ಮಡಿಕೇರಿ, ನ. ೨೦: ಮಕ್ಕಳು ಈ ದೇಶದ ಸಂಪತ್ತು. ಸಂವಿಧಾನದ ಅಡಿಯಲ್ಲಿ ಮಕ್ಕಳಿಗೆ ವಿಶೇಷವಾದ ಸ್ಥಾನಮಾನವಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಬಿ ಪ್ರಸಾದ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಬಾಲ ಭವನ ಸಭಾಂಗಣ ದಲ್ಲಿ ನಡೆದ ವಾರಾಂತ್ಯ ಕಾರ್ಯಾ ಗಾರ ಮತ್ತು ಸ್ಪರ್ಧಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ೯೮ನೇ ತಿದ್ದುಪಡಿ ಅನುಸಾರ ೨೦೦೨ ರ ಆರ್ಟಿಕಲ್ ೨೧ ಎ ತಿದ್ದುಪಡಿ ಅಡಿಯಲ್ಲಿ ಮಕ್ಕಳಿಗೆ ವಿಶೇಷ ರಕ್ಷಣೆ ನೀಡುವ ಕಾಯ್ದೆ ಇದೆ. ಮಕ್ಕಳ ಹಕ್ಕುಗಳ ಕುರಿತಂತೆ ಹಲವು ಕಾರ್ಯಕ್ರಮಗಳು ಬಂದಿದೆ. ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಎಂದರು.

ಕಾಯ್ದೆಗಳ ತಿದ್ದುಪಡಿಯ ಪ್ರಕಾರ ಮಕ್ಕಳನ್ನು ರಕ್ಷಿಸುವ ಬಗ್ಗೆ ಮತ್ತು ಮಕ್ಕಳನ್ನು ಶೋಷಣೆಯಿಂದ ಮುಕ್ತರಾಗಿಸುವಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದೆ. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದವರು ಹೆಚ್ಚಿನ ಗಮನವನ್ನು ನೀಡುವಂತೆ ತಿಳಿಸಿದರು.

ಸಂವಿಧಾನದಲ್ಲಿ ಮಕ್ಕಳಿ ಗಾಗಿಯೇ ಮೂಲಭೂತ ಹಕ್ಕುಗಳಿವೆ. ಬೆಳವಣಿಗೆ ಹಕ್ಕು, ಭಾಗವಹಿಸುವ ಹಕ್ಕು, ಶೋಷಣೆ ವಿರುದ್ಧದ ಹಕ್ಕು ಹೀಗೆ ಹಲವಾರು ಹಕ್ಕುಗಳಿವೆ. ಅದರ ಉಪಯೋಗವನ್ನು ಪಡೆದುಕೊಳ್ಳಿ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಅಧ್ಯಕ್ಷ ಪ್ರಸಾದ್ ಗೌಡ ಅವರು ಮಾತನಾಡಿ ರಾಜ್ಯೋತ್ಸವದ ಪ್ರಯುಕ್ತ ಮಕ್ಕಳಿಗೆ ಸಂಗೀತ ಮತ್ತು ಛದ್ಮವೇಷ ಹಮ್ಮಿಕೊಂಡಿದೆ. ಸ್ಪರ್ಧೆಗಳಲ್ಲಿ ಎಲ್ಲಾ ಮಕ್ಕಳು ಭಾಗವಹಿಸುವ ಮನೋಭಾ ವವನ್ನು ಬೆಳೆಸಬೇಕು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದರು. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂದು ಪೋಷಕರು ತಿಳಿದುಕೊಂಡು ಪಠ್ಯೇತರ ಚಟುವಟಿಕೆ ಜೊತೆ ಇತರ ಚಟುವಟಿಕೆ ಗಳಿಗೂ ಪ್ರೋತ್ಸಾಹ ನೀಡಬೇಕು ಎಂದರು. ಅಡ್ವೋಕೇಟ್ ಕೆ.ಕೆ. ರಂಜನ್ ಅವರು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾಧಿಕಾರಿ ಪೂಣಚ್ಚ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್. ಮಂಜುನಾಥ್, ಅರಣ್ಯ ಇಲಾಖೆಯ ಮೊಹಿಸಿನ್ ಪಾಷಾ ಇತರರು ಉಪಸ್ಥಿತರಿದ್ದರು. ಶಿಶು ಕಲ್ಯಾಣ ಇಲಾಖೆಯ ಮಕ್ಕಳು ಪ್ರಾರ್ಥಿಸಿದರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂಜುನಾಥ್ ಸ್ವಾಗತಿಸಿದರು, ಪೂಜಾ ನಿರೂಪಿಸಿ, ಜಯಂತಿ ವಂದಿಸಿದರು.