ಕೂಡಿಗೆ, ನ. ೨೫: ಹುದುಗೂರು ಗ್ರಾಮದ ನೂರಾರು ಎಕರೆಗಳಷ್ಟು ಪ್ರದೇಶವು ಶೀತಪೀಡಿತ ಪ್ರದೇಶವಾಗಿದ್ದು, ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಮೈಸೂರು ವಿಭಾಗೀಯ ಕಂದಾಯ ಇಲಾಖೆ ವತಿಯಿಂದ ನೀರಾವರಿ ಇಲಾಖೆಗೆ ಶೀತಪೀಡಿತ ಪ್ರದೇಶಗಳ ವರದಿ ನೀಡಲು ಸೂಚನೆ ಬಂದಿದ್ದರೂ ಸಹ ಇದುವರೆಗೆ ನೀರಾವರಿ ಇಲಾಖೆಯವರು ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ ಜನಜಾಗೃತಿ ರೈತ ಸಂಘ ಸೇರಿದಂತೆ ಹುದುಗೂರು ಕಾಳಿದೇವನ ಹೊಸೂರು, ಮದಲಾಪುರ, ಮಾವಿನಹಳ್ಳ ಗ್ರಾಮದ ಪ್ರಮುಖರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ಕಳೆದ ೫೦ ವರ್ಷಗಳ ಹಿಂದೆ ನಿರ್ಮಾಣವಾದ ಹಾರಂಗಿ ಮುಖ್ಯ ನಾಲೆ, ಅದಕ್ಕೆ ಸಂಬAಧಿಸಿದ ಉಪ ಕಾಲುವೆ ಮತ್ತು ಸೇತುವೆಗಳು ದುಸ್ಥಿತಿಯಲ್ಲಿದ್ದು, ಸಮರ್ಪಕವಾದ ಗುಣಮಟ್ಟದ ಕಾಮಗಾರಿಯು ನಡೆಯದೆ ಮುಖ್ಯನಾಲೆಯ ನೀರು ಸೋರಿಕೆಯಿಂದಾಗಿ ಹುದುಗೂರು, ಕಾಳಿದೇವನ ಹೊಸೂರು, ಮದಲಾಪುರದ ಅನೇಕ ರೈತರ ನೂರಾರು ಎಕರೆ ಭೂಮಿಯು ಶೀತಪೀಡಿತ ಪ್ರದೇಶಗಳಾಗಿವೆ. ಇದರಿಂದಾಗಿ ಯಾವುದೇ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಅಲ್ಲದೆ ೧೯೨೫ರ ಬ್ರಿಟಿಷ್‌ರ ಕಾಲದಲ್ಲಿ ಆರಂಭವಾಗಿರುವ ಗೋಸದನ ಮತ್ತು ಪಶು ಆಸ್ಪತ್ರೆಯನ್ನು ಸಂಬAಧಿಸಿದ ಪಶುಪಾಲನಾ ಇಲಾಖೆಯ ವತಿಯಿಂದ ಮೇಲ್ದರ್ಜೆಗೆ ಏರಿಸಬೇಕೇಂದು ಅನೇಕ ಬಾರಿ ಸಂಬAಧಿಸಿದ ಇಲಾಖೆಯರಿಗೆ ಪತ್ರ ವ್ಯವಹಾರ ಮಾಡಿದರೂ ಇದುವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಜಿಲ್ಲಾಧಿಕಾರಿ ಅವರು ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಲಾಯಿತು.

ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ೧೫ಕ್ಕೂ ಹೆಚ್ಚು ಉಪ ಗ್ರಾಮಗಳು ಹುದುಗೂರು ಗ್ರಾಮದಲ್ಲಿರುವ ಪಶು ಆಸ್ಪತ್ರೆಯನ್ನೇ ಅವಲಂಭಿಸಿವೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೫ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಈ ಭಾಗದ ನೂರಾರು ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಜೊತೆಗೆ ಲಕ್ಷಗಟ್ಟಲೆ ಹಣವನ್ನು ನೀಡಿ ಹೈಬ್ರೀಡ್ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಇದರ ಮೂಲಕ ಹಾಲು ಕರೆದು ಸಹಕಾರ ಸಂಘಗಳಿಗೆ ಹಾಕುತ್ತಿದ್ದಾರೆ. ಆದರೆ ಪಶುಗಳ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಇಲ್ಲದೆ ಹಸುಗಳು ಸಾವನ್ನಪ್ಪಿದ ಘಟನೆಗಳು ನಡೆದಿವೆ. ಆದ್ದರಿಂದ ಪಶು ಚಿಕಿತ್ಸಾಲಯವನ್ನು ಮೇಲ್ದರ್ಜೆಗೆ ಏರಿಸುವಂತೆ ಮನವಿ ಮೂಲಕ ಒತ್ತಾಯ ಮಾಡಲಾಯಿತು.

ಅಲ್ಲದೆ ಹಾರಂಗಿಯಲ್ಲಿ ಇರಬೇಕಾದ ಕಾವೇರಿ ನೀರಾವರಿ ನಿಗಮದ ಪ್ರಮುಖ ಕಚೇರಿಗಳು ಕುಶಾಲನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ರೈತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಾರಂಗಿ ಬದಲು ಕುಶಾಲನಗರಕ್ಕೆ ಹೋಗುವ ಪ್ರಸಂಗ ಎದುರಾಗಿದೆ. ಈ ಬಗ್ಗೆ ಅಸಮಾಧಾನಗೊಂಡ ಗ್ರಾಮಸ್ಥರು, ಜನಜಾಗೃತಿ ರೈತ ಸಂಘದ ಅಧ್ಯಕ್ಷರು ಪರಿಹಾರ ನೀಡುವ ಸಲುವಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಿದರು.