ಸೋಮವಾರಪೇಟೆ, ನ. ೨೪: ವಿಶೇಷ ಚೇತನ ಮಕ್ಕಳಲ್ಲಿಯೂ ಕಲಿಕಾ ಸಾಮರ್ಥ್ಯ ಇರುತ್ತದೆ. ಅವರಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವಂತೆ ಪ್ರೇರೇಪಿಸಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ಹೇಳಿದರು.

ತಾಲೂಕಿನ ಗರಗಂದೂರು ಸ್ವಸ್ಥ ವಿಶೇಷ ಮಕ್ಕಳ ಶಾಲೆಯ ವತಿಯಿಂದ ನಡೆದ ಜಿಲ್ಲಾಮಟ್ಟದ ವಿಶೇಷಚೇತನ ಮಕ್ಕಳ ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಇನ್ನರ್‌ವೀಲ್ ಸಂಸ್ಥೆ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್ ಮಾತನಾಡಿ, ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂದೇಟು ಹಾಕುವ ಇಂದಿನ ಸಮಾಜದಲ್ಲಿ ಸ್ವಸ್ಥ ಸಂಸ್ಥೆ ವಿಶೇಷ ಮಕ್ಕಳ ಪಾಲನೆ, ಪೋಷಣೆಯೊಂದಿಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಾಗೂ ಪೇಪರ್ ಕಟಿಂಗ್, ಬ್ಯಾಗ್ ತಯಾರಿಕೆ, ಹೊಲಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ಸ್ವಸ್ಥ ಸಂಸ್ಥೆ ನಿರ್ದೇಶಕಿ ತೇಲಪಂಡ ಆರತಿ ಸೋಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಕೂರ್ಗ್ ಫೌಂಡೇಶನ್ ಟ್ರಸ್ಟಿ ಕಾಕಮಾಡ ಗಂಗಾ ಚಂಗಪ್ಪ, ಸುಂಟಿಕೊಪ್ಪ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಗೌತಮ್ ಮೈನಿ ಉಪಸ್ಥಿತರಿದ್ದರು.

ಕೀಡೆಯಲ್ಲಿ ಸರ್ವಾಂಗೀಣ ಪ್ರಶಸ್ತಿಯನ್ನು ಗರಗಂದೂರು ಸ್ವಸ್ಥ ಸಂಸ್ಥೆ ಪಡೆದರೆ, ದ್ವಿತೀಯ ಸ್ಥಾನವನ್ನು ಪಾಲಿಬೆಟ್ಟ ಚೆಶೈರ್ ಹೋಂ ವಿಶೇಷ ಮಕ್ಕಳ ಶಾಲೆ ಪಡೆಯಿತು.