ಮಡಿಕೇರಿ, ನ. ೨೮: ಮಳೆಗಾಲದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ನಿರ್ಮಿಸಲಾದ ಪುನರ್ವಸತಿಯನ್ನು ತ್ವರಿತವಾಗಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಹಾಗೂ ಹದಗೆಟ್ಟ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿಪಡಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ೧ ವಾರದ ಗಡುವು ನೀಡಿತು. ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಜಿಲ್ಲಾಡಳಿತ ಭವನದ ಎದುರು ಉಪವಾಸ ಸತ್ಯಾಗ್ರಹ, ಉಸ್ತುವಾರಿ ಸಚಿವರ ಕಾರು ತಡೆಯುವುದರ ಜೊತೆಗೆ ಅವರ ಮನೆಗೂ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಕೆ.ನಿಡುಗಣೆಯಲ್ಲಿ ೭೦ ಮನೆಗಳ ನಿರ್ಮಾಣ ಕಾರ್ಯ ಪೂರ್ಣ ಗೊಂಡಿದೆ. ಆದರೆ, ಫಲಾನುಭವಿಗಳಿಗೆ ಹಸ್ತಾಂತರ ಮಾಡದೆ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿದ ಪ್ರತಿಭಟನಾಕಾರರು ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿಪಡಿಸುವಂತೆ ಆಗ್ರಹಿಸಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಜೆಡಿಎಸ್ ಉಸ್ತುವಾರಿಯಾಗಿರುವ ನರಸಿಂಹ ಮೂರ್ತಿ ಮಾತನಾಡಿ, ಕೊಡಗು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಆದರೆ, ಇಲ್ಲಿನ ರಸ್ತೆಗಳು ತೀರ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಇದರೊಂದಿಗೆ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ನಿರ್ಮಿಸಿದ ಮನೆ ಹಸ್ತಾಂತರ ಮಾಡದೆ ಮೀನಾಮೀಷ ಎಣಿಸುತ್ತಿರಲು ಕಾರಣವೇನೂ ಎಂದು ಪ್ರಶ್ನಿಸಿದ ಅವರು, ೧ ವಾರದೊಳಗೆ ಸ್ಪಂದನ ದೊರೆಯದಿದ್ದಲ್ಲಿ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರು ತಡೆದು ಹಾಗೂ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಉಮೇಶ್ ಗೌಡ ಮಾತನಾಡಿ, ಸಮಸ್ಯೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಸಕಾಲವಾಗಿ ಸ್ಪಂದಿಸುತ್ತಿಲ್ಲ. ಇಲ್ಲಿನ ಶಾಸಕರು, ಸಂಸದರು ಆಡಳಿತ ನಡೆಸುವಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಬರುವ ಸಂದರ್ಭ ಪ್ರತಿಭಟನೆ ನಡೆಸಲಾಗುವುದು. ಕೊಡಗಿನ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಕಾವೇರಿ ಮಾತೆ ಮುಖ್ಯಮಂತ್ರಿಗೆ ತಕ್ಕ ಶಿಕ್ಷೆ ನೀಡಲಿದ್ದಾಳೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ನೆರೆಸಂತ್ರಸ್ತರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆ ಪರಿಹಾರಕ್ಕೆ ಸರಕಾರ ಮುಂದಾಗುತ್ತಿಲ್ಲ. ಇದು ಆಡಳಿತ ವೈಫಲ್ಯ. ಹದಗೆಟ್ಟ ರಸ್ತೆ ಅಭಿವೃದ್ಧಿಪಡಿಸಲು ಹಿಂದೇಟು ಹಾಕಲಾಗುತ್ತಿಲ್ಲ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ಬಿಜೆಪಿ ಭದ್ರಕೋಟೆಯಾಗಿರುವ ಕೊಡಗಿನ ಅಭಿವೃದ್ಧಿ ಶೂನ್ಯವಾಗಿದೆ. ಬಿಜೆಪಿ ಧರ್ಮ ಸಂಘರ್ಷ ಸೃಷ್ಟಿಸಿ ಜನರ ಭಾವನೆಯನ್ನು ಕೆರಳಿಸಿ ಅದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಜಿಲ್ಲೆಯ ಸಮಸ್ಯೆಗೆ ಬಿಜೆಪಿ ಸರಕಾರ ಸ್ಪಂದಿಸಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅದುವೇ ಇಲ್ಲಿನ ಸಂಸದರು, ಶಾಸಕರು ಯಾವುದೇ ವಿಶೇಷ ಅನುದಾನ ತರುವ ಪ್ರಯತ್ನ ಮಾಡಿಲ್ಲ. ಕರ್ನಾಟಕಕ್ಕೆ ಕೇಂದ್ರ ಒಂದು ರೂಪಾಯಿ ಅನುದಾನ ನೀಡಿಲ್ಲ. ಮೊಟ್ಟೆ ಹೊಡೆದ ವಿಚಾರದ ಬಗ್ಗೆ ಸದನದಲ್ಲಿ ಮಾತನಾಡುವ ಶಾಸಕರು, ಇಲ್ಲಿನ ಸಮಸ್ಯೆಯನ್ನು ಏಕೆ ಪ್ರಸ್ತಾಪಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರ ಮೂಲಕ ಸರಕಾರಕ್ಕೆ ಬೇಡಿಕೆಯನ್ನು ಮನವಿ ಪತ್ರದ ಮೂಲಕ ಸಲ್ಲಿಸಲಾಯಿತು.

ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎನ್.ಸಿ. ಸುನಿಲ್, ಖಜಾಂಜಿ ಡೆನ್ನಿಬರೋಸ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್, ಯುವ ಘಟಕದ ವಕ್ತಾರ ರವಿಕಿರಣ್, ಮುಖಂಡರು ಗಳಾದ ನಾಪಂಡ ಮುತ್ತಪ್ಪ, ಯೂಸಫ್, ದೇವಪ್ಪಗೌಡ, ಪಾಣತ್ತಲೆ ವಿಶ್ವನಾಥ್, ಗುಲಾಬಿ ಜನಾರ್ಧನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.