ಸೋಮವಾರಪೇಟೆ, ನ. ೨೪: ತಾಲೂಕು ತಹಶೀಲ್ದಾರ್ ಅವರ ವಾಸಕ್ಕೆ ಮೀಸಲಾಗಿರುವ ವಸತಿ ಗೃಹ ಕಟ್ಟಡ ಇತ್ತೀಚಿನ ದಿನಗಳಲ್ಲಿ ಕಾಡುಪಾಲಾಗುತ್ತಿದ್ದು, ದುರಸ್ತಿ ಕಾರ್ಯ ಮರೀಚಿಕೆಯಾಗಿದೆ.

ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕ್ಲಬ್‌ರಸ್ತೆಯಲ್ಲಿರುವ ತಾಲೂಕು ತಹಶೀಲ್ದಾರ್ ವಸತಿ ಗೃಹ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿದ್ದು, ಇಲ್ಲಿಗೆ ಆಗಮಿಸುವ ಬಹುತೇಕ ತಹಶೀಲ್ದಾರ್‌ಗಳು ಕುಶಾಲನಗರದಲ್ಲಿ ನೆಲೆಸಲು ಇಚ್ಚಿಸುವುದರಿಂದ ಸೋಮವಾರಪೇಟೆಯ ಈ ವಸತಿ ಗೃಹದ ಬಗ್ಗೆ ಅನಾದರ ಹೆಚ್ಚಾಗಿದೆ.

ಬೃಹತ್ ವಸತಿ ಗೃಹವಿದ್ದರೂ ಸಮರ್ಪಕವಾಗಿ ನಿರ್ವಹಣೆಯಾಗದ ಕಾರಣ ಇದೀಗ ಗೃಹದ ಸುತ್ತಲೂ ಗಿಡಗಂಟಿಗಳು ಬೆಳೆದು ಭೂತ ಬಂಗಲೆಯAತಾಗಿದೆ. ಲಂಟಾನ ಗಿಡಗಳು ತಾಲೂಕು ದಂಡಾಧಿಕಾರಿಗಳ ವಸತಿ ಗೃಹವನ್ನು ಆಪೋಷನಗೈಯುತ್ತಿದ್ದು, ದಿನದಿಂದ ದಿನಕ್ಕೆ ಕಟ್ಟಡ ಶಿಥಿಲಾವಸ್ಥೆಗೆ ತಲುಪುತ್ತಿದೆ.

ವಿಶಾಲವಾದ ಆವರಣ, ಉದ್ಯಾನವನ, ಸುಸಜ್ಜಿತ ಕೊಠಡಿಗಳನ್ನು ಒಳಗೊಂಡಿದ್ದರೂ ಇಲ್ಲಿಗೆ ಆಗಮಿಸುವ ತಹಶೀಲ್ದಾರ್‌ಗಳು ಇಲ್ಲಿ ನೆಲೆಸಲು ಮನಸ್ಸು ಮಾಡದ ಹಿನ್ನೆಲೆ ಬೃಹತ್ ಕಟ್ಟಡವೊಂದು ಸದ್ದಿಲ್ಲದೇ ಗಿಡಗಂಟಿಗಳೊಳಗೆ ಸೇರುತ್ತಿದೆ. ಕನಿಷ್ಟ ಪಕ್ಷ ಈ ಕಟ್ಟಡದ ಸುತ್ತಲೂ ಕಾಡು ಕಡಿದು ಸ್ವಚ್ಛತೆ ಕಾಪಾಡಲೂ ಸಹ ಜನರಿಲ್ಲದಂತಾಗಿದೆ. ತಾಲೂಕಿನ ದಂಡಾಧಿಕಾರಿಗಳ ವಸತಿ ಗೃಹವೊಂದು ಈ ಪರಿಯಾಗಿ ಹಾಳಾಗುತ್ತಿರುವುದಕ್ಕೆ ಸಾರ್ವಜನಿಕರು ನೊಂದುಕೊಳ್ಳುತ್ತಿದ್ದಾರೆ. ತಕ್ಷಣ ದುರಸ್ತಿ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಆಗಿ ಎಸ್.ಎನ್. ನರಗುಂದ್ ಅವರು ಕರ್ತವ್ಯದಲ್ಲಿದ್ದು, ಕಟ್ಟಡದ ಅವ್ಯವಸ್ಥೆಯಿಂದಾಗಿ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನೆಲೆಸಿದ್ದಾರೆ.

(ಮೊದಲ ಪುಟದಿಂದ) ವಸತಿ ಗೃಹ ಅವ್ಯವಸ್ಥೆ ಬಗ್ಗೆ ನರಗುಂದ್ ಅವರಲ್ಲಿ ಮಾಹಿತಿ ಬಯಸಿದ ಸಂದರ್ಭ, ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳಲು ೯ ಲಕ್ಷ ಮೊತ್ತದ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ತಕ್ಷಣ ದುರಸ್ತಿ ಕಾರ್ಯ ನಡೆಯಲಿದೆ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.

ಕಟ್ಟಡ ನವೀಕರಣಕ್ಕಾಗಿ ಕ್ರಿಯಾಯೋಜನೆ ತಯಾರಿಸುವಂತೆ ತಾಲೂಕು ತಹಶೀಲ್ದಾರರು ತಿಳಿಸಿದ ಮೇರೆ ಲೋಕೋಪಯೋಗಿ ಇಲಾಖೆಯಿಂದ ರೂ. ೯ ಲಕ್ಷ ವೆಚ್ಚದ ಕ್ರಿಯಾಯೋಜನೆ ತಯಾರಿಸಿ ತಾಲೂಕು ತಹಶೀಲ್ದಾರರಿಗೆ ಸಲ್ಲಿಸಲಾಗಿದೆ. ಇದರಲ್ಲಿ ಕಟ್ಟಡ ದುರಸ್ತಿಗೆ ೫ ಲಕ್ಷ, ನೀರಿನ ಟ್ಯಾಂಕ್, ಪೈಪ್‌ಲೈನ್, ವಿದ್ಯುತ್ ಸೇರಿದಂತೆ ಇತರ ಕೆಲಸಗಳಿಗೆ ೪ ಲಕ್ಷ ಸೇರಿದಂತೆ ಒಟ್ಟು ೯ ಲಕ್ಷ ವೆಚ್ಚದ ಕ್ರಿಯಾಯೋಜನೆ ನೀಡಿರುವುದಾಗಿ ಅಭಿಯಂತರ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.