ಕಣಿವೆ, ನ. ೨೫: ಗದ್ದೆಯೊಳಗೆ ನೀರಿನೋಪಾದಿಯಲ್ಲಿ ಬೆವರು ಹರಿಸಿ ಬಹಳಷ್ಟು ಹರುಷದಿಂದ ರೈತರು ಬೆಳೆಯುವ ಅನ್ನದ ಬೆಳೆ ಭತ್ತದ ಫಸಲು ಕಾಡಾನೆಗಳ ಪಾಲಾಗುತ್ತಿದೆ. ಗದ್ದೆಯ ಒಡಲಲ್ಲಿ ಭತ್ತದ ಗೊನೆಗಳನ್ನು ಹೊತ್ತು ತೂಗುವ ಫಸಲನ್ನು ಪೂಜಿಸಿ ಮನೆಗೆ ತುಂಬಿಕೊAಡು ಮನದೊಳಗೆ ಸಂತಸ ಪಡುತ್ತಿದ್ದ ಕೃಷಿಕ ಇದೀಗ ಕಾಡಂಚಿನಲ್ಲಿ ಕಾಡುತ್ತಿರುವ ಕಾಡಾನೆಗಳ ಕಾಟದಿಂದಾಗಿ ಸಂಕಟವನ್ನು ಅನುಭವಿಸುವಂತಾಗಿದೆ. ಪ್ರತೀ ವರ್ಷವೂ ಚಳಿಗಾಲ ಆರಂಭವಾದಾಗಲೇ ಭತ್ತದ ಫಸಲು ಕಟಾವಿಗೆ ಸಿದ್ದವಾಗುತ್ತದೆ.

ಇದೇ ಹಂತದಲ್ಲಿ ಕಾಡಾನೆಗಳು ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ರಾತ್ರೋರಾತ್ರಿ ರೈತರು ಬೆಳೆದ ಭತ್ತದ ಗದ್ದೆಗಳಿಗೆ ಧಾಂಗುಡಿ ಇಡುತ್ತವೆ. ಆದರೆ ಕಾಡಾನೆಗಳು ತಮ್ಮ ಹಸಿವು ನೀಗಿಸಿಕೊಳ್ಳಲು ತಿನ್ನುವ ಭತ್ತದ ಫಸಲಿನ ಪ್ರಮಾಣಕ್ಕಿಂತ ತುಳಿದು ನಷ್ಟಗೊಳಿಸುವ ಫಸಲಿನ ಪ್ರಮಾಣವೇ ಅತ್ಯಧಿಕ. ಹಾಗಾಗಿ ನಾಲ್ಕಾರು ತಿಂಗಳ ಕಾಲ ರೈತರು ಕಷ್ಟ ಪಟ್ಟು ಬೆಳೆದ ವರ್ಷದ ಕೂಳಾದ ಕಟಾವಿಗೆ ಸಿದ್ಧಗೊಂಡ ಈ ಭತ್ತದ ಫಸಲು ಕೈಗೆ ಬಂದದ್ದು ಬಾಯಿಗೆ ಬರಲಿಲ್ಲವಲ್ಲ ಎಂಬ ವ್ಯಥೆ ಕಾಡಂಚಿನ ರೈತರಿಗೆ ಚಿಂತೆಯಾಗಿ ಕಾಡುತ್ತಿದೆ. ಕಾಡಂಚಿನ ಬಹಳಷ್ಟು ರೈತರು ತಾವು ತಮ್ಮ ಹೊಲ - ಗದ್ದೆ ಹಾಗೂ ತೋಟಗಳಲ್ಲಿ ಬೆಳೆದ ಯಾವುದೇ ಫಸಲು ಕ್ಷಣಾರ್ಧದಲ್ಲಿ ಕಾಡು ಪ್ರಾಣಿಗಳ ಪಾಲಾಗಬಾರದೆಂದು ತಮ್ಮ ಹೊಲ ಗದ್ದೆ ಅಥವಾ ತೋಟಗಳಲ್ಲಿ ಬೆಳೆದುನಿಂತ ಮರಗಳ ರೆಂಬೆ ಕೊಂಬೆಗಳ ಮೇಲೆ ಪುಟ್ಟ ಪುಟ್ಟ ಗುಡಿಸಲು ಕಟ್ಟಿಕೊಂಡು ರಾತ್ರಿ ಹಗಲೆನ್ನದೇ ಬೆಳೆಯನ್ನು ಕಾವಲು ಕಾಯುತ್ತಾರೆ.

ಆದರೆ ಎಲ್ಲೋ ಒಂದು ಕಡೆ ಮೈಮರೆತು ನಿದ್ರೆಗೆ ಜಾರಿದರೆ ಕಾಕತಾಳೀಯ ಎಂಬAತೆ ಅದೇ ಹೊತ್ತಿನಲ್ಲೇ ಫಸಲು ತುಂಬಿದ ಭೂಮಿಗೆ ಸೈನಿಕರಂತೆ ಲಗ್ಗೆ ಇಡುವ ಕಾಡಾನೆಗಳ ಹಿಂಡು ಹಸಿದ ಹೊಟ್ಟೆಯ ಬಳಲಿಕೆ ತಾಳರಾರದೇ ಒಂದೇ ಸಮನೆ ಫಸಲು ತಿಂದು ಹಾನಿಗೊಳಿಸುತ್ತವೆ.

ಕಾರ್ಮಿಕರ ಅಲಭ್ಯತೆ ಹಾಗೂ ಕಾಡಾನೆಗಳ ಹಾವಳಿಯಿಂದ ಬೇಸತ್ತ ಹಲವು ರೈತರು ಭತ್ತದ ಕೃಷಿಯತ್ತ ಒಲವು ತೋರುತ್ತಿಲ್ಲ. ಇನ್ನು ಮಾರುಕಟ್ಟೆಯಲ್ಲಿ ಅಕ್ಕಿಯನ್ನು ಕೊಳ್ಳಲಾಗದ ಅಶಕ್ತರು ತಮ್ಮಲ್ಲಿನ ಅಲ್ಪ ಸ್ವಲ್ಪ ಹಿಡುವಳಿಗಳಲ್ಲಿ ತಾವೇ ತಮ್ಮ ಕುಟುಂಬ ಸದಸ್ಯರೇ ಸೇರಿ ಕೃಷಿ ಕೆಲಸ ಮಾಡಿಕೊಂಡು ಭತ್ತ, ಜೋಳ ಮೊದಲಾದ ಬೆಳೆ ಬೆಳೆದರೆ ಅದು ಕಾಡಾನೆಗಳ ಪಾಲಾದರೆ ಅವರ ಕಥೆ ಏನಾಗಬೇಡ ಹೇಳಿ....?

ನಷ್ಟಕ್ಕೆ ಸೂಕ್ತ ಪರಿಹಾರವೂ ಇಲ್ಲ

ಕಾಡಾನೆಗಳಿಂದ ಘಟಿಸುವ ಬೆಳೆ ನಷ್ಟಗಳಿಗೆ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಬೆಳೆ ಪರಿಹಾರ ನೀಡುತ್ತಿಲ್ಲ. ಸಾವಿರ ರೂಗಳಷ್ಟು ಮೌಲ್ಯದ ಭತ್ತದ ಫಸಲು ಕಾಡಾನೆಗಳಿಂದ ಹಾಳಾಗಿದ್ದರೆ ಅರಣ್ಯ ಇಲಾಖೆ ಅಂತಹ ಸಂತ್ರಸ್ತ ರೈತರಿಗೆ ಕೇವಲ ನೂರು ರೂಗಳ ಪರಿಹಾರದ ಚೆಕ್ಕನ್ನಷ್ಟೇ ನೀಡಿ ಕೈ ತೊಳೆದುಕೊಳ್ಳುತ್ತದೆ. ಅದುವೇ ಆ ಅಂದಾಜು ನೂರು ರೂ.ಗಳ ಚೆಕ್ ಪಡೆಯಲು ನಾವು ಅರಣ್ಯ ಇಲಾಖಾ ಕಚೇರಿಗೆ ಹಲವಾರು ಬಾರಿ ಅಲೆದಾಡಿ ಅಂತಹ ಹಲವು ನೂರು ರೂ.ಗಳನ್ನು ವ್ಯಯ ಮಾಡಿರುತ್ತೇವೆ. ಇದೆಂತಹ ವ್ಯವಸ್ಥೆ. ಏಕೀ ನಷ್ಟ. ನಾವು ಬೆಳೆ ಬೆಳೆಯಲೇ ಬಾರದಾ...? ಬೆಳೆದ ಫಸಲು ಕಾಡಾನೆಗಳ ಪಾಲಾದರೆ ವರ್ಷ ಪೂರ್ತಿ ನಾವು ಹೊಟ್ಟೆಗೆ ಏನು ತಿನ್ನೋದು ಎಂದು ನೊಂದ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಇಲಾಖೆ ಸಿಬ್ಬಂದಿಗಳೇ ರೈತರ ಬಳಿ ಬರುವಂತಾಗಬೇಕು

ಕಾಡಾನೆಗಳು ಅಥವಾ ಇತರೇ ವನ್ಯಪ್ರಾಣಿಗಳಿಂದ ಬೆಳೆ ನಷ್ಟವಾದ ಸಂದರ್ಭ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ನಷ್ಟಕ್ಕೊಳಗಾದ ರೈತನ ಜಮೀನಿಗೆ ಖುದ್ದು ಬಂದು ಸ್ಥಳ ಪರಿಶೀಲಿಸಬೇಕು. ಅಲ್ಲಿಯೇ ಸ್ಥಳದಲ್ಲೇ ಇಲಾಖಾ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಿ ನಷ್ಟವನ್ನು ಅಂದಾಜಿಸಿ ಸ್ಥಳದಲ್ಲೇ ಸೂಕ್ತ ಪರಿಹಾರದ ಮೊತ್ತವನ್ನು ನೀಡು ವಂತಹ ವ್ಯವಸ್ಥೆ ಜಾರಿಯಾಗಬೇಕೆಂದು ಕಾಡಂಚಿನ ರೈತರ ಆಗ್ರಹವಾಗಿದೆ.

- ಕೆ.ಎಸ್. ಮೂರ್ತಿ