ಕುಶಾಲನಗರ, ನ. ೨೦: ಕುಶಾಲನಗರ ಶ್ರೀ ಗಣಪತಿ ರಥೋತ್ಸವ ಮತ್ತು ಉತ್ಸವಗಳ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಜಾತ್ರೆಯ ಕಳೆ ಮೂಡಿ ಬರುತ್ತಿದೆ.
ಸಂಜೆ ೬ ಗಂಟೆ ಆಗುವುದೇ ತಡ, ಕುಶಾಲನಗರ ಪಟ್ಟಣದ ರಸ್ತೆಗಳೆಲ್ಲಾ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದತ್ತ ಮುಖ ಮಾಡುವಂತಾಗಿದೆ. ಚುಮು ಚುಮು ಚಳಿ ಮೈಯನ್ನು ಆವರಿಸಿಕೊಳ್ಳಲು ಶುರು ಮಾಡುತ್ತಿದ್ದಂತೆಯೇ ಇಲ್ಲಿಯ ಸಾಂಸ್ಕೃತಿಕ ವೇದಿಕೆ ರಂಗೇರುತ್ತದೆ. ಜಾತ್ರಾ ಮೈದಾನದಲ್ಲಿರುವ ಮರಣ ಬಾವಿಯ ಬೈಕ್ಗಳ ಕಿವಿಗಪ್ಪಳಿಸುವ ಶಬ್ದದ ಮಧ್ಯೆ ರಾತ್ರಿ ತನಕ ಜಾತ್ರೆಯ ಸೊಗಡು ಅನುಭವಿಸುವುದೇ ವಿಶೇಷ ಅನುಭವ ಎನ್ನಬಹುದು.
೨ ವರ್ಷಗಳ ಅವಧಿಯಲ್ಲಿ ಕಂಡು ಬಂದ ಕೊರೊನಾ ನಂತರ ಈ ಸಾಲಿನಲ್ಲಿ ಕುಶಾಲನಗರದ ಶ್ರೀ ಮಹಾಗಣಪತಿ ದೇವಾಲಯದ ೧೦೨ ನೇ ವರ್ಷದ ಅದ್ಧೂರಿ ರಥೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜಾತ್ರೆ ಕಳೆಗಟ್ಟಿದೆ. ಪ್ರತಿ ದಿನ ನಡೆಯುತ್ತಿರುವ ವೈವಿದ್ಯಮಯ ಸಾಂಸ್ಕೃತಿಕ ಕಲರವಗಳು ಮತ್ತು ಮನೋರಂಜನಾ ಚಟುವಟಿಕೆಗಳಲ್ಲಿ ಜನಸಂದಣಿ ಹೆಚ್ಚುತ್ತಲೇ ಇದೆ.
ರಥೋತ್ಸವ ಕಳೆದ ನಂತರ ಪ್ರತಿದಿನ ಸಂಜೆ ವೇಳೆ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಟ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ವೈವಿಧ್ಯಮಯವಾಗಿ ಮೂಡಿ ಬರುತ್ತಿದೆ. ದಿನ ಕಳೆದಂತೆ ಹೆಚ್ಚುತ್ತಿರುವ ಪ್ರೇಕ್ಷಕರ ಸಂಖ್ಯೆಯೇ ಇದಕ್ಕೆ ಸಾಕ್ಷಿ ಹೇಳುತ್ತಿದೆ.
ಕವಿಗೋಷ್ಠಿ, ಹಾಡು, ನೃತ್ಯ, ಮಿಮಿಕ್ರಿ, ರಸಮಂಜರಿ, ಜಾದೂ ಪ್ರದರ್ಶನ, ಅಂತ್ಯಾಕ್ಷರಿ, ರ್ಯಾಪ್ ಸಂಗೀತ...ಹೀಗೆ ಪ್ರತಿ ದಿನವೂ ವೇದಿಕೆಯಲ್ಲಿ ಕಲಾಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸ ಲಾಗುತ್ತಿದೆ. ಶ್ರೀ ಗಣಪತಿ ಸೇವಾ ಸಮಿತಿ ನೇತೃತ್ವದಲ್ಲಿ ಸಮಿತಿಯ ನಿರ್ದೇಶಕ ವಿ.ಪಿ. ಶಶಿಧರ್ ನೇತೃತ್ವದ ಸಾಂಸ್ಕೃತಿಕ ಸಮಿತಿಗೆ ಟಿ.ಆರ್. ಪ್ರಭುದೇವ್, ಬಿ.ಎಸ್. ಲೋಕೇಶ್ ಸಾಗರ್, ಪರಮೇಶ್, ಆನಂದ್ ಕುಮಾರ್ ಮತ್ತಿತರ ತಂಡ ಕೈ ಜೋಡಿಸುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ದುಡಿಯುತ್ತಿದ್ದಾರೆ.
ಶ್ರೀ ಗಣಪತಿ ರಥೋತ್ಸವ ಅಂಗವಾಗಿ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಬೆನಕ ಎಮ್ಯೂಸ್ಮೆಂಟ್ ಮೂಲಕ ಹಲವು ಚಟುವಟಿಕೆಗಳು ನಡೆಯುತ್ತಿದ್ದು, ಜಾಯಿಂಟ್ ವೀಲ್, ಕೊಲಂಬಸ್, ಡ್ರಾಗನ್ ಟ್ರೆöÊನ್, ಮರಣ ಬಾವಿ, ಬ್ರೇಕ್ ಡ್ಯಾನ್ಸ್, ಮಕ್ಕಳಿಗೆ ವಿಶೇಷ ಮನೋರಂಜನಾ ಚಟುವಟಿಕೆಗಳು ಮಕ್ಕಳ ರೈಲು, ವಾಟರ್ ಗೇಮ್ಸ್ ಇನ್ನಿತರ ವಿಶೇಷ ಮನೋರಂಜನಾ ಚಟುವಟಿಕೆಗಳು ಎಲ್ಲರನ್ನು ರಂಜಿಸುತ್ತಿದೆ. ರಾಸುಗಳ ಪ್ರದರ್ಶನ ಮಾತ್ರ ಕಾರಣಾಂತರ ಗಳಿಂದ ಈ ಬಾರಿ ರದ್ದುಗೊಳಿಸ ಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ.
ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ವಿವಿಧ ಆಟಗಳು ಇಲ್ಲಿ ಲಭ್ಯವಿದೆ. ಬಟ್ಟೆಯಿಂದ ಪಾತ್ರೆ ತನಕ ವಸ್ತುಗಳ ಖರೀದಿಗೂ ಅವಕಾಶವಿದೆ. ಜಾತ್ರಾ ಮೈದಾನದಲ್ಲಿ ಊಟಿ ಸಿಹಿ ಜೋಳದಿಂದ ಬೆಂಗಳೂರು ಹಪ್ಪಳದ ವರೆಗೆ ಬಾಯಿಯಲ್ಲಿ ನೀರೂರಿಸುವ ತಿಂಡಿ, ತಿನಿಸುಗಳ ರುಚಿಯನ್ನೂ ಸವಿಯಬಹುದಾಗಿದೆ.
- ಎಂ.ಎನ್. ಚಂದ್ರಮೋಹನ್