ಕುಶಾಲನಗರ, ನ. ೧೯ : ಜಿಲ್ಲೆಯ ಖ್ಯಾತ ಪ್ರವಾಸಿ ಕೇಂದ್ರ ಕುಶಾಲನಗರ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಒಂದು ಲಕ್ಷಕ್ಕೂ ಅಧಿಕ ಆದಾಯಕ್ಕೆ ಕುತ್ತು ಬರುವಂತಾಗಿದೆ.
ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿದ್ದರೂ, ಅದು ಕೂಡ ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದ್ದು, ಕಾವೇರಿ ನಿಸರ್ಗಧಾಮಕ್ಕೆ ಅಂದಾಜು ೨.೫ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಮ್ ‘ಶಕಿ’್ತಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಪ್ರವಾಸಿ ಕೇಂದ್ರ ನಿತ್ಯ ನಿರ್ವಹಣೆಗೆ ಅನುಕೂಲಕ್ಕಾಗಿ ನದಿಯಲ್ಲಿ ಪೈಪ್ಗಳನ್ನು ಅಳವಡಿಸಿ ದಾರಿ ನಿರ್ಮಿಸಲಾಗುತ್ತಿದೆ. ಪ್ರಸಕ್ತ ಇರುವ ತೂಗು ಸೇತುವೆಯ ನಿರ್ವಹಣೆಗಾಗಿ ಅಂದಾಜು ೪೫ ಲಕ್ಷ ರೂ. ಗಳ ಅವಶ್ಯಕತೆ ಇದೆ ಎಂದು ತಿಳಿಸಿರುವ ಶಿವರಾಮ್, ನಿತ್ಯ ಬರುತ್ತಿದ್ದ ಸಾವಿರಾರು ಸಂಖ್ಯೆಯ ಪ್ರವಾಸಿಗರಿಗೆ ಕೇಂದ್ರಕ್ಕೆ ಭೇಟಿ ನೀಡಲು ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ಆದೇಶದ ತನಕ ಕೇಂದ್ರಕ್ಕೆ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶವಿಲ್ಲ ಎಂದಿದ್ದಾರೆ.
ಏಕಾಏಕಿ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿರುವುದು ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ತಂದಿದೆ ಎಂದು ತಿಳಿಸಿರುವ ಸ್ಥಳೀಯ ಎನ್ಟಿಸಿ ಪ್ರವಾಸಿ ಕೇಂದ್ರದ ಮಾಲೀಕ ಸಲಾಂ ರಾವುತರ್, ಕಳೆದ ಒಂದು ವಾರದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹಿಂತಿರುಗುತ್ತಿರುವುದು ಕಂಡು ಬಂದಿದೆ. ಇದರಿಂದ ಸರ್ಕಾರಕ್ಕೆ ದಿನನಿತ್ಯ ಲಕ್ಷಾಂತರ ರೂ. ಆದಾಯದ ನಷ್ಟ ಉಂಟಾಗುತ್ತಿದೆ, ಜೊತೆಗೆ ಖಾಸಗಿ ಸಂಸ್ಥೆಯ ಉದ್ಯಮಿಗಳಿಗೂ ಇದರಿಂದ ಹೊಡೆತ ಬಿದ್ದಿದೆ ಎಂದು ತಿಳಿಸಿದ್ದಾರೆ.
ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಬಂದ್ ಮಾಡಿರುವುದು ಉತ್ತಮ ನಿರ್ಧಾರವಾಗಿದ್ದರೂ, ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಇಲಾಖೆ ಯೋಜನೆ ರೂಪಿಸಬೇಕಾಗಿತ್ತು. ಪ್ರಸಕ್ತ ನದಿಯಲ್ಲಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಮಾರ್ಗ ಕೂಡ ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಸಲಾಂ ಅವರು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕೂಡ ಈ ಬಗ್ಗೆ ಮೌನವಹಿಸಿರುವುದು ಬೇಸರದ ವಿಷಯ ಎಂದಿದ್ದಾರೆ.
ನಿತ್ಯ ೩ ರಿಂದ ೪ ಸಾವಿರ ಪ್ರವಾಸಿಗರು ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಕಾವೇರಿ ನಿಸರ್ಗಧಾಮ ವಾರ್ಷಿಕ ೩ ರಿಂದ ೪ ಕೋಟಿ ಆದಾಯ ಕಂಡು ಬರುತ್ತಿತ್ತು. ಆದರೆ, ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ಮಾತ್ರ ಕಾವೇರಿ ನಿಸರ್ಗ ಧಾಮದಲ್ಲಿ ಕಂಡು ಬರದಿ ರುವುದು ವಿಷಾದನೀಯ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಪ್ರವಾಸಿಗರನ್ನು ಆಕರ್ಷಿಸುವ ಯಾವುದೇ ವಿಶೇಷ ಯೋಜನೆಗಳನ್ನು ಇಲ್ಲಿ ರೂಪಿಸುವಲ್ಲಿ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಉನ್ನತ ತಂತ್ರಜ್ಞರ ಸಲಹೆಯೊಂದಿಗೆ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವಲ್ಲಿ ಇನ್ನಾದರೂ ಸಂಬAಧಿಸಿದ ಇಲಾಖೆಗಳು ಕಾರ್ಯಯೋಜನೆ ರೂಪಿಸಬೇಕಾಗಿದೆ.