ಶನಿವಾರಸಂತೆ, ನ. ೨೮: ಪಟ್ಟಣದ ತರಕಾರಿ ಅಂಗಡಿಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಹಬ್ಬದ ಮುನ್ನಾ ದಿನ ಸೋಮವಾರ ಬೆರಕೆ ತರಕಾರಿಗಳ ವ್ಯಾಪಾರದ ಭರಾಟೆ ಜೋರಾಗಿತ್ತು. ಗ್ರಾಹಕರು ಬೆಳಿಗ್ಗೆಯಿಂದಲೇ ಕುಕ್ಕೆಯಲ್ಲಿ ಕತ್ತರಿಸಿಟ್ಟ ಬೆರಕೆ ತರಕಾರಿಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದ ದೃಶ್ಯ ಕಂಡುಬAದಿತು.
ಹಬ್ಬದ ಹಿಂದಿನ ದಿನ ತರಕಾರಿ ಅಂಗಡಿಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಕತ್ತರಿಸಿ ಕುಕ್ಕೆಗಳಲ್ಲಿ ತುಂಬಿಸಿಡುವುದು ವಾಡಿಕೆ. ಈ ವಿಭಾಗದಲ್ಲಿ ಷಷ್ಠಿ ಹಬ್ಬದಲ್ಲಿ ತರಕಾರಿಗಳಿಗೆ ಪ್ರಾಮುಖ್ಯತೆ ಈ ಒಂದು ದಿನ ಮಾತ್ರ. ಹಲವು ಬಗೆಯ ತರಕಾರಿಗಳನ್ನು ಬಳಸಿ ಪಲಾವ್ ಹಾಗೂ ಸಾಂಬಾರ್ ಮಾಡುತ್ತಾರೆ. ಉಪವಾಸಕಾಯಿ ಎಂದು ಮನೆಮನೆಗೆ ಜೋಳಿಗೆ ಹಿಡಿದು ಬರುವ ಮಕ್ಕಳ ಜೋಳಿಗೆಗೆ ಬೆರಕೆ ತರಕಾರಿ ದಾನ ನೀಡುತ್ತಾರೆ. ಮಹಿಳೆಯರು ಹಾಗೂ ಮಕ್ಕಳು ಆತ್ಮೀಯರ ಮನೆಮನೆಗೆ ತೆರಳಿ ತರಕಾರಿ ಹಂಚಿ ಶುಭಾಶಯ ಕೋರಿ ಸಂಭ್ರಮಿಸುತ್ತಾರೆ.
೧ ಕೆ.ಜಿ. ಬೆರಕೆ ತರಕಾರಿ ಬೆಲೆ ರೂ. ೪೦, ಟೊಮೆಟೊ ೧ ಕೆ.ಜಿ.ಗೆ ೧೦, ಒಂದೇ ಬಗೆಯ ತರಕಾರಿ ದರ ಕೆ.ಜಿ.ಗೆ ರೂ. ೮೦, ಬೀನ್ಸ್ ಕಾಳು ಕೆ.ಜಿ.ಗೆ ರೂ. ೮೦ರಂತೆ ಹಾಗೂ ಸೊಪ್ಪು ೧ ಕಟ್ಟಿಗೆ ರೂ.೫ರಂತೆ ಬಿರುಸಿನಿಂದ ಮಾರಾಟವಾಯಿತು.