ಗೋಣಿಕೊಪ್ಪಲು, ನ. ೨೩: ಸಾಕಾನೆ ಹಾಗೂ ಕಾಡಾನೆ ನಡುವೆ ನಡೆದ ಭೀಕರ ಕಾಳಗದಲ್ಲಿ ಗೋಪಾಲಸ್ವಾಮಿ (೪೦) ಸಾಕಾನೆ ಮೃತಪಟ್ಟಿದೆ.

ಕಳೆದ ೧೫ ವರ್ಷಗಳಿಂದ ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಗೋಪಾಲಸ್ವಾಮಿ ಸಾಕಾನೆ ಪೈಕಿ ಅತ್ಯಂತ ಬಲಿಷ್ಠವಾದ ಆನೆಯಾಗಿತ್ತು.

ಕಳೆದ ಮೈಸೂರು ದಸರಾ ಜಂಬು ಸವಾರಿಯಲ್ಲಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ ಮುಂದಿನ ವರ್ಷ ಅಂಬಾರಿ ಹೊರುವ ಜವಾಬ್ದಾರಿ ನಿಭಾಯಿಸಬೇಕಾಗಿತ್ತು.

ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಗೋಪಾಲಸ್ವಾಮಿ ಮತ್ತಿಗೋಡು ಸಾಕಾನೆ ಶಿಬಿರದ ಬದಲಾಗಿ ವೀರನಹೊಸಳ್ಳಿ ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು.

ತಾ.೨೩ ರಂದು ಎಂದಿನAತೆ ಸಂಜೆಯ ವೇಳೆ ಗೋಪಾಲಸ್ವಾಮಿ ಆನೆಗೆ ಆಹಾರ ನೀಡಿದ ಮಾವುತರು ಅರಣ್ಯ ಪ್ರದೇಶಕ್ಕೆ ಕಳುಹಿಸಿದ್ದರು.

ಸಂಜೆಯ ವೇಳೆ ಅರಣ್ಯಕ್ಕೆ ತೆರಳಿದ ವೇಳೆ ಕೊಳುವಿಗೆ ಎಂಬ ಅರಣ್ಯ ಪ್ರದೇಶದಲ್ಲಿ ಮಸ್ತಿ ಆನೆಯೊಂದು ಗೋಪಾಲಸ್ವಾಮಿ ಮೇಲೆರಗಿ ಹಲ್ಲೆ ನಡೆಸಿದೆ.

ಈ ವೇಳೆ ಕಾಡಾನೆ ಹಾಗೂ ಸಾಕಾನೆ ನಡುವೆ ಭಾರೀ ಕಾಳಗ ನಡೆದಿದೆ. ಕಾಡಾನೆಯ ಕಾಳಗದಿಂದ ಗೋಪಾಲಸ್ವಾಮಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿತ್ತಾದರೂ ಪ್ರಯೋಜನವಾಗಲಿಲ್ಲ.

ಎರಡು ಆನೆಗಳ ಕಾದಾಟದಲ್ಲಿ ಗೋಪಾಲಸ್ವಾಮಿ ಒಂದು ಕಾಲಿಗೆ ತೀವ್ರ ಸ್ವರೂಪದ ಪೆಟ್ಟಾಗಿ ನಡೆಯಲಾರದ ಪರಿಸ್ಥಿತಿ ತಲುಪಿತ್ತು. ಕಾಡಿನಲ್ಲಿದ್ದ ಮಸ್ತಿ ಆನೆಯು ಗೋಪಾಲಸ್ವಾಮಿಯ ಎಡಗಾಲು ಮುರಿಯುವ ತನಕ ಕಾದಾಟ ನಡೆಸಿದೆ.

ಇದರಿಂದ ನಿತ್ರಾಣಗೊಂಡ ಗೋಪಾಲಸ್ವಾಮಿ ನಡೆಯಲಾಗದ ಪರಿಸ್ಥಿತಿಗೆ ತಲುಪಿತ್ತು. ಆಕ್ರೋಶಗೊಂಡಿದ್ದ ಮಸ್ತಿ ಆನೆಯು ಗೋಪಾಲಸ್ವಾಮಿಯ ಮೇಲೆ ಮನಬಂದAತೆ ದಾಳಿ ನಡೆಸಿದೆ. ಮುಂಜಾನೆಯ ವೇಳೆ ಶಿಬಿರಕ್ಕೆ ಬರಬೇಕಾದ ಗೋಪಾಲಸ್ವಾಮಿ ಬಾರದ ಹಿನ್ನೆಲೆಯಲ್ಲಿ ಆನೆ ಮಾವುತರಾದ ಜೆ.ಮಂಜು ಹಾಗೂ ಸ್ರುಜನ್ ಗೋಪಾಲಸ್ವಾಮಿಯನ್ನು ಹುಡುಕುತ್ತ ಅರಣ್ಯಕ್ಕೆ ತೆರಳಿದ್ದಾರೆ. ಈ ವೇಳೆ ಅರಣ್ಯದ ಮಧ್ಯೆ ಗೋಪಾಲಸ್ವಾಮಿ ನಿತ್ರಾಣಗೊಂಡು ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು. ನುರಿತ ವೈದ್ಯಕೀಯ ತಂಡ ಅರಣ್ಯಕ್ಕೆ ತೆರಳಿ ಗೋಪಾಲಸ್ವಾಮಿಗೆ ಚಿಕಿತ್ಸೆ ನೀಡಿದರು.

ಚಿಕಿತ್ಸೆ ಫಲಕಾರಿಯಾಗದೇ ಗೋಪಾಲಸ್ವಾಮಿ ತಾ.೨೩ರಂದು ಮೃತಪಟ್ಟಿದೆ. ಸಂಜೆ ವೇಳೆ ಗೋಪಾಲಸ್ವಾಮಿಯ ಅಂತ್ಯಕ್ರಿಯೆ ಹಿರಿಯ ಅಧಿಕಾರಿಗಳ, ಸಿಬ್ಬಂದಿಗಳ ಸಮ್ಮುಖದಲ್ಲಿ ವೀರನಹೊಸಳ್ಳಿ ಅರಣ್ಯದಲ್ಲಿ ನಡೆಸಲಾಯಿತು.

ಭಾರೀ ಗಾತ್ರದ ದೇಹ ಹೊಂದಿದ್ದ ಗೋಪಾಲಸ್ವಾಮಿ ಹಲವಾರು ಕಾಡಾನೆಗಳನ್ನು ಸೆರೆಹಿಡಿಯುವ ಸಂದರ್ಭ ಪ್ರಮುಖ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

-ಹೆಚ್.ಕೆ.ಜಗದೀಶ್ / ಎನ್.ಎನ್. ದಿನೇಶ್.