ಮಡಿಕೇರಿ, ನ. ೧೭: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೧- ೨೨ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಇದಕ್ಕೆ ಕಾರಣರಾದ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರಿಗೆ ಸನ್ಮಾನ ಕಾರ್ಯಕ್ರಮ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೂಡಿಗೆ ಎಸ್.ಐ. ಚಂದ್ರಶೇಖರ್, ನಾವು ಉತ್ತಮವಾದ ನಾಗರಿಕರಾಗಿರುವುದನ್ನು ಮುಖ್ಯ ಗುರಿಯನ್ನಾಗಿಸಿಕೊಳ್ಳಬೇಕು. ನಾವು ಯಾವ ರೀತಿ ಸಮಾಜದಲ್ಲಿ ಇರುತ್ತೇವೆ. ಯಾವ ರೀತಿ ವ್ಯವಹರಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮಾನಸಿಕ, ದೈಹಿಕ ಹಾಗು ವ್ಯಕ್ತಿತ್ವದಿಂದ ಉತ್ತಮ ಮಾನವನಾಗಿ ಬದುಕುವುದನ್ನು ಕಲಿಯಬೇಕು. ಈ ಸನ್ಮಾನ ಪಡೆದುಕೊಂಡು ಸಿಕ್ಕ ಗೌರವವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿತನುಡಿದರು.
ಮುಖ್ಯ ಅತಿಥಿ ಜಾನಪದ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಮುನೀರ್ ಅಹಮದ್ ಮಾತನಾಡಿ, ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವಂತಹ ಶಿಕ್ಷಕರಿಗೆ ಸನ್ಮಾನ ನಡೆಸುವ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಸನ್ಮಾನ ನೀಡುವುದು ನಿಜಕ್ಕೂ ಅಭಿನಂದನಾರ್ಹ ಎಂದರು.
ಪ್ರಾಂಶುಪಾಲ ಕೆ.ಬಿ. ಬಸಪ್ಪ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತ ಅವಕಾಶಗಳನ್ನು ನಿರೀಕ್ಷಿಸಬೇಡಿ, ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ ಎನ್ನುವುದನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ರೂಪಿಸಿಕೊಳ್ಳಬೇಕು ಎಂದರು. ದ.ಸಂ.ಸ. ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಅಂಬೇಡ್ಕರ್ ಅವರ ಮಹತ್ವವನ್ನು ಉದಾಹರಣೆಗಳ ಸಹಿತ ವಿವರಿಸುತ್ತಾ, ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾವ ರೀತಿ ಅಭ್ಯಾಸ ನಡೆಸುತ್ತಿದ್ದರು ಮತ್ತು ಆ ಶ್ರಮದಿಂದ ಅವರು ಗಳಿಸಿದ ಪದವಿಗಳು, ಸ್ಥಾನ, ಗೌರವದ ಅರಿವಿತ್ತರು.
ಅಧ್ಯಕ್ಷೀಯ ಭಾಷಣ ಮಾಡಿದ ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್. ದಲಿತ ಸಂಘರ್ಷ ಕಳೆದ ಒಂದು ದಶಕದಿಂದ ನಡೆಸಿದ ಸೇವೆ ಹಾಗೂ ವಿದ್ಯಾರ್ಥಿಗಳಿಗೆ, ಪೋಷಕರಿಗೆ ನೀಡಿದ ಸನ್ಮಾನದ ಉದ್ದೇಶದ ಕುರಿತು ಮಾಹಿತಿಯಿತ್ತರು. ವಿದ್ಯಾರ್ಥಿಗಳು ದೇಶದ ಶಕ್ತಿ ಅವರನ್ನು ಚಿಕ್ಕಂದಿನಿAದಲೇ ಜಾಗೃತಗೊಳಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಾಗರಾಜು ಶೆಟ್ಟಿ, ಮಡಿಕೇರಿ ಲಯನ್ಸ್ ಕ್ಲಬ್ ಚೇರ್ಮನ್ ನವೀನ್ ಕುಶಾಲಪ್ಪ ಪ್ರಮುಖರು ಹಾಜರಿದ್ದರು.