೆ ಇನ್ನಿತರ ಕೆಲಸಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಅಧಿಕಾರಿಗಳು ವಿಶೇಷ ಆಸಕ್ತಿ ನೀಡಬೇಕು. ತಹಶೀಲ್ದಾರ್‌ಗಳು ಇವುಗಳ ಬಗ್ಗೆ ಹೆಚ್ಚಿನ ಒತ್ತಾಸೆ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ಸತೀಶ್ ಉಲ್ಲಾಳ ಮಾತನಾಡಿ, ಸಾರ್ವಜನಿಕರ ಸೇವೆಗೆ ಕಂದಾಯ ಇಲಾಖೆಯು ಕಟಿಬದ್ದ ವಾಗಿದ್ದು ಕೆಲಸ ನಿರ್ವಹಿಸುತ್ತಿದೆ. ವಾರದ ಪ್ರತಿ ಬುಧವಾರದಂದು ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಖುದ್ದಾಗಿ ಸಾರ್ವಜನಿಕರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ. ಇಲಾಖೆಯ ಸಿಬ್ಬಂದಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ನೇರವಾಗಿ ಸಾರ್ವಜನಿಕರು ಭೇಟಿ ಮಾಡಬಹುದು, ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಇವುಗಳ ಹೊರತಾಗಿಯೂ ಸಿಬ್ಬಂದಿಗಳು ಅಧಿಕಾರಿಗಳು ಸೇವೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ,ಹುದಿಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೆ. ವಾಸು ಬಿದ್ದಪ್ಪ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹುದಿಕೇರಿ ಹೋಬಳಿ ಉಪ ತಹಶೀಲ್ದಾರ್ ಎಂ.ಎಸ್.ಸ್ವಾತಿ, ಪೊನ್ನಂಪೇಟೆ ರೆವೆನ್ಯೂ ಅಧಿಕಾರಿ ಸುಧೀಂದ್ರ, ಹುದಿಕೇರಿ ಕಂದಾಯ ಪರಿವೀಕ್ಷಕ ರವಿಚಂದ್ರ, ಗ್ರಾಮ ಲೆಕ್ಕಾಧಿಕಾರಿಗಳಾದ ಜಿ.ಕೆ.ನಿತನ್, ಹೆಚ್.ಸಂತೋಷ್, ಪ್ರಿಯಾಂಕ, ಸಿಬ್ಬಂದಿಗಳಾದ ಗಣಪತಿ, ಸಿ.ಯು.ಬೋಪಯ್ಯ, ಸಿ.ಎಂ.ಚAಗಪ್ಪ, ರಶೀದ್, ಸಂತೋಷ್, ಗ್ರಾಮದ ಮುಖಂಡರಾದ ಅಜ್ಜಿಕುಟ್ಟಿರ ಪ್ರವೀಣ್, ಕುಞಂಗಡ ಅರುಣ್ ಭೀಮಯ್ಯ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸರ್ವೆ ಇಲಾಖೆಯ ಹಿರಿಯ ಅಧಿಕಾರಿ ಬಾನಂಗಡ ಅರುಣ್ ಸ್ವಾಗತಿಸಿ, ವಂದಿಸಿದರು. ಗ್ರಾಮ ಪಂಚಾಯಿತಿಯ ಸದಸ್ಯರು,ವಿವಿಧ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.