ಮಡಿಕೇರಿ, ನ. ೨೫: ಕೊಡಗು ಜಿಲ್ಲಾ ಲೇಖಕ, ಕಲಾವಿದರ ಬಳಗ ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ನಗರದ ಲಯನ್ಸ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಮಾರುತಿ ದಾಸಣ್ಣನವರ್ ಬರೆದ ‘ಕಣ್ಣ ಹಿಂದಿನ ಕಡಲು’ ಕವನ ಸಂಕಲನ, ‘ಅಕ್ಕತಂಗ್ಯಾರು’ ಕಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಮಾರುತಿ ದಾಸಣ್ಣನವರ್, ಕನ್ನಡಕ್ಕೆ ವಿಶೇಷ ಸಾಹಿತ್ಯ ಪರಂಪರೆ ಇದೆ. ಸಾಹಿತ್ಯ ನಮ್ಮ ಅಸ್ಮಿತೆಯಾಗಿದೆ. ಯುವಜನತೆ ಓದಿನ ಅಭ್ಯಾಸ ಮೈಗೂಡಿಸಿ ಕೊಳ್ಳಬೇಕು. ಶರಣರು ಸಾಹಿತ್ಯದ ಮೂಲಕ ಕ್ರಾಂತಿ ಮಾಡಿ ವಿಶ್ವಮಾನವ ಸಂದೇಶ ನೀಡಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವ ಸಂದೇಶವನ್ನು ಅಕ್ಕಮಹಾದೇವಿ ಸಾಹಿತ್ಯದ ಮೂಲಕ ಪರಿಣಾಮ ಕಾರಿಯಾಗಿ ಮುಟ್ಟಿಸಿದರು. ಸಂತ ಷರೀಫರು, ಕುವೆಂಪು, ದೇವನೂರು ಮಹದೇವ, ಶಿವರಾಂ ಕಾರಂತರು, ದಾ.ರ. ಬೇಂದ್ರೆ ಸೇರಿದಂತೆ ಹಲವು ಸಾಹಿತಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಕ್ರಾಂತಿಕಾರಕ ಬದಲಾವಣೆಯನ್ನು ಬರಹದ ಮೂಲಕ ತಂದಿದ್ದಾರೆ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಇತರರಿಗೆ ತಿಳಿಸುವ ಕೆಲಸವಾU Àಬೇಕೆಂದು ಕರೆ ನೀಡಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ, ಉಪನ್ಯಾಸಕ ಕಾಜೂರು ಸತೀಶ್, ಸಾಹಿತ್ಯ ನಿಂತ ನೀರಲ್ಲ. ಒಂದು ಘಟನೆ ವಿವಿಧ ಆಯಾಮಗಳಲ್ಲಿ ಬರಹಗಾರನಿಗೆ ಕಾಣಿಸುತ್ತವೆ. ಪುಸ್ತಕಗಳನ್ನು ಓದುವಾಗ ಆಳವಾಗಿ ಇಳಿಯಬೇಕು. ಅದಾಗ ಮಾತ್ರ ಅದರ ನೈಜ ವಿಚಾರಧಾರೆಗಳು ತಿಳಿಯುತ್ತವೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಒಲವು ಮೂಡಿಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲೇಖಕ ಕಲಾವಿದರ ಬಳಗದ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ಮೂಲಕ ಸಾಹಿತ್ಯ ಹಾಗೂ ಕಲೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ಗಡಿಯಲ್ಲಿ ಕನ್ನಡ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಯುವ ವಾಗ್ಮಿ ಸುಂಟಿಕೊಪ್ಪದ ವಿದ್ಯಾರ್ಥಿನಿ ಶ್ರೀಷಾ ಮಾತನಾಡಿ, ಕನ್ನಡ ಏಕೀಕರಣಕ್ಕೆ ಹಲವರು ಶ್ರಮಿಸಿದ್ದಾರೆ. ಮೊದಲು ಕರ್ನಾಟಕದ ಅನೇಕ ಭೂಭಾಗಗಳು ಬೇರೆ ಪ್ರಾಂತ್ಯಕ್ಕೆ ಸೇರಿತ್ತು. ಇದರಿಂದ ಬೇರೆ ಭಾಷೆಗಳನ್ನು ಕನ್ನಡಿಗರು ಬಳಸುತ್ತಿದ್ದರು. ಇವೆಲ್ಲ ಸವಾಲಿನ ನಡುವೆ ಕನ್ನಡದ ಬೆಳವಣಿಗೆಗೆ ಅನೇಕ ಸಾಹಿತಿಗಳು, ಸಂಘಟನೆಗಳು, ವಿಚಾರವಾದಿಗಳು, ಶ್ರಮಿಕರು ದುಡಿದಿದ್ದಾರೆ. ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆಯಾಗಿ ಬಳಿಕ ಪರ-ವಿರೋಧದ ನಡುವೆ ವಿಶಾಲ ಕರ್ನಾಟಕ ರಚನೆಯಾಯಿತು. ಕನ್ನಡ ಭಾಷೆಯಡಿಯಲ್ಲಿ ರಚನೆಯಾದ ಕರ್ನಾಟಕದಲ್ಲಿ ಹಿಂದಿ ಸೇರಿದಂತೆ ಅನ್ಯ ಭಾಷೆಗಳನ್ನು ಹೇರಿದ ಪರಿಣಾಮ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಎಲ್ಲರೂ ಕನ್ನಡದ ಉಳಿವಿಗೆ ಒಂದಾಗ ಬೇಕೆಂದು ಒತ್ತಿ ಹೇಳಿದಳು.
ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕಲಾವಿದರ ಬಳಗದ ಕೋಶಾಧಿಕಾರಿ ಕಡ್ಲೇರ ತುಳಸಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು, ಲೋಕನಾಥ್ ಅಮೆಚೂರು ಸ್ವಾಗತಿಸಿ, ರೇವತಿ ರಮೇಶ್ ನಿರೂಪಿಸಿ, ವಂದಿಸಿದರು.
ಅಪರಾಹ್ನ ಜಾನಪದ ನೃತ್ಯ ಸ್ಪರ್ಧೆ ಹಾಗೂ ೧೦ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಚೆಂಬು ಗ್ರಾಮದ ವಿದ್ಯಾರ್ಥಿನಿ ಬಿ.ಎಂ. ಇಂಚರ ಅವರಿಗೆ ಟಿ.ಪಿ. ರಮೇಶ್ ದತ್ತಿನಿಧಿ ಪುರಸ್ಕಾರ ಪ್ರದಾನ ಮಾಡಲಾಯಿತು.