ಕುಶಾಲನಗರ, ನ. ೨೨ : ಮಾತೃಭಾಷೆಗೆ ಒತ್ತು ನೀಡುವುದ ರೊಂದಿಗೆ ಇತರ ಭಾಷೆಯನ್ನೂ ಕಲಿಯುವ ವಾತಾವರಣ ನಿರ್ಮಾಣ ಆಗಬೇಕು ಎಂದು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅಭಿಪ್ರಾಯಪಟ್ಟರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವೇಕಾನಂದ ವಿದ್ಯಾಸಂಸ್ಥೆ ಆಶ್ರಯದಲ್ಲಿ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಮತ್ತು ಬರೆಯಲು ಕಲಿಯಬೇಕು. ಮಾತೃ ಭಾಷೆಗೆ ಹೃದಯಪೂರ್ವಕ ಗೌರವ ನೀಡಬೇಕು. ಉಪಭಾಷೆಗಳ ಬೆಳವಣಿಗೆ ಜೊತೆ ಕನ್ನಡ ಉಳಿಸಿ ಬೆಳೆಸುವ ಕೆಲಸ ಆಗಬೇಕು. ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡದ ವ್ಯಾಪಕ ಬಳಕೆ ಆಗುತ್ತಿರು ವುದು, ಭಾಷೆಯ ಬೆಳವಣಿಗೆಗೆ ಪೂರಕ ಅಂಶವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕನ್ನಡವನ್ನು ದಿನನಿತ್ಯ ಬಳಸಿ ಮಾತನಾಡಿದಲ್ಲಿ ಭಾಷೆಯ ಬೆಳವಣಿಗೆ ಸಾಧ್ಯ. ಕಸ್ತೂರಿಯಷ್ಟೇ ಅಪ್ಯಾಯಮಾನವಾದ ಕನ್ನಡ ಭಾಷೆಯ ಪರಂಪರೆಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಪರಿಷತ್ ನಿಂದ ಆಗುತ್ತಿದೆ. ಭಾಷೆಯ ಸಂರಕ್ಷಣೆ ನಮ್ಮ ಧ್ಯೇಯ ಆಗಬೇಕು. ಕನ್ನಡೇತರರೂ ಕನ್ನಡ ಕಟ್ಟಿ ಬೆಳೆಸಿರುವ ಬಗ್ಗೆ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ೨-೩ನೇ ಶತಮಾನದಿಂದಲೂ ಕನ್ನಡದ ಅಸ್ಮಿತೆ ಉಳಿದುಕೊಂಡಿದೆ. ಅನೇಕ ರಾಜ ಮನೆತನಗಳು ಕನ್ನಡಿಗರನ್ನು ಆಳಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಚಿಂತಕರ ಛಾವಡಿಯಾದ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟುವ ಕೆಲಸವೂ ಕೃಷ್ಣರಾಜ ಒಡೆಯರ್ ಕಾಲದಲ್ಲೇ ಆಗಿದೆ ಎಂದರಲ್ಲದೆ, ಡೋಂಗಿತನ, ಆಡಂಬರಕ್ಕಾಗಿ ಬೇರೆ ಭಾಷೆಗಳ ಬಳಕೆ ಆಗುತ್ತಿದೆ. ಅನ್ಯಭಾಷೀಯರ ಜೊತೆ ಕನ್ನಡ ಮಾತನಾಡುವ ಮೂಲಕ ಭಾಷೆಯ ಬೆಳವಣಿಗೆ ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಶಂಭುಲಿAಗಪ್ಪ, ಮಡಿಕೇರಿ ಆಕಾಶವಾಣಿ ನಿರ್ದೇಶಕ ಡಾ. ವಿಜಯ ಅಂಗಡಿ, ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ ಪೂಜಾರಿ, ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಮಹಾತ್ಮಗಾಂಧಿ ಪದವಿ ಕಾಲೇಜು ಪ್ರಾಂಶುಪಾಲೆ ಲಿಖಿತಾ, ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಕಸಾಪ ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ ವೇದಿಕೆಯಲ್ಲಿ ಇದ್ದರು.
ವಿವೇಕಾನಂದ ಕಾಲೇಜು ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಶ್ರೀ ಗಣಪತಿ ದೇವಾಲಯದಿಂದ ತಾವರೆಕೆರೆ ತನಕ ಮೆರವಣಿಗೆ ನಡೆಯಿತು.