ಮಡಿಕೇರಿ, ನ. ೨೩: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರನ್ನು ನೇರ ನೇಮಕಾತಿಗೆ ಒಳಪಡಿಸಬೇಕೆಂದು ಆಗ್ರಹಿಸಿ ತಾ.೨೮ ರಂದು ‘ಬೆಂಗಳೂರು ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣ ಗೌಡ ತಿಳಿಸಿದ್ದಾರೆ.

ಪ್ರತಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಇರುವ ೩೧೯ ನಗರಪಾಲಿಕೆ. ನಗರಸಭೆ, ಪುರಸಭೆೆ, ಪಟ್ಟಣ ಪಂಚಾಯ್ತಿಗಳನ್ನು ಒಳಗೊಂಡ ಸ್ಥಳೀಯ ಸಂಸ್ಥೆಗಳಲ್ಲಿ ೫೩ ಸಾವಿರ ಮಂದಿ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಚ್ಛತೆ, ನೀರು ಸರಬರಾಜು ಸೇರಿದಂತೆ ೫೪ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದು, ಕಳೆದ ಜುಲೈ ತಿಂಗಳಿನಲ್ಲಿ ರಾಜ್ಯ ವ್ಯಾಪಿ ಹೊರಗುತ್ತಿಗೆ ನೌಕರರು ಸ್ವಚ್ಛತಾ ಕಾರ್ಯ, ನೀರು ಸರಬರಾಜು ಕಾರ್ಯವನ್ನು ಸ್ಥಗಿತಗೊಳಿಸಿ ನಿರಂತರ ನಾಲ್ಕು ದಿನಗಳ ಕಾಲ ಹೋರಾಟ ನಡೆಸಿದ್ದರು. ಈ ಸಂದರ್ಭ ರಾಜ್ಯದ ಮುಖ್ಯಮಂತ್ರಿಗಳು ಹೊರಗುತ್ತಿಗೆ ನೌಕರ ಪದ್ಧತಿಯನ್ನು ರದ್ದುಪಡಿಸುವ ಭರವಸೆಯನ್ನು ನೀಡಿದ್ದರು. ಆದರೆ, ಈ ಬಗ್ಗೆ ಇಲ್ಲಿಯವರೆಗೂ ಸ್ಪಷ್ಟ ನಿಲುವನ್ನು ತಳೆದಿಲ್ಲವೆಂದು ಅಸಮಾಧಾನ ವ್ಯಕಪಡಿಸಿದರು.

ಕೊರೊನಾ ಸಂದರ್ಭ ಜೀವದ ಹಂಗು ತೊರೆದು ಹೊರಗುತ್ತಿಗೆ ನೌಕರರು ಮಾನವೀಯ ಸೇವೆ ಸಲ್ಲಿಸಿದ್ದಾರೆ. ಆದರೂ ಕೂಡ ಹೊರಗುತ್ತಿಗೆ ನೌಕರರು ಅತ್ಯಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ. ಕೊರೊನಾ ಸಂದರ್ಭ ರಾಜ್ಯ ವ್ಯಾಪಿ ೩೦ ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆದರೆ, ಇಲ್ಲಿಯವರೆಗೂ ಸರಕಾರದಿಂದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ವಿಷಾದಿಸಿದರು.

ಮಡಿಕೇರಿ ನಗರಸಭೆÉಯ ಹೊರಗುತ್ತಿಗೆ ನೌಕರರಿಗೆ ಕಳೆದ ಏಳು ತಿಂಗಳಿನಿAದ ವೇತನ ಪಾವತಿಯಾಗದಿದ್ದರೂ ನೌಕರರ ಜಿಲ್ಲಾ ಸಂಘ ಮೌನವಾಗಿದ್ದ ಬಗ್ಗೆ ಪ್ರತಿಕ್ರಿಯಿಸಿದ ನಾಗಣ್ಣ ಗೌಡ ಅವರು, ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಇಂತಹ ವಿಚಾರಗಳ ಬಗ್ಗೆ ಧ್ವನಿ ಎತ್ತುವುದಕ್ಕೆ ಅಧಿಕಾರಿಗಳ ಆತಂಕವಿದೆ. ನ್ಯಾಯಬದ್ಧ ವಿಚಾರಗಳ ಬಗ್ಗೆ ಮಾತನಾಡಿದರೂ ಅಧಿಕಾರಿಗಳು ನೆಪಗÀಳನ್ನು ಮುಂದಿಟ್ಟು ತಮ್ಮ ಕೆಲಸಕ್ಕೆ ಸಂಚಕಾರ ತಂದೊಡ್ಡುವ ಭಯ ಮತ್ತು ಅಭದ್ರತೆ ಇರುವುದಾಗಿ ನೇರವಾಗಿ ನುಡಿದರು.

ಹೊರಗುತ್ತಿಗೆ ನೌಕರರ ವೇತನ ಪಾವತಿಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಅಗತ್ಯ ಕ್ರಮ ಕೈಗೊಳ್ಳುವಂತೆ ಇದೇ ಸಂದರ್ಭ ಆಗ್ರಹಿಸಿದರು. ಗೋಷ್ಠಿಯಲ್ಲಿ ಸಂಘÀದ ಜಿಲ್ಲಾ ಅಧ್ಯಕ್ಷ ಈರಪ್ಪ ಶೆಟ್ಟಿ, ಪದಾಧಿಕಾರಿಗಳಾದ ಬೋಪಣ್ಣ, ರಮೇಶ್ ಕುಟ್ಟಪ್ಪ, ಶ್ವೇತ , ಮಹದೇವ್ ಉಪಸ್ಥಿತರಿದ್ದರು.