ಮಡಿಕೇರಿ, ನ. ೧೯: ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ೮ನೇ ವರ್ಷದ “ಕೊಡವ ನಮ್ಮೆ”ಯ ಮೂರನೇ ದಿನ ಕೊಡವ ಸಮಾಜಗಳ ನಡುವೆ ನಡೆದ ಹಾಕಿ ಪಂದ್ಯಾವಳಿಯಲ್ಲಿ ಮೂರ್ನಾಡು ಕೊಡವ ಸಮಾಜ ಹಾಗೂ ಮಡಿಕೇರಿ ಕೊಡವ ಸಮಾಜ ಫೈನಲ್‌ಗೆ ಲಗ್ಗೆ ಇಟ್ಟಿವೆ.

ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ನಡೆದ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಹುದಿಕೇರಿ ವಿರುದ್ಧ ಮೂರ್ನಾಡು ತಂಡ ೭-೩ ಅಂತರದಲ್ಲಿ ಗೆಲುವು ಸಾಧಿಸಿತು.

ಮಡಿಕೇರಿ ಕೊಡವ ಸಮಾಜ ಹಾಗೂ ಶ್ರೀಮಂಗಲ ಕೊಡವ ಸಮಾಜಗಳ ನಡುವೆ ನಡೆದ ಪಂದ್ಯದಲ್ಲಿ ಮಡಿಕೇರಿ ಕೊಡವ ಸಮಾಜ ೩-೦ ಗೋಲುಗಳ ಅಂತರದಲ್ಲಿ ಫೈನಲ್ ಪ್ರವೇಶಿಸಿತು.

ಶ್ರೀಮಂಗಲ ಕೊಡವ ಸಮಾಜ ಹಾಗೂ ಹುದಿಕೇರಿ ಕೊಡವ ಸಮಾಜದ ನಡುವೆ ನಡೆದ ಪಂದ್ಯಾವಳಿಯಲ್ಲಿ ಎರಡು ತಂಡಗಳು ಸಮಗೋಲು ಬಾರಿಸಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ಎರಡು ತಂಡಗಳಿಗೆ ತಲಾ ೧೦ ಸಾವಿರ ಬಹುಮಾನವನ್ನು ಘೋಷಿ ಸಲಾಯಿತು.

ಯೋಧರಿಗೆ ಗೌರವ ನಮನ

ಪಂದ್ಯಾವಳಿಗೂ ಮೊದಲು ಬಾಳುಗೋಡುವಿನ ಫೆಡರೇಷನ್ ಆಫ್ ಕೊಡವ ಸಮಾಜದಲ್ಲಿರುವ ಹುತಾತ್ಮ ಚೌಕದಲ್ಲಿ ಯೋಧರಿಗೆ ಗೌರವ ನಮನ ಕಾರ್ಯಕ್ರಮವನ್ನು ನೇವಲ್ ಕಮಾಂಡರ್ ಚೆಕ್ಕೆರ ಮಿನ್ನು ಬೆಳ್ಯಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನೌಕಾಪಡೆಯಲ್ಲಿ ತಮ್ಮ ೩೫ ವರ್ಷಗಳ ಸುದೀರ್ಘ ಸೇವೆಗಳ ಅನುಭವವನ್ನು ಹಂಚಿಕೊAಡರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ನ ಅಧ್ಯಕ್ಷ ಕರ್ನಲ್ ಕಂಡ್ರತAಡ ಸುಬ್ಬಯ್ಯ ಮಾತನಾಡಿ, ಭೂ ಸೇನೆ, ವಾಯುಸೇನೆ, ನೌಕಾಸೇನೆಯಿಂದ ದೇಶದ ಜನ ನೆಮ್ಮದಿಯಿಂದ ಜೀವನ ನಡೆಸುವಂತಾಗಿದ್ದು, ಪ್ರತಿದಿನ ಯೋಧರನ್ನು ಸ್ಮರಿಸುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಫೆಡರೇಷನ್ ಆಫ್ ಕೊಡವ ಸಮಾಜಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ವೀರ ಮರಣ ಹೊಂದಿದ ಕೊಡಗಿನ ಸೈನಿಕರ ಮಾಹಿತಿಯನ್ನು ಹುತಾತ್ಮ ಚೌಕದಲ್ಲಿ ದಾಖಲಿಸಲಾಗಿದ್ದು, ಪ್ರತಿ ವರ್ಷ ಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ಸಂತಾಪ ಸೂಚಿಸಲಾಗುತ್ತಿದೆ ಎಂದರು.

ಈ ಸಂದರ್ಭ ಸಮಾಜ ಸೇವಕಿ ಚೆಕ್ಕೆರ ಚೆರಿ ಬೆಳ್ಯಪ್ಪ, ಫೆಡರೇಷನ್ ಆಫ್ ಕೊಡವ ಸಮಾಜಗಳ ಉಪಾಧ್ಯಕ್ಷರುಗಳಾದ ಮಂಡುವAಡ ಮುತ್ತಪ್ಪ, ಮಲ್ಚೀರ ಬೋಸ್ ಚೆಟ್ಟಿಯಪ್ಪ, ಮಾಳೇಟಿರ ಅಭಿಮನ್ಯು ಕುಮಾರ್, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಮಲ್ಲೆಂಗಡ ದಾದ ಬೆಳ್ಯಪ್ಪ, ಫೆಡರೇಷನ್ ಆಫ್ ಕೊಡವ ಸಮಾಜಗಳ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಹಾಗೂ ಹಲವು ನಿವೃತ್ತ ಸೇನಾಧಿಕಾರಿಗಳು, ನಿವೃತ್ತ ಯೋಧರು ಸೇರಿದಂತೆ ಹಲವು ಕೊಡವ ಸಮಾಜದ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡು ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂತಾಪ ಸೂಚಿಸಿದರು.

ತೀತಿರ ಪುಶಿ ಅಪ್ಪಣ್ಣ ಪ್ರಾರ್ಥಿಸಿ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ನಿರೂಪಿಸಿದರು. ಫೆಡರೇಷನ್ ಆಫ್ ಕೊಡವ ಸಮಾಜಗಳ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಸ್ವಾಗತಿಸಿ, ವಂದಿಸಿದರು.

ಭಾರದ ಗುಂಡು ಎಸೆತ ಸ್ಪರ್ಧೆ

ಕೂತಂಡ ಸುರೇಶ್ ಅಪ್ಪಯ್ಯ ನೇತೃತ್ವದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ನಡೆದ ಭಾರದ ಗುಂಡು ಎಸೆತ ಸ್ಪರ್ಧೆ ಗಮನ ಸೆಳೆಯಿತು.

ಮಹಿಳೆಯರ ವಿಭಾಗದಲ್ಲಿ ಮೂರ್ನಾಡು ಕೊಡವ ಸಮಾಜದ ಬೊಪ್ಪಂಡ ಕುಸುಮ ಭೀಮಯ್ಯ ಪ್ರಥಮ, ನಾಪೋಕ್ಲು ಕೊಡವ ಸಮಾಜದ ಅರೆಯಡ ಅನಿತಾ ದಿನೇಶ್ ದ್ವಿತೀಯ, ಮೂರ್ನಾಡು ಕೊಡವ ಸಮಾಜದ ಮಾಳೇಟಿರ ಪ್ರೀತಮ್ ವಿವೇಕ್ ತೃತೀಯ ಬಹುಮಾನÀ ಪಡೆದುಕೊಂಡರು.

ಪುರುಷರ ವಿಭಾಗದಲ್ಲಿ ಅಮ್ಮತ್ತಿ ಕೊಡವ ಸಮಾಜದ ಬಲ್ಯಂಡ ಮೌರ್ಯ ಗಣಪತಿ ಪ್ರಥಮ, ಮೂರ್ನಾಡು ಕೊಡವ ಸಮಾಜದ ಮೂಡೇರ ಪೊನ್ನಪ್ಪ ನಾಣಯ್ಯ ದ್ವಿತೀಯ, ಮಡಿಯಂಡ ಸುತನ್ ಉತ್ತಯ್ಯ ತೃತೀಯ ಬಹುಮಾನÀ ಪಡೆದುಕೊಂಡರು.

ಇಂದಿನ ಪಂದ್ಯಾವಳಿ

ಮೂರ್ನಾಡು ಮತ್ತು ಮಡಿಕೇರಿ ಕೊಡವ ಸಮಾಜ ನಡುವೆ ತಾ. ೨೦ ರಂದು (ಇಂದು) ಮಧ್ಯಾಹ್ನ ೨.೩೦ ಗಂಟೆಗೆ ಹಾಕಿ ಫೈನಲ್ ಪಂದ್ಯಾವಳಿ ನಡೆಯಲಿದೆ.

ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ನಾಪೋಕ್ಲು ಹಾಗೂ ಅಮ್ಮತ್ತಿ ಕೊಡವ ಸಮಾಜ, ಮಹಿಳೆಯರ ವಿಭಾಗದಲ್ಲಿ ಮಡಿಕೇರಿ ಕೊಡವ ಸಮಾಜ ಹಾಗೂ ನಾಪೋಕ್ಲು ಕೊಡವ ಸಮಾಜದ ನಡುವೆ ಪೈಪೋಟಿ ನಡೆಯಲಿದೆ.

ಸಮಾರೋಪ

ಫೆಡರೇಷನ್ ಆಫ್ ಕೊಡವ ಸಮಾಜಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸಚಿವ ಎಂ.ಸಿ. ನಾಣಯ್ಯ, ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಉಮ್ಮತ್ತಾಟ್, ಕೋಲಾಟ್, ಬೊಳೋಪಾಟ್, ಕತ್ತಿಯಾಟ್, ಪರಿಯಕಳಿ, ಸಮ್ಮಂದ ಅಡುಕುವೊ, ತಾಲಿಪಾಟ್, ಕಪ್ಪೆಯಾಟ್ ಸೇರಿದಂತೆ ವಿವಿಧ ಜನಪದೀಯ ಕಲೆಗಳು ಆಕರ್ಷಿಸಲಿವೆ.