ಸೋಮವಾರಪೇಟೆ, ನ. ೨೫: ಭಾಷೆಯ ಮೇಲೆ ಅಭಿಮಾನವನ್ನು ಮೂಡಿಸಿಕೊಂಡರೆ ಮಾತ್ರ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸ ಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡ ಭಾ಼ಷೆಯನ್ನು ಹೆಚ್ಚಾಗಿ ಬಳಸುವುದರ ಮೂಲಕ ಭಾಷಾ ಬೆಳವಣಿಗೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದ ಅವರು, ವಿದ್ಯಾರ್ಥಿಗಳಿದ್ದಾಗಲೇ ಕವನ, ಚುಟುಕು, ಕತೆ, ಕಾದಂಬರಿಗಳನ್ನು ಬರೆಯುವುದಕ್ಕೆ ಅಭ್ಯಾಸ ಮಾಡಿಕೊಳ್ಳಬೇಕು ಹಾಗೂ ಕನ್ನಡ ಪತ್ರಿಕೆಗಳನ್ನು ಓದಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಹೆಚ್ಚಿನ ಸಂಖ್ಯೆಯಲ್ಲಿ ಪರಿಷತ್ನ ಸದಸ್ಯತ್ವ ಹೊಂದುವ ಮೂಲಕ ಕನ್ನಡದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಿದ್ದರು. ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಕಾವೇರಿ ಪ್ರಕಾಶ್ ಮಾತನಾಡಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಸಂತ ಜೋಸೆಫ್ಸ್ ವಿದ್ಯಾಸಂಸ್ಥೆಯ ಸಂಚಾಲಕ ರಾಯಪ್ಪ, ಜಿಲ್ಲಾ ಕಸಾಪ ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.
ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಿ. ಸುಜಲಾದೇವಿ, ವೃತ್ತ ನಿರೀಕ್ಷಕ ಪರಶಿವಮೂರ್ತಿ, ಸರಕಾರಿ ಆಸ್ಪತ್ರೆಯ ಶಸ್ತçಚಿಕಿತ್ಸಕ ಡಾ. ಸತೀಶ್, ಕವಿ ಮತ್ತು ಬರಹಗಾರ ನ.ಲ. ವಿಜಯ, ಪ್ರಗತಿಪರ ಕೃಷಿಕ ಶಾಂತಳ್ಳಿಯ ಕೆ.ಕೆ. ಮುತ್ತಣ್ಣ ಇವರುಗಳನ್ನು ಸನ್ಮಾನಿಸಲಾಯಿತು.