ಮಡಿಕೇರಿ, ೨೮: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ವಿಶೇಷಚೇತನರ ದಿನಾಚರಣೆ ಅಂಗವಾಗಿ ಮಡಿಕೇರಿ ತಾಲೂಕು ವಿಶೇಷಚೇತನರ ಕ್ರೀಡಾಕೂಟಕ್ಕೆ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಭಾರದ ಗುಂಡು ಎಸೆಯುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನಕ್ಕೆ ಸಹಕಾರಿಯಾಗಿವೆ. ವಿಶೇಷ ಚೇತನರನ್ನು ಕಡೆಗಣಿಸದೆ ಅವಕಾಶ ನೀಡಬೇಕು. ಇದರಿಂದ ಅವರ ಸಾಮಾರ್ಥ್ಯ ತಿಳಿಯುತ್ತದೆ. ಇಂದು ವಿಶೇಷ ಚೇತನರು ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿದ್ದಾರೆ. ಗುರಿ ಹಾಗೂ ಛಲ ಇದ್ದರೆ ಏನು ಬೇಕಾದರು ಸಾಧಿಸಬಹುದು ಎಂದು ತೋರಿದ್ದಾರೆ ಎಂದು ಹೇಳಿದ ಅವರು, ವಿಶೇಷ ಚೇತನರಿಗಾಗಿ ರೂಪಿಸಿರುವ ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ನಗರಸಭೆಯಲ್ಲಿ ಮನೆ ನಿರ್ಮಾಣ ಸೇರಿದಂತೆ ಶಿಕ್ಷಣ, ಆರೋಗ್ಯ, ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನುದಾನ ಮೀಸಲಿರಿಸಲಾಗಿದೆ. ಅರ್ಹರು ಇದರ ಪ್ರಯೋಜನಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತ, ಕೊಡಗು ವಿದ್ಯಾಲಯ ಅಪರ್ಚುನಿಟಿ ಶಾಲೆಯ ಮುಖ್ಯ ಶಿಕ್ಷಕ ಗೀತಾ ಶ್ರೀಧರ್, ವಿಶೇಷಚೇತನರ ಸಂಘ ಅಧ್ಯಕ್ಷ ಮಹೇಶ್ವರ್, ಜಿಲ್ಲಾ ದಿವ್ಯಾಂಗ ಸಂಘದ ಈಶ್ವರಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಲಹಾ ಸಮಿತಿ ಸದಸ್ಯ ಅಜಯ್ ಸೂದ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವಿಶೇಷ ಚೇತನರಿಗಾಗಿ ಕಾಳು ಹೆಕ್ಕುವುದು, ೧೦೦ ಮೀಟರ್ ಓಟ, ಶಾಟ್‌ಪೂಟ್, ಸಂಗೀತ ಕುರ್ಚಿ, ಬಾಂಬ್ ಇನ್ ದಿ ಸಿಟಿ ಸೇರಿದಂತೆ ಇನ್ನಿತರ ಸ್ಪರ್ಧೆಗಳು ನಡೆದವು. ಮಡಿಕೇರಿ ತಾಲೂಕಿನ ವಿವಿಧೆಡೆಯಿಂದ ಬಂದ ಹಲವರು ಆಟವಾಡಿ ಸಂಭ್ರಮಿಸಿದರು.