ಅನಿಲ್ ಎಚ್.ಟಿ.
ಬಾಳಬೇಕಾದ ವಯಸ್ಸು.. ಇನ್ನೂ ಅರಳುತ್ತಿರುವ ಮನಸ್ಸು.. ಅಂಥವರ ಹೆಸರಿನ ಮುಂದೆ.. ಚಿರಸ್ಮರಣೆ.. ಓಂಶಾAತಿ.. ಅಗಲಿದ ಚೇತನ ಎಂದೆಲ್ಲಾ ಬರೆಯಬೇಕಾಗಿ ಬಂದಾಗ ಮನಸ್ಸು ಭಾರ.. ಭಾರ..
ಜಗಳ.. ವಾಗ್ವಾದ.. ಮುನಿಸು.. ಇವೆಲ್ಲಾ ಶಮನವಾಗದೇ ಮನಸ್ಸು ನಿಯಂತ್ರಣಕ್ಕೆ ಬಾರದೇ ಹೋದಾಗ ಉಳಿದ ದಾರಿ ಒಂದೇ ಒಂದು ಎಂಬAತೆ ಸಾವಿಗೆ ಶರಣು ಹೊಡೆಯುವ ಮನಸ್ಥಿತಿಗೆ ಏನನ್ನೋಣ... ಅಷ್ಟು ವಿಚಲಿತವಾಗುತ್ತಿದೆಯೇ ಇಂದಿನ ಯುವ ಪೀಳಿಗೆಯ ಮನಸ್ಸು.. ಒಂದಲ್ಲ.. ಎರಡಲ್ಲ.. ಕಳೆದ ಕೆಲವು ವರ್ಷಗಳಿಂದ ಸಾವಿಗೆ ಶರಣಾಗುತ್ತಿರುವ ಯುವಕ, ಯುವತಿಯರನ್ನು ಗಮನಿಸಿದಾಗ ಯುವಪೀಳಿಗೆ ಎಲ್ಲಿಯೋ ಎಡವುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಯುವಪೀಳಿಗೆ ಎಡವುತ್ತಿದೆಯೇ ಅಥವಾ ಯುವಮನಸ್ಸುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಿರಿಯರು ಎಡವುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತದೆ.
ಯಾಕೆ ಹೀಗಾಗುತ್ತಿದೆ.. ದುಡುಕು ನಿರ್ಧಾರಗಳನ್ನು ಕ್ಷಣಮಾತ್ರದಲ್ಲಿ ತೆಗೆದುಕೊಳ್ಳುತ್ತಿರುವ ಯುವಪೀಳಿಗೆ ಹಿಂದೆ ಮುಂದೆ ಯೋಚಿಸದೇ ಜೀವನಕ್ಕೆ ಅಂತ್ಯ ಹೇಳುವ ಕಠಿಣ, ಘೋರ ನಿರ್ಧಾರಗಳನ್ನು ಯಾಕೆ ತೆಗೆದುಕೊಳ್ಳುತ್ತಿದೆ? ಇಂಥವರ ಸಂಖ್ಯೆ ಯಾಕೆ ಹೆಚ್ಚಾಗುತ್ತಿದೆ?
ಆ ಪೋಷಕರಿಗೆ ಒಬ್ಬನೇ ಮಗ.. ಬಾಲ್ಯದಿಂದಲೇ ಅವನು ಕೇಳಿದ್ದನ್ನೆಲ್ಲಾ ಕೊಡಿಸಿದರು. ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲಾ ಅವನ ಬೇಕು ಬೇಡಿಕೆಗಳಿಗೆ ನೀರಿನಂತೆ ಖರ್ಚು ಮಾಡಿದರು. ತಮಗೆ ವಯಸ್ಸಾಗುತ್ತಿದೆ. ತಾವು ಜೀವನದಲ್ಲಿ ಏನೂ ಸಂಭ್ರಮಿಸಿಯೇ ಇಲ್ಲ. ಮಗನ ಬೇಡಿಕೆ ಪೂರೈಸುತ್ತಾ, ತಮ್ಮ ಇಷ್ಟಗಳನ್ನೇ ಮೂಲೆಗುಂಪು ಮಾಡುತ್ತಿದ್ದೇವೆ ಎಂದು ಪೋಷಕರಿಗೆ ಅನ್ನಿಸಲೂ ಸಮಯವೇ ಸಿಕ್ಕಲಿಲ್ಲ. ದುಡಿತ.. ದುಡಿತ.. ಎಲ್ಲವೂ ಮಗನಿಗಾಗಿ.. ಮನೆ ಪಕ್ಕದಲ್ಲಿಯೇ ಉತ್ತಮ ಕಾಲೇಜು ಇದ್ದರೂ ದೂರದೂರಿನ ಪ್ರತಿಷ್ಟಿತ ಕಾಲೇಜಿಗೇ ಹೋಗುವುದು.. ಇಲ್ಲಿ ಯಾರು ಓದುತ್ತಾರೆ.. ನನ್ನ ಲೆವಲ್‌ಗೆ ಇಂಥ ಕಾಲೇಜುಗಳಲ್ಲ ಎಂಬ ಮಗನ ಉಡಾಫೆಯ ಮಾತು ಕೇಳಿ ಕಿವಿಹಿಂಡಿ ತಿದ್ದಬೇಕಾದ ಅಪ್ಪಅಮ್ಮ, ತಮ್ಮ ಮಗ ದೂರದ ಕಾಲೇಜಿನಲ್ಲಿ ಓದಿ ಮಹಾನ್ ಮೇಧಾವಿಯಾಗುತ್ತಾನೆ ಎಂದು ಭಾವಿಸಿ ಅಲ್ಲಿಗೆ ಕಳುಹಿಸಿಯೇ ಬಿಟ್ಟರು. ಹೋದದ್ದು ದೂರದ ಊರಿಗೇ ಆದರೂ ಅಪ್ಪನಿಗೆ ಬರುವ ಮೊಬೈಲ್ ಕರೆಗಳು ಬಹಳ ಹತ್ತಿರದಲ್ಲಿಯೇ ಇರುತ್ತಿದ್ದವು. ದಿನಬಿಟ್ಟು ದಿನ ಮೊಬೈಲ್ ಕರೆ ಮಾಡಿ ಇಂತಿಷ್ಟು ಸಾವಿರ ಕಳುಹಿಸು ಎಂಬ ಬೇಡಿಕೆಗೆ ಹೈರಾಣಾಗಿ ಹೋಗಿಬಿಟ್ಟ. ಗೆಳೆಯರು ಹೆಚ್ಚಾದರು, ಕಾಲೇಜು ಹತ್ತಿರದ ಪಬ್ ಹತ್ತಿರವಾಯಿತು.. ಅಪ್ಪ ಅಮ್ಮನಿದ್ದ ಮನೆ ದೂರವಾಯಿತು.. ಹಣದ ವೆಚ್ಚ ಅಂಕೆ ಸಂಖ್ಯೆ ಮೀರುತ್ತಲೇ ಹೋಯಿತು. ಏನ್ ಮಾಡೋದು.. ಇರೋದು ಒಬ್ಬನೇ ಮಗ ತಾನೇ.. ಇವನಿಗಲ್ಲದೇ ಮತ್ತೆ ಯಾರಿಗೆ ಖರ್ಚು ಮಾಡೋದು.. ಅಮ್ಮನ ಪುಸಲಾಯಿಸುವಿಕೆಗೆ ಅಪ್ಪ ತಲೆಯಾಡಿಸಲೇಬೇಕಾಯಿತು. ಹಣ ಕಳುಹಿಸುವುದು ಹೆಚ್ಚಾದಂತೆ ದುಡಿತವೂ ಹೆಚ್ಚಾಗಲೇಬೇಕಾಯಿತು. ದಿನಗಟ್ಟಲೆ ಶ್ರಮಿಸಿದರು. ಬರಬಾರದ ಆ ದಿನ ಬಂದೇ ಬಿಟ್ಟಿತು. ಮಗನ ಗೆಳೆಯನ ಮೊಬೈಲ್ ಕರೆ ಕೇಳಿ ಅಪ್ಪ ಕುಸಿದು ಬಿದ್ದ. ಪ್ರಾಣಕ್ಕಿಂತ ಹೆಚ್ಚಾಗಿದ್ದ ಮಗ ನೇಣಿಗೆ ಶರಣಾಗಿದ್ದ. ಇನ್ನು ಯಾರಿಗೆಂದು ಹಣ ಕಳುಹಿಸೋದು. ಇನ್ನು ಯಾರಿಗೆಂದು ದುಡಿಯೋದು.. ಇನ್ನು ಯಾರೊಂದಿಗೆ ಸಂಭ್ರಮಿಸುವುದು..
ಫ್ಯಾನಿಗೆ ನೇಣು ಕುಣಿಕೆ ಬಿಗಿಯುವ ಮುನ್ನ ಮಗರಾಯನಿಗೆ ತನ್ನ ಸುಖಕ್ಕಾಗಿ ವರ್ಷಾನುಗಟ್ಟಲೆ ಬೆವರು ಸುರಿಸಿದ ಅಪ್ಪ ನೆನಪಾಗಲೇ ಇಲ್ಲ, ತನ್ನೆಲ್ಲಾ ಸಂತೋಷ ಬದಿಗಿಟ್ಟು ತನಗಾಗಿ ಹಲುಬುತ್ತಿದ್ದ ಅಮ್ಮನ ಸ್ಮರಣೆಯೂ ಆಗಲಿಲ್ಲ. ಆ ಕ್ಷಣಕ್ಕೆ ತನಗೆ ವಂಚಿಸಿದ ಪ್ರೇಮಿಗೆ ಪಾಠ ಕಲಿಸುತ್ತೇನೆ ಎಂಬುದೇ ಆತನ ಗುರಿಯಾಗಿತ್ತು. ಪಾಠ ಕಲಿಸುವ ಭರದಲ್ಲಿ ಆತ ಪ್ರಾಣ ತೆತ್ತ.. ಅಪ್ಪ ಅಮ್ಮ ಸರಿಯಾದ ಪಾಠ ಕಲಿತರು. ಪ್ರಿಯತಮೆ ಮತ್ತೊಬ್ಬನೊಂದಿಗೆ ವಿವಾಹವಾಗುವ ತರಾತುರಿಯಲ್ಲಿದ್ದಳು.
ಇದುವೇ ಜೀವನವೇ.. ಇಷ್ಟೇ ಬದುಕೇ..
ಬಾಲ್ಯದಲ್ಲಿ ತುತ್ತು ತಿನ್ನಿಸಿ, ವಿದ್ಯೆ ಕಲಿಸಿ.. ಮಕ್ಕಳ ಸಂತೋಷದಲ್ಲಿಯೇ ತಮ್ಮೆಲ್ಲಾ ಸಂಭ್ರಮ ಕಾಣುತ್ತಿರುವ ಬಡಪಾಯಿ ಪೋಷಕರ ನೆನಪು ಮಕ್ಕಳಿಗೆ ಕ್ಷಣಮಾತ್ರದಲ್ಲಿ ಮರೆಯಾಗುತ್ತಿದೆಯೇ? ಅಂಕ ಕಡಮೆಯಾಯಿತು ಎಂದು, ಪ್ರೇಮ ಕೈಗೂಡಲಿಲ್ಲ ಎಂದು, ಸಾಲದ ಹೊರೆ ಹೆಚ್ಚಾಯಿತೆಂದು.. ಅನೈತಿಕ ಸಂಬAಧ ಬಯಲಾಯಿತೆಂದು..ಅನಗತ್ಯ ದುಗುಡ, ಆತಂಕ, ಭಯದಿಂದ ಸಾವನ್ನಪ್ಪುತ್ತಿರುವ ಯುವಪೀಳಿಗೆಯ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಅಪ್ಪ ಅಮ್ಮನ ಕಣ್ಣೀರಿನ ಕೊಡ ತುಂಬುತ್ತಲೇ ಹೋಗಿದೆ.
ಮಗುವೇ ಭಯಪಡಬೇಡ.. ನಿನ್ನೊಂದಿಗೆ ನಾವಿದ್ದೇವೆ. ಸಮಾಜ ಇದೆ. ಗೆಳೆಯರ ದೊಡ್ಡ ಬಳಗವೇ ಇದೆ, ಜೀವನದಲ್ಲಿ ಹೆದರುವಂಥದ್ದು ಏನೂ ಇಲ್ಲ.. ಏನೇನೂ ಇಲ್ಲ.. ಆತ್ಮಸ್ಥೆöÊರ್ಯದಿಂದ ಇರು.. ನಿನ್ನ ಮನಸ್ಸಿನಲ್ಲಿ ಸದಾ ಧೈರ್ಯ ಇರಲಿ. ಅಂಕ ಕಡಮೆಯಾಯಿತೇ.. ಪರವಾಗಿಲ್ಲ. ಮತ್ತೊಂದು ಪ್ರಯತ್ನ ಮಾಡಿದರೆ ಆಯಿತು. ಪ್ರಿಯತಮೆ ಕೈಕೊಟ್ಟಳೇ.. ಅಯ್ಯೋ ಇಷ್ಟೇನಾ, ನಿನ್ನ ಲೆವಲ್ ಗೆ ಅವಳಲ್ಲ ಬಿಡು.. ಅವಳಿಗಿಂತ ಉತ್ತಮಳು ಸಿಗುತ್ತಾಳೆ. ಹುಡುಗ ಮದುವೆಯಾಗುವುದಿಲ್ಲ ಅಂದನಾ.. ನಿನ್ನಂಥ ಮುದ್ದಿನ ಹುಡುಗಿಯನ್ನು ಬೇಡ ಅಂದರೆ ಅವನಿಗೆ ನಷ್ಟ ಕಣೇ.. ಡೋಂಟ್ ವರಿ.. ಬೀ ಹ್ಯಾಪಿ, ಸಾಲದ ಹೊರೆಯೇ.. ಬಿಟ್ಟಾಕು. ಕೆಲಸ ಮುಂದುವರೆಸು ಹಂತಹAತವಾಗಿ ಹಣ ಕೂಡಿ ಸಾಲ ತೀರಿಸು..
ಇಂಥದ್ದನ್ನೆಲ್ಲಾ ಯೋಚಿಸು ಮನಸ್ಸೇ.. ಅದು ಬಿಟ್ಟು ಅದೋನೋ ಕಳವಳ ಆವರಿಸಿಕೊಂಡಿತೋ.. ನೇಣುಬಿಗಿದು, ವಿಷ ಕುಡಿದು, ಕೆರೆಗೆ ಬಿದ್ದು ಸಾಯುವ ಮನಸ್ಸು ಎಲ್ಲಿಂದ ಬಂತು.. ಯಾರು ಇದನ್ನು ಹೇಳಿಕೊಟ್ಟರು? ಬಾಲ್ಯದಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಧೈರ್ಯ ತುಂಬದೇ ಹೋದಲ್ಲಿ ಇಂಥ ವಿಪರೀತಕ್ಕೆ ಮಕ್ಕಳು ಹೋದಾರು. ನೆನಪಿಡಿ.
ಯಾವ ಮೊಬೈಲ್‌ನಲ್ಲಿ ಯಾವ ಆ್ಯಪ್ ಇದೆ.. ಯಾವ ಆ್ಯಪ್‌ನಲ್ಲಿ ಯಾವ ವಿಡಿಯೋಗಳಿವೆ ಎಂದು ತಿಳಿದಿರುವ ಮಕ್ಕಳ ಮನಸ್ಸುಗಳಿಗೆ ಸಂಸ್ಕಾರ ಕಲಿಸುವುದನ್ನು ಬಹುತೇಕ ಪೋಷಕರು ಮರೆಯುತ್ತಿದ್ದಾರೆ. ಭಯ ಬೇಡ ಮಗುವೇ ಎಂದು ಸ್ಥೆöÊರ್ಯ ನೀಡಬೇಕಾದ ಪೋಷಕರು ಮಕ್ಕಳೊಂದಿಗೆ ಮಾತನ್ನಾಡದೇ ಸುಪ್ತ ಭಯವನ್ನು ಆವರಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದು, ಟಿವಿ ನೋಡುವುದು, ಹರಟೆ ಹೊಡೆಯುವುದು.. ನಕ್ಕು ಸಂಭ್ರಮಿಸುವುದು, ಚರ್ಚಿಸುವುದು, ನಿರ್ಧಾರ ತೆಗೆದುಕೊಳ್ಳುವ ದಿನಗಳ ಬದಲಿಗೆ.. ನೀನೊಂದು ತೀರ. ನಾನೊಂದು ತೀರ ಎಂಬAತೆ ಮನೆಯ ಒಂದೊAದು ಕೋಣೆಯಲ್ಲಿಯೂ ಒಬ್ಬೊಬ್ಬರು ಅತಿಕ್ರಮಿಸಿಕೊಂಡು ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡು ಬಿಡುತ್ತಾರೆ. ಹೀಗಿರುವಾಗಲೇ ಭಯ ಆವರಿಸಿದಾಗ, ಮನಕ್ಕೆ ಮಂಕು ಕವಿದಾಗ ಏನು ಮಾಡಬೇಕೆಂದು ತಿಳಿಯದ ಯುವ ಮನಸ್ಸುಗಳು.. ಗಾಬರಿಬಿದ್ದು ಜೀವನ ಅಂತ್ಯಗೊಳಿಸುವ ಕಠೋರ ತೀರ್ಮಾನ ಕೈಗೊಳ್ಳುತ್ತವೆ.
ಮನೆಯಂತೆಯೇ ಶಾಲೆಗಳಲ್ಲಿಯೂ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ. ಅಂಕಗಳೇ ಮುಖ್ಯ, ಶಾಲೆಗಳ ರ‍್ಯಾಂಕ್‌ಗಳೇ ಶಾಲೆಯ ಅರ್ಹತೆಗೆ ಮಾನದಂಡ ಎಂಬ ಕಲ್ಪನೆ ದೂರವಾಗಬೇಕಾಗಿದೆ. ಶಾಲೆಯಲ್ಲಿ ಮಕ್ಕಳ ಮನಸ್ಸುಗಳು ಅರಳಬೇಕೇ ವಿನಾ ಶಿಕ್ಷಣ ಸಂಸ್ಥೆಗಳು ಶಿಕ್ಷೆಯ ಕೇಂದ್ರಗಳಾಗಬಾರದು. ಮಕ್ಕಳ ಮನಸ್ಸಿನಲ್ಲಿ ಧೈರ್ಯ ತುಂಬುವ, ಆತ್ಮಸ್ಥೆöÊರ್ಯ ತುಂಬುವ ಕೆಲಸ ಪ್ರತೀ ತರಗತಿಯಲ್ಲಿಯೂ ಆಗಬೇಕು.
ಎಲ್ಲಕ್ಕಿಂತ ಮುಖ್ಯವಾಗಿ, ತಾವು ಸಾವಿಗೆ ಶರಣಾದರೆ ತಮ್ಮನ್ನು ಹೆತ್ತು, ಹೊತ್ತು ಸಲುಹಿದ ಪೋಷಕರ ಜೀವನದಲ್ಲಿ ಮುಂದೆ ಏನೇನು ಸಮಸ್ಯೆಯಾಗುತ್ತದೆ. ಪ್ರೀತಿಯ ಮಕ್ಕಳನ್ನು ಕಳೆದುಕೊಂಡ ಪೋಷಕರು ಅನುಭವಿಸುವ ಸಂಕಟ ಏನು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಲೇಬೇಕಾಗಿದೆ. ತಮ್ಮ ಮನಸ್ಸು ನೊಂದಿರುವುದಕ್ಕೆ ಏನು ಕಾರಣ ಎಂದು ಕಂದಮ್ಮಗಳು ಪೋಷಕರಲ್ಲಿ ಮುಕ್ತವಾಗಿ ಹೇಳಬೇಕಾದ ವಾತಾವರಣ ದೊರಕಬೇಕಾಗಿದೆ. ಅಂಥ ಕಾರಣಕ್ಕೆ ಸೂಕ್ತ ಪರಿಹಾರವನ್ನು ಪೋಷಕರು ಮಕ್ಕಳಿಗೆ ಹೊಡೆಯದೇ, ತೆಗಳದೇ ನಮ್ರತೆಯಿಂದ ಕಂಡುಕೊAಡಾಗ ಖಂಡಿತವಾಗಿಯೂ ಪೋಷಕರು ಮತ್ತು ಮಕ್ಕಳ ಬಾಂಧವ್ಯ ಸುಧಾರಿಸುತ್ತದೆ. ಯಾವುದೇ ಸಮಸ್ಯೆ ಎದುರಾಗಲೀ ತಾನು ಅಪ್ಪ ಅಮ್ಮನೊಂದಿಗೆ ಅದನ್ನು ಹೇಳಿಕೊಳ್ಳುತ್ತೇನೆ. ನನ್ನ ಅಪ್ಪ ಅಮ್ಮ ಅದನ್ನು ಖಂಡಿತಾ ಪರಿಹರಿಸುತ್ತಾರೆ ಎಂಬ ಭಾವನೆ ಬಾಲ್ಯದಿಂದಲೇ ತಿಳುವಳಿಕೆಯ ಮೂಲಕ ಮಕ್ಕಳ ಅರಿವಿಗೆ ಬರಬೇಕಾಗಿದೆ.
ಮನೆಯೇ ಮೊದಲ ಪಾಠಶಾಲೆ ಹೇಗೋ ಅಪ್ಪ ಅಮ್ಮನೇ ಆಪ್ತ ಸಮಾಲೋಚಕರು.. ಜೀವನ ಇರುವುದು ಜೀವಿಸುವುದಕ್ಕೇ ವಿನಾ ನೊಂದುಕೊAಡು ತ್ಯಜಿಸುವುದಕ್ಕಲ್ಲ.. ಮನಸ್ಸಿರುವದು ಸಂತೋಷ ಹಂಚಿಕೊಳ್ಳಲೇ ವಿನಾ ಬೇರೆಯವರಿಗೆ ದುಖ ನೀಡುವುದಕ್ಕಲ್ಲ.. ಜೀವದಂತೆ ಜೀವನ ಕೂಡ ದೊಡ್ಡದು. ಯುವಪೀಳಿಗೆ ಮೊದಲು ಅರಿಯಬೇಕಾಗಿರುವುದೇ ಇದನ್ನು.. ಮನಸ್ಸು ನೊಂದಿದೆಯೇ .. ? ಜೀವ ತ್ಯಜಿಸುವುದು ಹೇಗೆಂದು ಯೋಚಿಸುವ ಮುನ್ನ ಪೋಷಕರೊಂದಿಗೆ, ಆಪ್ತರೊಂದಿಗೆ ಹೇಳಿ ಬಿಡು.. ನೊಂದಿರುವುದಕ್ಕೆ ಕಾರಣ..