ಮಡಿಕೇರಿ, ನ. ೧೯: ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಹಲವಷ್ಟು ಸಮಸ್ಯೆಗಳ ಬಗ್ಗೆ ಜನರು ಶಾಸಕ ಅಪ್ಪಚ್ಚು ರಂಜನ್ ಅವರ ಬಳಿ ತೋಡಿಕೊಂಡರು. ಮಡಿಕೇರಿಯ ವಿವಿಧ ವಾರ್ಡ್ಗಳಿಗೆ ಕಾಲ್ನಡಿಗೆಯ ಮೂಲಕ ಸಂಚರಿಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಭರವಸೆಯನ್ನು ನೀಡಿದರು. ಹಲವಷ್ಟು ಕಡೆ ರಸ್ತೆಗಳು ಹದಗೆಟ್ಟ ಬಗ್ಗೆಗಿನ ದೂರುಗಳು ಹೆಚ್ಚಾಗಿ ಬಂದವು. ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ರಂಜನ್ ತಿಳಿಸಿದರು.
ನಗರಸಭಾ ಸದಸ್ಯರು, ಪೌರಾಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ದೇಚೂರು, ಮಂಗಳಾದೇವಿ ನಗರ, ಸುದರ್ಶನ ಬಡಾವಣೆ ಸೇರಿದಂತೆ ವಿವಿಧ ಕಡೆಗಳಿಗೆ ತೆರಳಿದ ಶಾಸಕ ರಂಜನ್ ಅವರು, ಜನರಿಂದ ಸಮಸ್ಯೆಗಳ ಕುರಿತು ವಾಸ್ತವ ಸತ್ಯ ಅರಿತುಕೊಂಡರು. ನಗರಸಭಾ ಸದಸ್ಯರು ಜನರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಶಾಸಕರ ಗಮನಸೆಳೆದರು.
ಮೊದಲು ದೇಚೂರುಗೆ ಭೇಟಿ ನೀಡಿ ಅಲ್ಲಿ ಸಂಚಾರಕ್ಕೆ ಸಮಸ್ಯೆ ಇರುವ ರಸ್ತೆಯನ್ನು ವೀಕ್ಷಿಸಿದರು. ಈ ಸಂದರ್ಭ ಜನರು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಹಾಗೂ ಬೀದಿ ದೀಪ ಕೆಲಸ ಮಾಡದ ಬಗ್ಗೆ ಗಮನ ಸೆಳೆದಾಗ ಚರಂಡಿಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯರ ಸಲಹೆಯೊಂದಿಗೆ ನುರಿತರ ನೆರವು ಪಡೆದು ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೀದಿ ದೀಪಗಳನ್ನು ತಕ್ಷಣ ಅಳವಡಿಸುವಂತೆ ನಿರ್ದೇಶಿಸಿದರು.
ಸುದರ್ಶನ ಬಡಾವಣೆಯಲ್ಲಿ ಪಕ್ಕದ ಹೊಟೇಲ್ನ ತ್ಯಾಜ್ಯ ನೀರನ್ನು ಹೊರಹಾಕಲು ನಗರಸಭೆ ವ್ಯಾಪ್ತಿಯ ಚರಂಡಿಗೆ ಅಡ್ಡಲಾಗಿ ಪೈಪ್ ಅಳವಡಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ತೆರವುಗೊಳಿಸುವಂತೆ ಶಾಸಕರು ತಿಳಿಸಿದರು. ಇದರಿಂದ ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ಮಳೆಗಾಲದಲ್ಲಿ ಸಮಸ್ಯೆ ಉಲ್ಬಣವಾಗುತ್ತದೆ. ಜೊತೆಗೆ ದುರ್ನಾಥ ಬೀರುತ್ತದೆ. ಇದರ ಬದಲು ತ್ಯಾಜ್ಯವನ್ನು ಪರಿಷ್ಕರಿಸುವ ಯಂತ್ರವನ್ನು ಅಳವಡಿಸುವಂತೆ ಹೇಳಿದರು.
ಈ ಸಂದರ್ಭ ಹೊಟೇಲ್ಗೆ ಸಂಬAಧಿಸಿದವರು ರೂ. ೬ ಲಕ್ಷ ವೆಚ್ಚದಲ್ಲಿ ಪೈಪ್ ಅಳವಡಿಸಲಾಗಿದೆ. ಇದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ. ತೆರವು ಮಾಡಲು ಸಿದ್ಧ. ಆದರೆ, ಮತ್ತೊಂದು ಬದಿಯಲ್ಲಿ ಅಗೆದು ಪೈಪ್ ಅಳವಡಿಸಲು ಅವಕಾಶ ನೀಡುವಂತೆ ಕೋರಿದರು.
(ಮೊದಲ ಪುಟದಿಂದ)
೧೫ ದಿನದಲ್ಲಿ ರಸ್ತೆ ಕೆಲಸ
ಹದಗೆಟ್ಟ ರಸ್ತೆ ದುರಸ್ತಿ ಕೆಲಸ ೧೫ ದಿನಗಳಲ್ಲಿ ಆರಂಭಗೊಳ್ಳಲಿದೆ ಎಂದು ಶಾಸಕ ರಂಜನ್ ವಿಶ್ವಾಸ ವ್ಯಕ್ತಪಡಿಸಿದರು.
ಭೇಟಿ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿಯ ಅಭಿವೃದ್ಧಿಗೆ ನಗರೋತ್ಥಾನದಡಿ ರೂ. ೪೦ ಕೋಟಿ, ೧೫ನೇ ಹಣಕಾಸಿನಲ್ಲಿ ರೂ. ೫ ಕೋಟಿ, ಎನ್.ಡಿ.ಆರ್.ಎಫ್.ನಲ್ಲಿ ರೂ. ೩ ಕೋಟಿ ಹಾಗೂ ವಿಶೇಷ ಅನುದಾನ ರೂ. ೭೫ ಲಕ್ಷ ಲಭ್ಯತೆ ಇದೆ. ಇದಕ್ಕೆ ಸಂಬAಧಿಸಿದ ಕ್ರಿಯಾಯೋಜನೆ ತಯಾರಾಗಿ ಟೆಂಡರ್ ಹಂತದಲ್ಲಿದೆ. ಮಳೆ ಇದ್ದ ಕಾರಣ ರಸ್ತೆ ನಿರ್ಮಾಣ ಸಾಧ್ಯವಾಗಲಿಲ್ಲ. ಮಳೆ ವಾತಾವರಣದಲ್ಲಿ ಕಾಮಗಾರಿ ಆರಂಭಿಸಿದರೆ ಗುಣಮಟ್ಟ ಕಾಯ್ದುಕೊಳ್ಳಲಾಗುವುದಿಲ್ಲ. ಎಲ್ಲಾ ರಸ್ತೆಗಳನ್ನು ಸರ್ವಋತು ರಸ್ತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದರು.
ಇದರೊಂದಿಗೆ ಜಿಲ್ಲೆಯ ರಸ್ತೆ ಅಭಿವೃದ್ಧಿ ಕಾರ್ಯವೂ ಆರಂಭ ವಾಗಲಿದೆ. ಲೋಕೋಪಯೋಗಿ ಇಲಾಖೆಯಲ್ಲಿ ರೂ. ೬೦ ಕೋಟಿಯ ಲಭ್ಯತೆ ಇದೆ. ಜಿ.ಪಂ.ನಲ್ಲಿ ರೂ. ೩೦ ಕೋಟಿ ಅನುದಾನ ಇದೆ. ಕಳೆದ ವರ್ಷದ ರೂ. ೧೫ ಕೋಟಿಯ ಅನುದಾನವೂ ಬಾಕಿ ಉಳಿದಿದೆ. ಇವೆಲ್ಲವನ್ನು ಬಳಸಿಕೊಂಡು ಸಮರ್ಪಕ ಹಾಗೂ ಗುಣಮಟ್ಟದ ಕೆಲಸ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಪೌರಾಯುಕ್ತ ವಿಜಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಸದಸ್ಯರುಗಳಾದ ಮಹೇಶ್ ಜೈನಿ, ಕೆ.ಎಸ್. ರಮೇಶ್, ಕಾಳಚಂಡ ಅಪ್ಪಣ್ಣ, ಚಂದ್ರಶೇಖರ್, ಅರುಣ್ ಶೆಟ್ಟಿ, ಎಸ್.ಸಿ. ಸತೀಶ್, ಸಬಿತಾ, ಉಷಾ ಕಾವೇರಪ್ಪ, ಮಂಜುಳಾ ಮುರುಗನ್, ಶ್ವೇತಾ ಪ್ರಶಾಂತ್, ಕಲಾವತಿ, ಕಿರಿಯ ಅಭಿಯಂತರ ಶಮಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.