*ಗೋಣಿಕೊಪ್ಪ, ನ. ೧೯: ಜಿಲ್ಲೆಯ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ವೀರಾಜಪೇಟೆ ಶಾಸಕರು ಹಾಗೂ ಸರ್ಕಾರ ಕ್ರಮಕೈಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸುತ್ತಿರುವುದನ್ನು ವೀರಾಜಪೇಟೆ ತಾಲೂಕು ಬಿಜೆಪಿ ಖಂಡಿಸುತ್ತದೆ ಎಂದು ವಕ್ತಾರ ಕುಟ್ಟಂಡ ಅಜಿತ್ ಕರುಂಬಯ್ಯ ತಿಳಿಸಿದ್ದಾರೆ.
ರಸ್ತೆಗಳ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿರುವುದು ಮೆಚ್ಚುವಂತದ್ದು, ಆದರೆ, ಕೆಲವೊಬ್ಬರು ಅನವಶ್ಯಕ ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಂಡಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಮತ್ತು ಬಂದರು ಅಭಿವೃದ್ಧಿ ಇಲಾಖೆ ವತಿಯಿಂದ ರೂ. ೧೦.೬೦ ಕೋಟಿ, ರೂ. ೧೧.೭೦ ಕೋಟಿ, ಮುಖ್ಯ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ರೂ. ೨೧ ಕೋಟಿ ಅನುದಾನ ಕಾಯ್ದಿರಿಸಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಪಂಚಾಯತ್ ರಾಜ್ ಇಲಾಖೆ ಮೂಲಕ ರೂ. ೩೬ ಕೋಟಿ, ಕಾವೇರಿ ನೀರಾವರಿ ನಿಗಮದ ವತಿಯಿಂದ ರೂ. ೨೭.೯೧ ಕೋಟಿ ಕಾಯ್ದಿರಿಸಲಾಗಿದೆ ಎಂದರು.
ಕೋವಿಡ್ ಮತ್ತು ಮಳೆ ಹಿನ್ನೆಲೆ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲು ತೊಡಕುಂಟಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಶಾಸಕ ಕೆ.ಜಿ. ಬೋಪಯ್ಯ, ಸರ್ಕಾರ ರಸ್ತೆ ಅಭಿವೃದ್ಧಿಗೆ ಕಟಿಬದ್ಧರಾಗಿದ್ದು, ಸಾರ್ವಜನಿಕರು ತಪ್ಪು ಮಾಹಿತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡರು. ಕಾಂಗ್ರೆಸ್ ಮುಖಂಡ ತೆನ್ನೀರ ಮೈನಾ ಅವರು ರಸ್ತೆ ವಿಚಾರದಲ್ಲಿ ಪೋಸ್ಟರ್ ಚಳುವಳಿ ಮಾಡುವುದಾಗಿ ಘೋಷಿಸಿದ್ದಾರೆ. ರಸ್ತೆಯಲ್ಲಿನ ತೇವಾಂಶ ನಿಯಂತ್ರಣಕ್ಕೆ ಬಂದ ನಂತರ ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ. ಆಗ ಅಭಿನಂದನಾ ಪೋಸ್ಟರ್ ಚಳುವಳಿ ನಡೆಸಲಿ ಎಂದರು. ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಕುಟ್ಟಂಡ ವಸಂತ್ ಇದ್ದರು.