ಸೋಮವಾರಪೇಟೆ, ನ. ೨೨: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸಿದ್ದು, ಗ್ರಾಮ ಪಂಚಾಯಿತಿ ಕಚೇರಿಯಿಂದ ಕೇವಲ ೧೦೦ ಮೀಟರ್ ದೂರದಲ್ಲಿರುವ ಬಜೆಗುಂಡಿ ಗ್ರಾಮದ ಮುಖ್ಯ ರಸ್ತೆ ಕಸದ ತೊಟ್ಟಿಯಂತಾಗಿದೆ.
ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಒಂದು ಬದಿಯಲ್ಲಿ ಬಜೆಗುಂಡಿ ಗ್ರಾಮವಿದ್ದು, ರಸ್ತೆಯ ಮತ್ತೊಂದು ಬದಿ ಕಸ ಶೇಖರಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. ದೇಶಾದ್ಯಂತ ಸ್ವಚ್ಚಭಾರತ್ ಸಂಕಲ್ಪಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಪೊರಕೆ ಹಿಡಿದು ಕಸ ಗುಡಿಸುವ ಹಾಗೂ ಸಮುದ್ರ ದಂಡೆಯ ಬದಿ ತ್ಯಾಜ್ಯ ಹೆಕ್ಕುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
ಆದಾಗ್ಯೂ ಬಜೆಗುಂಡಿ ಗ್ರಾಮದ ಮುಖ್ಯರಸ್ತೆಯ ಬದಿಯಲ್ಲಿ ತ್ಯಾಜ್ಯ ಸುರಿದು ಪರಿಸರವನ್ನು ಗಬ್ಬೆದ್ದು ನಾರುವಂತೆ ಮಾಡುತ್ತಿರುವ ಮಂದಿಗೇನು ಕಡಿಮೆಯಿಲ್ಲ. ಬಜೆಗುಂಡಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯ, ಖಿಳಾರಿಯಾ ಮಸೀದಿ, ಆಟೋ ನಿಲ್ದಾಣ, ಬಸ್ ನಿಲುಗಡೆಯ ಸ್ಥಳ ಇರುವ ಪ್ರದೇಶದಲ್ಲಿಯೇ ತ್ಯಾಜ್ಯ ಸಂಗ್ರಹವಾಗುತ್ತಿದೆ.
ಇದರಿAದಾಗಿ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಬಸ್ಗಾಗಿ ಕಾಯುವ ಸಾರ್ವಜನಿಕರು ಕಸದ ದುರ್ವಾಸನೆಯನ್ನು ಸಹಿಸಿಕೊಳ್ಳಬೇಕಿದೆ. ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಬಸ್ಗಳಿಗಾಗಿ ಈ ಸ್ಥಳದಲ್ಲಿ ನಿಲ್ಲುತ್ತಿದ್ದು, ಸಮಸ್ಯೆ ಎದುರಿಸುವಂತಾಗಿದೆ.
ಈ ಬಗ್ಗೆ ವಿದ್ಯಾರ್ಥಿಗಳು ಬೇಳೂರು ಗ್ರಾಮ ಪಂಚಾಯಿತಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದಿನಂಪ್ರತಿ ದುರ್ವಾಸನೆಯಲ್ಲಿಯೇ ಬಸ್ಗಾಗಿ ಕಾಯುವಂತಾಗಿದೆ ಎಂದು ವಿದ್ಯಾರ್ಥಿ ಗಳು ಅಳಲು ತೋಡಿಕೊಂಡಿದ್ದಾರೆ.
ಬೇಳೂರು ಗ್ರಾಮ ಪಂಚಾಯಿತಿ ಕಚೇರಿಯಿಂದ ಕೇವಲ ೧೦೦ ಮೀಟರ್ ದೂರದಲ್ಲಿಯೇ ಈ ಕಸದ ರಾಶಿ ನಿರ್ಮಾಣಗೊಂಡಿದ್ದು, ತ್ಯಾಜ್ಯದಿಂದ ಮುಕ್ತಿ ನೀಡುವಲ್ಲಿ ಗ್ರಾ.ಪಂ. ವಿಫಲವಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಬದಿಯಲ್ಲಿ ಬಜೆಗುಂಡಿ ಗ್ರಾಮದ ಕೆಲವರು ಕಸವನ್ನು ತಂದು ಸುರಿಯುತ್ತಿದ್ದಾರೆ.
ಬಜೆಗುಂಡಿ ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕ ಕುಟುಂಬಗಳೇ ಇದ್ದು, ಇಕ್ಕಟ್ಟಿನ ಸ್ಥಳಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇದರಿಂದಾಗಿ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸ್ಥಳಾವಕಾಶವಿಲ್ಲದೇ, ರಾಜ್ಯ ಹೆದ್ದಾರಿ ಬದಿಗೆ ತಂದು ಸುರಿಯುತ್ತಿದ್ದಾರೆ. ಇಂತಹ ತ್ಯಾಜ್ಯವನ್ನು ಬೀದಿ ನಾಯಿಗಳು ಎಳೆದಾಡಿ ಇಡೀ ಆವರಣವನ್ನು ಗಬ್ಬೆಬ್ಬಿಸುತ್ತಿವೆ. ಹಸಿ ತ್ಯಾಜ್ಯಗಳು ಕೊಳೆತು ಕೊಳಚೆ ನೀರು ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದು, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿವೆ.
ಈ ಬಗ್ಗೆ ಬೇಳೂರು ಗ್ರಾಮ ಪಂಚಾಯಿತಿ ಗಮನ ಹರಿಸಿ ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ಈ ಸ್ಥಳದಲ್ಲಿ ತ್ಯಾಜ್ಯ ಹಾಕದಂತೆ ಕ್ರಮ ಕೈಗೊಳ್ಳಬೇಕು. ಗ್ರಾಮ ವ್ಯಾಪ್ತಿಯಲ್ಲಿರುವ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. -ವಿಜಯ್ ಹಾನಗಲ್