ವೀರಾಜಪೇಟೆ, ನ. ೨೭: ಕಟ್ಟಡ ಮತ್ತು ಬಡ ಕುಟುಂಬದ ಕಾರ್ಮಿಕರು ಅದರಲ್ಲಿಯೂ ಮಹಿಳಾ ಕಾರ್ಮಿಕರು ಸರಕಾರದ ಸೌಲಭ್ಯಗಳನ್ನು ಪಡೆದು ಕೊಳ್ಳಲು ಮುಂದೆ ಬರಬೇಕು ಎಂದು ವೀರಾಜಪೇಟೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಸಿ. ಮಾದಪ್ಪ ಹೇಳಿದರು. ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿ ವತಿಯಿಂದ ವೀರಾಜಪೇಟೆ ನಗರದಲ್ಲಿರುವ ಬೋರೇಗೌಡ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಟ್ಟಡ ಮತ್ತು ಇತರ ನಿರ್ಮಾಣ ‘‘ಮಹಿಳಾ ಕಾರ್ಮಿಕರಿಗೆ ಪೌಷ್ಟಿಕಾಂಶ ಕಿಟ್ ಇತರಣೆ'' ಕಾರ್ಯಕ್ರಮದಲ್ಲಿ ಮಾತನಾಡಿ, ಕಟ್ಟಡ ಕಾರ್ಮಿಕರು ತಮ್ಮ ಸದಸ್ಯತ್ವವನ್ನು ನೋಂದಣೆ ಮಾಡಿಕೊಳ್ಳುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಸರಕಾರ ೬೦ ವರ್ಷ ಪೂರೈಸಿದ ಫಲಾನುಭವಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಕೆಎಸ್ಆರ್ಟಿಸಿ ಬಸ್ಪಾಸ್ ಸೌಲಭ್ಯಗಳನ್ನು ನೀಡಲಾಗುವುದು ಎಂದ ಮಾದಪ್ಪ ಅವರು, ನಕಲಿ ದಾಖಲೆಗಳನ್ನು ನೀಡಿ ಸೌಲಭ್ಯಗಳನ್ನು ಪಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಪೌಷ್ಟಿಕಾಂಶ ಕಿಟ್ ವಿತರಣೆ ಸಂದರ್ಭ ಕಾರ್ಮಿಕ ಕಚೇರಿಯ ಸಹಾಯಕ ಅಧಿಕಾರಿ ಎಸ್. ನವೀನ್, ಕಟ್ಟಡ ಕಾರ್ಮಿಕ ಜಿಲ್ಲಾ ಸಮಿತಿಯ ಅಧ್ಯಕ್ಷ ಸಿ.ಜಿ. ವರ್ಗಿಸ್ ಮತ್ತು ಇತರ ಸದಸ್ಯರುಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ೫೩೦ ಮಹಿಳಾ ಕಾರ್ಮಿಕರಿಗೆ ಪೌಷ್ಟಿಕಾಂಶ ಕಿಟ್ ವಿತರಿಸಲಾಯಿತು.