ಭೂಕಂಪ: ಸುಮಾರು ೫೬ ಮಂದಿ ಸಾವು, ಕನಿಷ್ಠ ೩೦೦ ಮಂದಿಗೆ ಗಾಯ
ಜಕಾರ್ತ, ನ. ೨೧: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಸೋಮವಾರ ಸಂಭವಿಸಿದ ಭೂಕಂಪನದಿAದ ಸುಮಾರು ೫೬ ಜನರು ಸಾವಿಗೀಡಾಗಿದ್ದು, ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಆಡಳಿತದ ವಕ್ತಾರರು ತಿಳಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪನವು ೫.೪ ರ ತೀವ್ರತೆಯನ್ನು ಹೊಂದಿತ್ತು ಮತ್ತು ಜಕಾರ್ತಾದ ದಕ್ಷಿಣದ ಪಟ್ಟಣಗಳ ಬಳಿ ಭೂಕಂಪನದ ಕೇಂದ್ರಬಿAದು ಪತ್ತೆಯಾಗಿದೆ. ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸುಮಾರು ಕನಿಷ್ಠ ೩೦೦ ಜನರು ಗಾಯಗೊಂಡಿದ್ದಾರೆ ಎಂದು ಭೂಮಿ ಕಂಪನದಿAದ ಹೆಚ್ಚಿನ ಹಾನಿಗೊಳಗಾದ ಪಟ್ಟಣದ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಂಗಳೂರು ಆಟೋ ಸ್ಫೋಟ ಶಂಕಿತನಿಗೆ ಜಾಗತಿಕ ಜಾಲದ ಉಗ್ರ ಸಂಘಟನೆಯ ಸ್ಪೂರ್ತಿ!
ಮಂಗಳೂರು, ನ. ೨೧: ಮಂಗಳೂರಿನಲ್ಲಿ ಸಂಭವಿಸಿದ್ದ ಆಟೋ ಸ್ಫೋಟ ಪ್ರಕರಣದ ಶಂಕಿತ ಶಾರೀಕ್ ಗೆ ಜಾಗತಿಕ ಜಾಲದ ಉಗ್ರ ಸಂಘಟನೆಯೇ ಸ್ಪೂರ್ತಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಅಸ್ತಿತ್ವ ಹೊಂದಿರುವ ಒಂದು ಉಗ್ರ ಸಂಘಟನೆಯ ಪ್ರಭಾವ ಹಾಗೂ ಸ್ಪೂರ್ತಿ ಶಾರೀಕ್‌ಗೆ ಇತ್ತು ಎಂದು ಹೇಳಿದ್ದು, ಆತನನ್ನು ಆತನ ಮಲತಾಯಿ ಹಾಗೂ ಸಹೋದರಿ ಗುರುತು ಹಿಡಿದಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೂ ಮುನ್ನ ಭಯೋತ್ಪಾದಕ ಬರಹಗಳನ್ನು ಗೋಡೆ ಮೇಲೆ ಗೀಚಿದ್ದ ಪ್ರಕರಣದಲ್ಲಿ ೨೦೨೦ ರಲ್ಲಿ ಶಾರೀಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಗಸ್ಟ್ನಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಕೋಮು ಉದ್ವಿಗ್ನತೆ ಪ್ರಕರಣದಲ್ಲಿ ಶಾರೀಕ್ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾದ ಮಾಜ್ ಹಾಗೂ ಸಯೀದ್ ಯಾಸೀನ್ ನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಶಾರೀಕ್ ಸೆಪ್ಟೆಂಬರ್ ನಲ್ಲಿ ನಡೆದ ದಾಳಿಯ ವೇಳೆ ಪರಾರಿಯಾಗಿದ್ದ. ನಾಗುರಿಯಲ್ಲಿ ನ.೧೯ ರಂದು ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಶಾರೀಕ್ ಗೆ ಬಾಂಬ್ ತಯಾರಿಸಲು ತರಬೇತಿ ನೀಡಲಾಗಿತ್ತೇ? ಅಥವಾ ಅದನ್ನು ಆತ ಸ್ವಯಂ ಕಲಿತುಕೊಂಡನೇ? ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಶಂಕಿತ ವಾಸವಿದ್ದ ಮನೆಯಲ್ಲಿ ಹಲವು ಸ್ಫೋಟಕ ವಸ್ತುಗಳು ಸಿಕ್ಕಿವೆ. ಈ ಆರೋಪಿಯು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದಾನೆ. ಮತ್ತೊಂದು ನಕಲಿ ಗುರುತಿನ ಚೀಟಿ ಪಡೆದು ಕೊಯಮತ್ತೂರಲ್ಲೂ ವಾಸವಿದ್ದ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಚಾಲಕ ಪುರುಷೋತ್ತಮ್‌ಗೆ ಸುಟ್ಟ ಗಾಯಗಳಾಗಿದ್ದು, ಶಾರೀಕ್‌ಗೆ ಶೇ.೪೦ ರಷ್ಟು ಸುಟ್ಟ ಗಾಯಗಳಾಗಿ, ಆತ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರು, ಕರಾವಳಿ ಸೇರಿ ಹಲವೆಡೆ ಭಾರೀ ಮಳೆ ಸಾಧ್ಯತೆ
ಬೆಂಗಳೂರು, ನ. ೨೧: ಕರ್ನಾಟಕದಲ್ಲಿ ಅಬ್ಬರಿಸಿದ ಮಳೆರಾಯ ಕಳೆದ ೧ ವಾರದಿಂದ ಶಾಂತಗೊAಡಿದ್ದ. ಮಳೆ ಕಡಿಮೆಯಾಗಿ, ವಿಪರೀತ ಚಳಿ ಶುರುವಾಗಿತ್ತು. ಬೆಂಗಳೂರಿನಲ್ಲಿ ಸುಮಾರು ೧೦ ದಿನಗಳಿಂದ ಚಳಿ ಹೆಚ್ಚಳವಾಗಿತ್ತು. ಚಳಿಯ ನಡುವೆಯೇ ಬೆಂಗಳೂರಿನಲ್ಲಿ ತಾ.೨೨ರಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಂಗಳವಾರದಿAದ ಮಳೆ ಸುರಿಯುವ ಸಾಧ್ಯತೆಯಿದೆ. ಹೀಗಾಗಿ, ಚಳಿ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ವಿಜಯಪುರ ಹಾಗೂ ಹಾವೇರಿ ಸೇರಿ ಇತರ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯಿದೆ. ಈಗಾಗಲೇ ರಾಜ್ಯದಲ್ಲಿ ಚಳಿ ಕೂಡ ಏರಿಕೆಯಾಗಿದ್ದು, ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗುವ ಬಗ್ಗೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದರ ಮಧ್ಯೆ ಈಗ ಮತ್ತೆ ಮಳೆಯ ಅಲರ್ಟ್ ನೀಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಂಜು ಕೂಡ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ೨೪ ಡಿಗ್ರಿ ಸೆಲ್ಷಿಯಸ್, ಕನಿಷ್ಠ ತಾಪಮಾನ ೧೭ ಡಿಗ್ರಿ ಸೆಲ್ಷಿಯಸ್ ಇರಲಿದೆ.
ಚಿನ್ನದ ವ್ಯಾಪಾರಿಯಿಂದ ಸುಲಿಗೆ ಮಾಡಿದ ನಾಲ್ವರು ಪೊಲೀಸರ ಅಮಾನತು
ಚಿಕ್ಕಮಗಳೂರು, ನ. ೨೧: ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಡಿಯಲ್ಲಿ ಸಿಲುಕಿಸುವುದಾಗಿ ಬೆದರಿಸಿ ಚಿನ್ನದ ವ್ಯಾಪಾರಿಯೊಬ್ಬರಿಂದ ೫ ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಜಿಲ್ಲೆಯ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಅಮಾನತುಗೊಂಡ ನಾಲ್ವರನ್ನು ಅಜ್ಜಂಪುರ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಲಿಂಗರಾಜು, ಕಾನ್‌ಸ್ಟೇಬಲ್‌ಗಳಾದ ಧನಪಾಲ್ ನಾಯಕ್, ಓಂಕಾರಮೂರ್ತಿ ಮತ್ತು ಶರತ್ ರಾಜ್ ಎಂದು ಗುರುತಿಸಲಾಗಿದೆ. ಮೇ ೧೧ ರಂದು ಆರೋಪಿ ಪೊಲೀಸರು ದಾವಣಗೆರೆಯಲ್ಲಿ ಚಿನ್ನದ ವ್ಯಾಪಾರಿ ರೋಹಿತ್ ಸಂಕ್ಲಾ ಅವರ ಕಾರನ್ನು ತಡೆದಿದ್ದರು. ಅವರು ಬೇಲೂರಿಗೆ ೨.೪೫೦ ಕೆ.ಜಿ ಚಿನ್ನಾಭರಣವನ್ನು ಸಾಗಿಸುತ್ತಿದ್ದರು. ಈ ವೇಳೆ ತಪಾಸಣೆ ನಡೆಸಿದಾಗ ಚಿನ್ನವನ್ನು ಪತ್ತೆ ಹಚ್ಚಿದ ಪೊಲೀಸರು, ೧೦ ಲಕ್ಷ ರೂಪಾಯಿ ಲಂಚ ನೀಡದಿದ್ದರೆ ಚಿನ್ನ ಕಳ್ಳಸಾಗಣೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದರು. ಬಳಿಕ ಸಂಕ್ಲಾ ಅವರಿಂದ ೫ ಲಕ್ಷ ರೂಪಾಯಿ ಸುಲಿಗೆ ಮಾಡಿದ್ದರು ಮತ್ತು ಅವರನ್ನು ಅಲ್ಲಿಂದ ಕಳುಹಿಸಿದ್ದರು. ಈ ಬಗ್ಗೆ ಚಿನ್ನದ ವ್ಯಾಪಾರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ಇಲಾಖಾ ವಿಚಾರಣೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ.
ಬೊಲೆರೋ ವಾಹನಗಳ ಸೇರ್ಪಡೆ
ಬೆಂಗಳೂರು, ನ. ೨೧: ಕೆ.ಎಸ್.ಆರ್.ಟಿ.ಸಿ.ಗೆ ೨೦ ಬೊಲೆರೋ ವಾಹನಗಳ ಸೇರ್ಪಡೆಯಾಗಿದೆ. ಅಪಘಾತ ಸ್ಥಳಕ್ಕೆ ತ್ವರಿತವಾಗಿ ತಲುಪಲು ಹಾಗೂ ಗಾಯಾಳುಗಳಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯವನ್ನು ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಈ ವಾಹನಗಳು ೨೪x೭ ಕಾರ್ಯನಿರ್ವಹಣೆ ಮಾಡಲಿವೆ.