ಕಾನೂನು ಸಚಿವರ ಹೇಳಿಕೆ ಖಂಡಿಸಿದ ಸುಪ್ರೀಂ ಕೋರ್ಟ್

ವದೆಹಲಿ, ನ. ೨೮: ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆ ಕುರಿತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅದು ನಡೆಯಬಾರದಿತ್ತು ಎಂದು ಹೇಳಿದೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‌ಜೆಎಸಿ)ದ ಬಗ್ಗೆ ಅಸಮಾಧಾನ ಇದೆಯೇ? ಆದ್ದರಿಂದಲೇ ಶಿಫಾರಸು ಮಾಡಿದ ಹೆಸರುಗಳನ್ನು ತಡೆಹಿಡಿಯಲಾಗಿದೆಯೇ? ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾವನ್ನು ಪ್ರಶ್ನಿಸಿದೆ. "ಉನ್ನತ ಸ್ಥಾನದಲ್ಲಿರುವ ಯಾರಾದರೂ ಹಾಗೆ ಹೇಳಿದಾಗ ... ಅದು ಆಗಬಾರದಿತ್ತು..." ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ.ಎಸ್. ಓಕಾ ಅವರ ಪೀಠ ಹೇಳಿದೆ. ಒಂದು ಸಲ ಶಿಫಾರಸು ಮಾಡಿದ ಹೆಸರುಗಳನ್ನು ವಿಳಂಬವಿಲ್ಲದೆ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾನೂನು ಸಚಿವ ಕಿರಣ್ ರಿಜಿಜು ಅವರು ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ಸರ್ಕಾರ ಹೆಚ್ಚಿನ ಅಧಿಕಾರವನ್ನು ಹೊಂದಿಲ್ಲದಿರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಮತ್ತು ಕೊಲಿಜಿಯಂ ವ್ಯವಸ್ಥೆಯು ಸಂವಿಧಾನಕ್ಕೆ “ಅನ್ಯ” ಎಂದು ಪ್ರಸ್ತುತ ನೇಮಕಾತಿ ಕಾರ್ಯವಿಧಾನವನ್ನು ಟೀಕಿಸಿದ್ದರು. “ದಯವಿಟ್ಟು ಇದನ್ನು ಪರಿಹರಿಸಿ ಮತ್ತು ಈ ವಿಷಯದಲ್ಲಿ ನ್ಯಾಯಾಂಗ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಬೇಡಿ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ‘ಕೆಲವೊಮ್ಮೆ ಮಾಧ್ಯಮ ವರದಿಗಳು ತಪ್ಪಾಗಿರುತ್ತವೆ’ ಎಂದು ಹೇಳಿದರು. ಅಟಾರ್ನಿ ಜನರಲ್ ಅವರೇ, ನಾನು ಎಲ್ಲಾ ಪತ್ರಿಕಾ ವರದಿಗಳನ್ನು ನಿರ್ಲಕ್ಷಿಸಿದ್ದೇನೆ. ಆದರೆ ಇದು ಸಂದರ್ಶನವೊAದರಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಹೇಳಿದ್ದು. ನಾನು ಬೇರೆ ಏನನ್ನೂ ಹೇಳುತ್ತಿಲ್ಲ. ನಾವು ಮಾಡಬೇಕಾದರೆ, ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನ್ಯಾಯಮೂರ್ತಿ ಕೌಲ್ ಅವರು ಆರ್ ವೆಂಕಟರಮಣಿ ಅವರಿಗೆ ಹೇಳಿದರು.

ಕೋವಿಡ್ ವಾರಿಯರ್ಸ್ಗೆ ಸಿಗದ ಪರಿಹಾರ

ಬೆಂಗಳೂರು, ನ. ೨೮: ರಾಜ್ಯದ ಬಹುತೇಕ ಎಲ್ಲ ಕೋವಿಡ್ ವಾರಿಯರ್ಸ್ ಕುಟುಂಬಗಳು ಪರಿಹಾರವನ್ನು ಪಡೆದಿವೆ. ಆದರೆ, ಸುಮಾರು ೧೭೦ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸಂಬAಧಿಕರು ಇನ್ನೂ ಸಹಾನುಭೂತಿಯ ಆಧಾರದ ಮೇಲೆ ಯಾವುದೇ ಪರಿಹಾರ ಅಥವಾ ಉದ್ಯೋಗವನ್ನು ಪಡೆದಿಲ್ಲ. ಸಂತ್ರಸ್ತರಲ್ಲಿ ಹೆಚ್ಚಿನವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒಗಳು), ಬಿಲ್ ಕಲೆಕ್ಟರ್‌ಗಳು, ವಾಟರ್‌ಮೆನ್ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳಾಗಿದ್ದಾರೆ. ಈ ಕುಟುಂಬಗಳ ಪರವಾಗಿ ಹೋರಾಟಕ್ಕಾಗಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಾಸ್ಯರ ಮಹಾ ಒಕ್ಕೂಟವು ಡಿ. ೧೨ ರಂದು ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸುತ್ತಿದ್ದು, ರಾಜ್ಯದಾದ್ಯಂತ ೬,೦೧೨ ಗ್ರಾಮ ಪಂಚಾಯಿತಿಗಳ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ೩೦ ಲಕ್ಷ ರೂ. ಪರಿಹಾರ ನೀಡಲು ೨೦೨೧ರ ಜೂನ್ ೨೮ ರಂದು ಆರ್‌ಡಿಪಿಆರ್ ಇಲಾಖೆಯು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ‘ಆಶ್ವಾಸನೆ ನಿಧಿ' (ಪರಿಹಾರ ನಿಧಿ) ಸ್ಥಾಪಿಸಲು ಆದೇಶ ನೀಡಿದ್ದು, ಈ ನಿಧಿಗೆ ಜಿಲ್ಲಾ ಪಂಚಾಯಿತಿಗಳು ೧೦ ಲಕ್ಷ ಮತ್ತು ತಾಲೂಕು ಪಂಚಾಯಿತಿಗಳು ೫ ಲಕ್ಷ ರೂಪಾಯಿ ನೀಡುವಂತೆ ಕೇಳಲಾಯಿತು. ಆದರೆ, ಬಹುತೇಕ ಎಲ್ಲಾ ಜಿಲ್ಲಾ ಪಂಚಾಯಿತಿಗಳು ಮತ್ತು ತಾಲೂಕು ಪಂಚಾಯಿತಿಗಳು ಹಣದ ಕೊರತೆಯಿಂದಾಗಿ ಸಾಧ್ಯವಿಲ್ಲ ಎಂದಿವೆ. ಗ್ರಾಮ ಪಂಚಾಯಿತಿಗಳು ಸಹ ತಮ್ಮ ಆದಾಯದ ಮೇಲೆ ೫೦,೦೦೦ ರಿಂದ ೩ ಲಕ್ಷ ರೂ. ಗಳನ್ನು ನೀಡುವಂತೆ ಕೇಳಲಾಗಿತ್ತು. ‘ಭಾರಿ ಮೊತ್ತದ ವಿದ್ಯುತ್ ಬಿಲ್ ಸೇರಿದಂತೆ ವೆಚ್ಚ ಭರಿಸಬೇಕಾಗಿರುವುದರಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಗ್ರಾಮ ಪಂಚಾಯಿತಿಗಳ ಮೇಲೆ ಇಲಾಖೆ ಈ ಹೊಣೆಯನ್ನು ಹೇರಿದೆ. ಗ್ರಾಮ ಪಂಚಾಯಿತಿ ನೌಕರರನ್ನು ಸಂಬAಧಪಟ್ಟ ಜಿಪಂ ಸಿಇಒ ನೇತೃತ್ವದ ಸಮಿತಿಗಳ ಮೂಲಕ ನೇಮಿಸಿದ್ದು, ೧೭೦ ಸಂತ್ರಸ್ತರಿಗೆ ೫೦ ಕೋಟಿ ರೂ.ವರೆಗೆ ಬರಬೇಕಾದ ಪರಿಹಾರವನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸತೀಶ್ ಹೇಳಿದರು. ಬೆಳಗಾವಿ, ಉಡುಪಿ, ಶಿವಮೊಗ್ಗ, ದಾವಣಗೆರೆ, ತುಮಕೂರಿನ ೧೫ ಕುಟುಂಬಗಳಿಗೆ ೧೫ ಲಕ್ಷದಿಂದ ೨೦ ಲಕ್ಷ ರೂ.ವರೆಗೆ ಪರಿಹಾರ ಸಿಕ್ಕಿದ್ದು ಬಿಟ್ಟರೆ ಕೋವಿಡ್‌ನಿಂದ ಮೃತಪಟ್ಟ ಇತರ ಯಾರಿಗೂ ಪರಿಹಾರ ಸಿಕ್ಕಿಲ್ಲ. ಈ ಮೃತ ಗ್ರಾಮ ಪಂಚಾಯಿತಿ ಕಾರ್ಯಕರ್ತರ ಕುಟುಂಬಗಳು ಸಂಕಷ್ಟದಲ್ಲಿವೆ. ಆದರೆ, ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಪಿಡಿಒಗಳ ಸಂಘದ ರಾಜ್ಯಾಧ್ಯಕ್ಷ ಎಚ್. ಬೋರಯ್ಯ ತಿಳಿಸಿದ್ದಾರೆ. ಆರ್‌ಡಿಪಿಆರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಸ್ತುವಾರಿ ಉಮಾ ಮಹದೇವನ್ ಮಾತನಾಡಿ, ಯುಕೆಗೆ ಅಧಿಕೃತ ಭೇಟಿ ನೀಡಿ ಹಿಂತಿರುಗಿದ್ದರಿAದ ಈ ಸಮಸ್ಯೆಯ ಬಗ್ಗೆ ನನಗೆ ತಿಳಿದಿಲ್ಲ ಮತ್ತು ಶೀಘ್ರದಲ್ಲೇ ಅದನ್ನು ಪರಿಹರಿಸಲಾಗುವುದು ಎಂದು ಟಿಎನ್‌ಐಇಗೆ ತಿಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ಅಂದಿನ ಎಸಿಎಸ್ ಎಲ್.ಕೆ. ಅತೀಕ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.

ವಿದ್ಯಾರ್ಥಿಯನ್ನು ಉಗ್ರ ಕಸಬ್‌ಗೆ ಹೋಲಿಸಿದ ಪ್ರಾಧ್ಯಾಪಕ ಅಮಾನತು

ಉಡುಪಿ, ನ. ೨೮ ಕಳೆದ ವಾರ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ತರಗತಿಯಲ್ಲೇ ಮೊದಲ ವರ್ಷದ ಎಂಜಿನಿಯರಿAಗ್ ಮುಸ್ಲಿಂ ವಿದ್ಯಾರ್ಥಿಯನ್ನು ಉಗ್ರ ಅಜ್ಮಲ್ ಕಸಬ್‌ಗೆ ಹೋಲಿಸಿದ್ದ ಪ್ರಾಧ್ಯಾಪಕನನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ತರಗತಿಯಲ್ಲಿ ತನ್ನನ್ನು ಉಗ್ರ ಕಸಬ್ ಗೆ ಹೋಲಿಸಿದ ಪ್ರಾಧ್ಯಾಪಕರ ಹೇಳಿಕೆಗೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ. ಪ್ರಾಧ್ಯಾಪಕರ ಹೇಳಿಕೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದಾಗ್ಯೂ, ತರಗತಿಯ ನಂತರ ಪ್ರಾಧ್ಯಾಪಕರು ಆ ವಿದ್ಯಾರ್ಥಿಗೆ ಕ್ಷಮೆಯಾಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂದಿನ ವಿಚಾರಣೆ ಮುಗಿಯುವವರೆಗೆ ಪ್ರಾಧ್ಯಾಪಕರನ್ನು ಅಮಾನತು ಮಾಡಿದ್ದು, ಘಟನೆಯ ಕುರಿತು ಸಂಸ್ಥೆಯು ತನಿಖೆಯನ್ನು ಪ್ರಾರಂಭಿಸಿದೆ ಎಂದು ಮಣಿಪಾಲದ ಎಂಐಟಿಯ ಪ್ರಕಟಣೆ ತಿಳಿಸಿದೆ. ಇಂತಹ ವರ್ತನೆಯನ್ನು ನಮ್ಮ ಕ್ಯಾಂಪಸ್‌ನಲ್ಲಿ ಸಹಿಸುವುದಿಲ್ಲ. ಧರ್ಮ, ಜಾತಿ, ಲಿಂಗ ಹಾಗೂ ಪ್ರಾದೇಶಿಕ ಭೇದ ಮಾಡದೆ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕ್ಯಾಂಪಸ್ ನಮ್ಮದಾಗಿದೆ ಎಂದು ತಿಳಿಸಿದೆ. ಪ್ರೊಫೆಸರ್ ವಿರುದ್ಧ ತನಿಖೆ ನಡೆಸಲು ಆಂತರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯನ್ನು ಖಂಡಿಸಿದ ಉಡುಪಿ ಜಿಲ್ಲಾ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಅಧ್ಯಕ್ಷ ಅಫ್ವಾನ್ ಬಿ ಹೂಡೆ, ಕ್ಯಾಂಪಸ್ ಧಾರ್ಮಿಕ ಸೌಹಾರ್ದತೆಯನ್ನು ಸಾರುವ ಸ್ಥಳವಾಗಬೇಕೇ ಹೊರತು ಧರ್ಮಾಂಧತೆಯಲ್ಲ ಎಂದು ಹೇಳಿದ್ದಾರೆ. ಧರ್ಮದ ವಿರುದ್ಧ ದ್ವೇಷವನ್ನು ಹರಡುವ ಪ್ರಾಧ್ಯಾಪಕರ ಮನಸ್ಥಿತಿ ಆತಂಕಕಾರಿ ಮತ್ತು ಸಂವಿಧಾನದ ಬುನಾದಿಯನ್ನು ಹಾಳು ಮಾಡುತ್ತದೆ. ಪ್ರಾಧ್ಯಾಪಕರ ಈ ರೀತಿಯ ವರ್ತನೆಯು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತ್ತಷ್ಟು ಭಯವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಶ್ರದ್ಧಾ ಕೊಲೆ ಆರೋಪಿ ಕರೆದೊಯ್ಯತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ

ನವದೆಹಲಿ, ನ. ೨೮: ದೆಹಲಿಯ ಬುಲಂದ್ ಶಹರ್‌ನಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ಹಿಂದೂ ಸೇನೆಯ ಇಬ್ಬರು ಕಾರ್ಯಕರ್ತರು ಸೋಮವಾರ ದಾಳಿ ನಡೆಸಿದ್ದಾರೆ. ಸಂಜೆ ಪೋಲಿಗ್ರಾಫ್ ಪರೀಕ್ಷೆಯ ನಂತರ ಪೂನಾವಾಲಾನನ್ನು ಪಶ್ಚಿಮ ದೆಹಲಿಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಕತ್ತಿಗಳನ್ನು ಹಿಡಿದಿದ್ದ ಇಬ್ಬರು ವ್ಯಕ್ತಿಗಳು ಪೊಲೀಸ್ ವ್ಯಾನ್ ಮೇಲೆ ದಾಳಿ ಮಾಡಿದ್ದಾರೆ. ಎಫ್‌ಎಸ್‌ಎಲ್ ಕಟ್ಟಡದ ಹೊರಭಾಗದಲ್ಲಿ ಈ ದಾಳಿ ನಡೆದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಅಫ್ತಾಬ್ ಪೂನಾವಾಲಾ ಸುರಕ್ಷಿತವಾಗಿದ್ದಾನೆ. ದಾಳಿಕೋರರನ್ನು ಬಂಧಿಸಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.