ಮಡಿಕೇರಿ, ನ. ೧೬: ಮಡಿಕೇರಿ ನಗರಸಭೆಯ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಆರೋಪಿಸಿರುವ ನಗರಸಭೆಯ ವಿರೋಧ ಪಕ್ಷ ಎಸ್‌ಡಿಪಿಐ; ಆಡಳಿತ ವ್ಯವಸ್ಥೆ ಸರಿ ಆಗದಿದ್ದಲ್ಲಿ ಸಾರ್ವಜನಿಕರನ್ನೊಳಗೊಂಡು ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆಯ ಎಸ್‌ಡಿಪಿಐ ಸದಸ್ಯ ಅಮಿನ್ ಮೊಯ್ಸಿನ್ ಮಾತನಾಡಿ, ನಗರಸಭೆಯಲ್ಲಿ ಆಡಳಿತ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ, ಅಭಿವೃದ್ಧಿ ಶೂನ್ಯವಾಗಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ಬರುವ ೧೫ನೇ ಹಣಕಾಸು ಹಾಗೂ ನಗರೋತ್ಥಾನ ಅನುದಾನಗಳನ್ನು ಹೊರತುಪಡಿಸಿ ಬೇರಾವುದೇ ವಿಶೇಷ ಅನುದಾನಗಳು ನಗರಸಭೆಗೆ ಬಂದಿಲ್ಲ. ಮಡಿಕೇರಿ ನಗರದ ರಸ್ತೆಗಳು ತೀರಾ ಹಾಳಾಗಿವೆ. ನಗರಸಭೆಯಲ್ಲಿ ೧೨೪ ಸಿಬ್ಬಂದಿಗಳ ಕೊರತೆಯಿದೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೂ ೬ ತಿಂಗಳಿನಿAದ ವೇತನ ಪಾವತಿ ಆಗಿಲ್ಲ. ಹೀಗಿರುವಾಗ ಅಭಿವೃದ್ಧಿ ಕೆಲಸಗಳು ಹೇಗೆ ನಡೆಯುತ್ತವೆ ಎಂದು ಪ್ರಶ್ನಿಸಿದರು. ವರ್ಷಕ್ಕೊಮ್ಮೆ ಹಾಳಾಗಿರುವ ರಸ್ತೆಗಳಿಗೆ ತೇಪೆ ಹಾಕುವ ಕೆಲಸವನ್ನು ಮಾತ್ರ ಮಾಡ ಲಾಗುತ್ತಿದೆ. ಮಡಿಕೇರಿ ನಗರದಲ್ಲಿ ೧೨೦೦ ಮಂದಿ ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಅಂತಹವರಿಗೆ ನಿವೇಶನ ನೀಡಲು ಭೂಮಿಯನ್ನು

(ಮೊದಲ ಪುಟದಿಂದ) ಗುರುತಿಸುವ ಕೆಲಸವನ್ನು ಕೂಡ ಇನ್ನೂ ಮಾಡಿಲ್ಲ. ಮಳೆಯಿಂದ ನಷ್ಟ ಅನುಭವಿಸಿದವರಿಗೆ ಮಳೆಹಾನಿ ಪರಿಹಾರ ಕೂಡ ಇನ್ನೂ ಸಿಕ್ಕಿಲ್ಲ. ನಗರೋತ್ಥಾನದ ಮೂರನೇ ಹಂತದ ಯೋಜನೆಯಲ್ಲಿ ೫ ಕೋಟಿ ರೂ. ಅನುದಾನ ಇನ್ನೂ ಕೂಡ ಬಳಕೆ ಆಗಿಲ್ಲ. ನಾಲ್ಕನೇ ಹಂತದ ಅನುದಾನವನ್ನು ವಾರ್ಡ್ಗಳಿಗೆ ಹಂಚಿಕೆ ಮಾಡುವಲ್ಲಿಯೂ ತಾರತಮ್ಯ ಮಾಡಲಾಗಿದೆ ಎಂದು ಅಮಿನ್ ಮೊಯ್ಸಿನ್ ಆಪಾದಿಸಿದರು. ನಗರಸಭೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಖಾತೆ ಕೆಲಸಗಳೆಲ್ಲವೂ ಸ್ಥಗಿತಗೊಂಡಿವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಪರಿಹರಿಸುವಲ್ಲಿ ವಿಫಲರಾಗಿರುವ ನಗರಸಭೆಯ ಆಡಳಿತದಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭಾ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಒಳಿತು ಎಂದು ನುಡಿದ ಅಮಿನ್ ಮೊಯ್ಸಿನ್ ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸದಿದ್ದಲ್ಲಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ನಗರಸಭೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮತ್ತೋರ್ವ ಸದಸ್ಯ ಮನ್ಸೂರ್ ಆಲಿ ಮಾತನಾಡಿ, ಸಾಮಾನ್ಯ ಜನರು ನೀರಿನ ಶುಲ್ಕ ಪಾವತಿಸದಿದ್ದರೆ ಸಂಪರ್ಕವನ್ನು ಕಡಿತಗೊಳಿಸುವ ನಗರಸಭೆ, ಸರ್ಕಾರಿ ಕಚೇರಿಗಳಿಂದ ಬರಬೇಕಿರುವ ಕೋಟಿಗಟ್ಟಲೆ ನೀರಿನ ಶುಲ್ಕದ ಬಗ್ಗೆ ಚಕಾರವೆತ್ತುವುದಿಲ್ಲ ಎಂದರು. ನಗರಸಭೆಯ ಸಭೆಗಳಲ್ಲಿ ಅಭಿವೃದ್ಧಿ ವಿಚಾರಗಳನ್ನು ಮಾತನಾಡಲು ಅವಕಾಶವೇ ನೀಡುವುದಿಲ್ಲ ಎಂದು ಹೇಳಿದ ಅವರು, ಮಡಿಕೇರಿ ನಗರಕ್ಕೆ ಶಾಸಕ ಅಪ್ಪಚ್ಚುರಂಜನ್ ಅವರು ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ನಗರಸಭಾ ಸದಸ್ಯರುಗಳಾದ ಬಷೀರ್ ಅಹ್ಮದ್, ನೀಮಾ ಅರ್ಶದ್, ಮೇರಿ ವೇಗಸ್, ಎಸ್‌ಡಿಪಿಐ ನಗರಾಧ್ಯಕ್ಷ ರಿಜ್ವಾನ್ ಉಪಸ್ಥಿತರಿದ್ದರು.