ನಾಪೋಕ್ಲು, ನ. ೨೫: ಸಮೀಪದ ಕಕ್ಕಬೆ - ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಬೆಳೆಗಾರರ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು ಬಾರಿ ಸಂಕಷ್ಟ ಎದುರಾಗಿದೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.

ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಬಿ ಎಂ. ಪ್ರತೀಪ ಕುಂಜಿಲ ಗ್ರಾಮ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಸುಮಾರು ೧೧ ಎಕರೆ ತೋಟವನ್ನು ಪಡೆದುಕೊಂಡಿದ್ದು ತೋಟದಲ್ಲಿನ ಕಾಫಿ ಹಾಗೂ ಅಡಿಕೆ, ಬಾಳೆ ಸೇರಿದಂತೆ ಇನ್ನಿತರ ಗಿಡಗಳು ಈ ದಾಳಿಯಿಂದಾಗಿ ನಷ್ಟವಾಗಿದೆ. ಇಷ್ಟು ಸಾಲದೆಂಬAತೆ ತೋಟಕ್ಕೆ ನೂತನವಾಗಿ ಬೇಲಿಗೆ ಅಳವಡಿಸಲಾದ ಸಿಮೆಂಟ್ ಕಂಬಗಳನ್ನು ಮುರಿದು ದ್ವಂಸ ಮಾಡಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಒಂದೆಡೆ ಪ್ರಕೃತಿ ವಿಕೋಪದಿಂದ ನಷ್ಟ ಉಂಟಾದರೆ ಇನ್ನೊಂದೆಡೆ ಕಾಡಾನೆಗಳ ಉಪಟಳದಿಂದ ವರ್ಷವಿಡಿ ದುಡಿದ ಫಸಲು ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ. ಗ್ರಾಮದ ನಾಟೋಳಂಡ ಪೂವಣ್ಣ, ನಂಜುAಡ ಉದಿಯಂಡ ಕುಂಜ್ಞಪ್ಪ, ಕುಟ್ಟಪ್ಪ ಸೇರಿದಂತೆ ಹಲವು ಬೆಳೆಗಾರರ ತೋಟಗಳು ಬಹುತೇಕ ದ್ವಂಸವಾಗಿದೆ. ಕಾಡಾನೆಗಳನ್ನು ಕಾಡಿಗೆ ಅಟ್ಟಿ ಸರ್ಕಾರ, ಅರಣ್ಯ ಇಲಾಖೆ ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಬಿ ಎಂ. ಪ್ರತೀಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.