ಕೂಡಿಗೆ, ನ. ೧೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಂಭಾಗದ ಹುಂಡಿಯ ಹಣವನ್ನು ಜುಲೈ ತಿಂಗಳ ೮ರ ಮಧ್ಯ ರಾತ್ರಿ ಮಹಿಳೆಯರ ಬಟ್ಟೆ ಧರಿಸಿ ಕಳವು ಮಾಡಿದ್ದ ಆರೋಪಿ ಸಯಾದ್ ಗೌಸ್ ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಈ ಕಳವು ಪ್ರಕರಣ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಠಾಣಾಧಿಕಾರಿ ಚಂದ್ರಶೇಖರ ನೇತೃತ್ವದಲ್ಲಿ ಆರೋಪಿಯನ್ನು ಸಿಸಿ ಟಿವಿ ದೃಶ್ಯಾವಳಿ ನೆರವಿನಿಂದ ಬಂಧಿಸಲಾಗಿತ್ತು.
ಇದೀಗ ಕುಶಾಲನಗರ ಸಿವಿಲ್ ಜಡ್ಜ್ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಕುಮಾರಿ ಅವರು ಆರೋಪಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ರೂ. ೯ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.