ಮಡಿಕೇರಿ, ನ. ೨೪: ಕೊಡಗಿನಲ್ಲಿ ದಿನದಿಂದ ದಿನಕ್ಕೆ ವಾತಾವರಣದಲ್ಲಿ ಏರುಪೇರು ಕಂಡುಬರುತ್ತಿದೆ. ಯಾವಾಗ ಮಳೆ ಬರುತ್ತದೆ? ಯಾವಾಗ ಬಿಸಿಲು ಮರೆಯಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗದಂತ ಪರಿಸ್ಥಿತಿಯಿದೆ. ಬಿಸಿಲಿದೆ ಎಂದು ಕೊಡೆ ಇಲ್ಲದೆ ಓಡಾಡುವ ಸಾರ್ವಜನಿಕರು ದಿಢೀರನೆ ಸುರಿಯುವ ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡುವುದು ಸರ್ವೇ ಸಾಮಾನ್ಯವೆನಿಸಿದೆ. ಪ್ರಾಣಿಗಳು ಕೂಡ ಇದರಿಂದ ಹೊರತಾಗಿಲ್ಲ. ಇಂದು ಬೆಳಿಗ್ಗೆ ನಗರದಲ್ಲಿ ಮಳೆ ಸುರಿದ ವೇಳೆ ಮಳೆಯಿಂದ ರಕ್ಷಣೆ ಪಡೆದುಕೊಳ್ಳುವುದಕ್ಕಾಗಿ ನಾಲ್ಕು ಬೆಕ್ಕುಗಳು ಪತ್ರಿಕಾ ಭವನದ ಸಮೀಪ ನಿಂತಿದ್ದ ಕಾರೊಂದರ ಕೆಳಗೆ ಕುಳಿತಿದ್ದ ದೃಶ್ಯ ಅನಿರೀಕ್ಷಿತ ಮಳೆಯಿಂದಾಗುವ ಅವಾಂತರವನ್ನು ಎತ್ತಿ ತೋರಿಸುವಂತಿತ್ತು. -ಉಜ್ವಲ್ ರಂಜಿತ್