(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ನ. ೨೫ : ರಾಜ್ಯದ ಕ್ರೀಡಾ ತವರೂರು ಕೊಡಗು. ಸದಾ ಕ್ರೀಡೆಯಲ್ಲಿ ಸುದ್ದಿಯಲ್ಲಿರುವ ರಾಜ್ಯದ ಏಕೈಕ ಜಿಲ್ಲೆ ಕೊಡಗು.

ಇತ್ತೀಚಿನ ದಿನಗಳಲ್ಲಿ ಹಾಕಿ ತವರೂರು ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಕಲರವ ಕೂಡ ಆರಂಭಗೊAಡಿದೆ.

ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಯನ್ನು ತಳಮಟ್ಟದಿಂದಲೇ ಬೆಳೆಸುವ ಕಾರ್ಯಕ್ಕೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಪಣತೊಟ್ಟಿವೆ.

ಗ್ರಾಮೀಣ ಭಾಗದ ಫುಟ್ಬಾಲ್ ಪಟುಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿ, ರಾಜ್ಯ ಹಾಗೂ ರಾಷ್ಟçಮಟ್ಟದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಆಡಲು ಅವಕಾಶ ಮಾಡಿಕೊಡುತ್ತಿವೆ.

ಜಿಲ್ಲೆಯ ಕಾಲ್ಚೆಂಡಿಗೆ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮರುಜೀವ ತುಂಬಿದೆ.

ಅAಡರ್ ೧೬ ಕಾಲ್ಚೆಂಡು ಪಂದ್ಯಾವಳಿ

ಡಿಸೆAಬರ್ ತಿಂಗಳೊಳಗೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯ ಹದಿನಾರು ವಯಸ್ಸಿನ ವಯೋಮಾನದೊಳಗಿನ ಕ್ರೀಡಾಪಟುಗಳಿಗೆ ಕಾಲ್ಚೆಂಡು ಪಂದ್ಯಾವಳಿಯನ್ನು ಜಿಲ್ಲಾ ಫುಟ್ಬಾಲ್ ಸಂಸ್ಥೆಗೆ ಸೇರಿದ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಸಲು ಯೋಜನೆ ಕೈಗೊಳ್ಳಲಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ತಳಮಟ್ಟದಿಂದಲೇ ಫುಟ್ಬಾಲ್ ಆಟಗಾರರನ್ನು ಹುಟ್ಟು ಹಾಕುವ ಹೊಸ ಪ್ರಯತ್ನಕ್ಕೆ ಜಿಲ್ಲಾ ಫುಟ್ಬಾಲ್ ಸಂಸ್ಥೆ ಕೈ ಹಾಕಿದೆ.

ಬೇಬೀಸ್ ಲೀಗ್ ಫುಟ್ಬಾಲ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫುಟ್ಬಾಲ್ ವೇಗವಾಗಿ ಬೆಳೆಯುತ್ತಿದೆ. ೪ ವರ್ಷ ಪ್ರಾಯವಿರುವಾಗಲೇ ಮಕ್ಕಳಿಗೆ ಫುಟ್ಬಾಲ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುತ್ತಾ, ರಾಜ್ಯ ಫುಟ್ಬಾಲ್ ಸಂಸ್ಥೆ ಬೇಬೀಸ್ ಲೀಗ್ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಿದೆ. ಅದೇ ಮಾದರಿಯ ಮುಂದಿನ ದಿನಗಳಲ್ಲಿ ಬೇಬೀಸ್ ಲೀಗ್ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿ, ಚಿಕ್ಕ ವಯಸ್ಸಿನಲ್ಲೇ ಫುಟ್ಬಾಲ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಮುಂದಾಗಿದೆ.

ಅಮ್ಮತ್ತಿ, ಕುಶಾಲನಗರ, ವೀರಾಜಪೇಟೆ, ಮರಗೋಡು, ಗೋಣಿಕೊಪ್ಪ ಭಾಗಗಳಲ್ಲಿ ಬೇಬಿಸ್ ಲೀಗ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.

ಅಂಡರ್ ೮, ೧೦ ಹಾಗೂ ೧೨ ವರ್ಷ ವಯೋಮಾನದ ಮಕ್ಕಳಲ್ಲಿ ಫುಟ್ಬಾಲ್ ಬೆಳೆಸಲು ಬೇಬಿಸ್ ಲೀಗ್ ಹಮ್ಮಿಕೊಳ್ಳಲಾಗುತ್ತಿದೆ..

ಅಸೋಸಿಯೇಷನ್‌ನಲ್ಲಿ ನೋಂದಣಿಗೊAಡ ೨೨ ತಂಡಗಳು

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಫುಟ್ಬಾಲ್ ಬೆಳೆಯುತ್ತಿದೆ.

ಗ್ರಾಮೀಣ ಭಾಗದ ಫುಟ್ಬಾಲ್ ಪಟುಗಳಿಗೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉತ್ತಮ ವೇದಿಕೆ ಒದಗಿಸುತ್ತಿದೆ. ಜಿಲ್ಲೆಯ ಸುಂಟಿಕೊಪ್ಪದ ಯುವ ಫುಟ್ಬಾಲ್ ಆಟಗಾರ ದಿವಾಕರ್ ಕರ್ನಾಟಕ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿ, ಕರ್ನಾಟಕ ತಂಡವನ್ನು ಅಹ್ಮದಾಬಾದ್‌ನಲ್ಲಿ ನಡೆದ ೩೬ ನೇ ನ್ಯಾಷನಲ್ ಗೇಮ್ಸ್ನಲ್ಲಿ ಪ್ರತಿನಿಧಿಸಿದ್ದರು. ಜಿಲ್ಲಾ ಹಾಗೂ ರಾಜ್ಯ ಫುಟ್ಬಾಲ್ ಸಂಸ್ಥೆಯಲ್ಲಿ ಜಿಲ್ಲೆಯ ೨೨ ಫುಟ್ಬಾಲ್ ಕ್ಲಬ್‌ಗಳು ಅಧಿಕೃತವಾಗಿ ನೋಂದಣಿಗೊAಡಿವೆ ಹಾಗೂ ೩೫೦ಕ್ಕೂ ಹೆಚ್ಚು ಆಟಗಾರರು ಕೂಡ ನೋಂದಣಿ ಮಾಡಿಕೊಂಡಿದ್ದಾರೆ.

ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ನೋಂದಣಿ ಗೊಂಡ ತಂಡಗಳ ನಡುವೆ ಲೀಗ್ ಮಾದರಿಯಲ್ಲಿ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿ ಕೊಡಗು ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಆಟಗಾರರು ಅಂತರ್ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ.