ಮಡಿಕೇರಿ, ನ. ೨೫: ಮಳೆಗಾಲದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ನಿರ್ಮಿಸಲಾದ ಪುನರ್ವಸತಿಯನ್ನು ತ್ವರಿತವಾಗಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಹಾಗೂ ಹದಗೆಟ್ಟ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿಪಡಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ತಾ. ೨೮ ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ನಿಡುಗಣೆಯಲ್ಲಿ ೭೦ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ, ಮುಖ್ಯಮಂತ್ರಿಗಳು ಉದ್ಘಾಟನೆ ಬರುತ್ತಾರೆ ಎಂದು ಹಸ್ತಾಂತರ ತಡವಾಗುತ್ತಿದೆ. ಇದರಿಂದ ನಿರಾಶ್ರಿತರು ಸಮಸ್ಯೆ ಅನುಭವಿಸುತ್ತಿದ್ದು, ಮುಖ್ಯಮಂತ್ರಿ ಬರುವ ನೆಪದಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ದೂರಿದ ಅವರು, ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

ಜಿಲ್ಲಾಡಳಿತ ಎದುರು ಪ್ರತಿಭಟನೆ ನಡೆಯಲಿದ್ದು, ಸಮಸ್ಯೆ ಬಗೆಹರಿಸಲು ೧ ವಾರದ ಗಡುವು ನೀಡಲಾಗುವುದು. ಎಚ್ಚೆತ್ತುಕೊಳ್ಳದಿದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಗಣೇಶ್ ಎಚ್ಚರಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು ಯಾರೆಂದು ಇನ್ನು ಅಂತಿಮ ಗೊಂಡಿಲ್ಲ. ವರಿಷ್ಠರ ಸೂಚನೆಯಂತೆ ಮುನ್ನಡೆಯಲಾಗುವುದು. ಸದ್ಯಕ್ಕೆ ಮಡಿಕೇರಿ ಕ್ಷೇತ್ರಕ್ಕೆ ಇಸಾಖ್ ಖಾನ್ ಅರ್ಜಿ ಸಲ್ಲಿಸಿದ್ದು ಹೊರತುಪಡಿಸಿ ಬೇರೆ ಯಾರು ಅರ್ಜಿ ನೀಡಿಲ್ಲ. ಕೊಡಗಿನ ಚುನಾವಣೆ ಮೇಲ್ವಿಚಾರಣೆಗೆ ಪಕ್ಷದ ರಾಜ್ಯಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ ಹಾಗೂ ವಿದ್ಯಾರ್ಥಿ ಘಟಕದ ಅಧ್ಯಕ್ಷ ಉಮೇಶ್ ಗೌಡ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಕೆ.ಎ. ಮಂಜುನಾಥ್, ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಬಿ.ರವಿ, ಯುವ ಘಟಕದ ವಕ್ತಾರ ರವಿಕಿರಣ್, ಸಂಘಟನಾ ಕಾರ್ಯದರ್ಶಿ ಗಣೇಶ್ ಹಾಜರಿದ್ದರು.