ಸುಂಟಿಕೊಪ್ಪ, ನ. ೧೬: ರಸ್ತೆ ಇಲ್ಲ, ಕುಡಿಯುವ ನೀರಿನ ಸೌಲಭ್ಯ ಇಲ್ಲ, ನಿವೇಶನ ರಹಿತರಿಗೆ ಸೂರು ಕಲ್ಪಿಸುತ್ತಿಲ್ಲ, ಕಂದಾಯ ಇಲಾಖೆಯಲ್ಲಿ ಲಂಚ ತಾಂಡವವಾಡುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರ ನೇಮಿಸಿ; ಮಳೆ ಸಂತ್ರಸ್ತರಿಗೆ ನೀಡಿದ ಮನೆಗೆ ಬೀಗ ಹಾಕಲಾಗಿದೆ, ಜಲಜೀವನ್ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ಮಾದಾಪುರ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ವಾಗ್ದಾಳಿ ನಡೆಸಿದ ಪ್ರಸಂಗ ಎದುರಾಯಿತು.

ಮಾದಾಪುರ ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ನಿರೂಪ ಬಿ. ಅವರ ಅಧ್ಯಕ್ಷತೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಸರ್ವೆ ಸರಿ ಇಲ್ಲ : ಕಂದಾಯ ಪರಿವೀಕ್ಷಕ ಪ್ರಹ್ಲಾದ ಅವರು ಸಭೆಗೆ ಇಲಾಖೆಯ ಮಾಹಿತಿ ನೀಡುತ್ತಿದ್ದಾಗ ಗ್ರಾಮಸ್ಥರು ಕೃಷಿಕರ ಪರಿಹಾರದ ಸರ್ವೆ ಸರಿಯಾಗಿ ನಡೆಯುತ್ತಿಲ್ಲ. ಸೂಕ್ತ ಪರಿಹಾರ ರೈತರಿಗೆ ನೀಡಬೇಕು. ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಿವೇಶನ ರಹಿತರಿಗೆ ಸರಕಾರಿ ಪೈಸಾರಿ ಜಾಗ ಗುರುತಿಸಿಕೊಟ್ಟರೂ ಕುಂಬೂರಿನಲ್ಲಿ ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸುತ್ತಿಲ್ಲ. ಜಿಲ್ಲಾಧಿಕಾರಿ ತಹಶೀಲ್ದಾರರಿಗೆ ಆದೇಶಿಸಿದರೂ ಯಾಕೆ ಅಧಿಕಾರಿಗಳು ಮೌನವಾಗಿದ್ದಾರೆ. ನ್ಯಾಯಬೆಲೆ ಅಂಗಡಿಗೆ ಕೆಲಸವನ್ನು ಬಿಟ್ಟು ಫಲಾನುಭವಿಗಳು ತೆರಳಿದರೂ ಸಮಯದ ಅಭಾವದಿಂದ ಅಕ್ಕಿ ಸಿಗುತ್ತಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಬೆಳಿಗ್ಗೆ ೭ ರಿಂದ ೧೨ ಗಂಟೆ, ಸಂಜೆ ೪ ರಿಂದ ೮ ಗಂಟೆಯವರೆಗೆ ವಿಸ್ತರಿಸಿ ಎಂದು ಗ್ರಾಮಸ್ಥರಾದ ಸೋಮಪ್ಪ, ಮಜೀದ್, ಕಂಠಿಸೋಮಯ್ಯ, ಕರುಂಬಯ್ಯ, ಹೆಚ್. ಗಣೇಶ

(ಮೊದಲ ಪುಟದಿಂದ) ಹಾಗೂ ಪ್ರಸನ್ನ ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯರು ಇಲ್ಲ: ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೨೪x೭ ನಾಮಫಲಕ ಹಾಕಲಾಗಿದೆ. ಅದರೆ ರಾತ್ರಿ ವೇಳೆ ಆಸ್ಪತ್ರೆಗೆ ಹೋದರೆ ವೈದ್ಯರು ಲಭಿಸುತ್ತಿಲ್ಲ. ಹಾವು ಕಚ್ಚಿದರೆ ಪ್ರಥಮ ಚಿಕಿತ್ಸೆ ನೀಡಲೂ ದಾದಿಯರು ನಿರಾಕರಿಸುತ್ತಾರೆ ಎಂದು ಮಜೀದ್, ಹನೀಫ್ ಹೇಳಿದರು. ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯರನ್ನು ಸರಕಾರ ನೇಮಿಸಿದೆ ಎಂದು ಡಾ. ನಿಶಾ ಉತ್ತರಿಸಿದರು. ೧೫ ದಿನದೊಳಗೆ ರಾತ್ರಿ ಪಾಳಿಯ ವೈದ್ಯರ ನೇಮಿಸದಿದ್ದಲ್ಲಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದರು.

ಇಲಾಖೆಯಲ್ಲಿ ಭ್ರಷ್ಟಾಚಾರ : ಕುಂಬೂರಿನಲ್ಲಿ ೨.೯೦ ಎಕ್ರೆ ಸರಕಾರಿ ಪೈಸಾರಿ ಜಾಗವಿದೆ, ಅಲ್ಲಿ ನಿವೇಶನ ರಹಿತರಿಗೆ ಸೂರು ಕಲ್ಪಿಸಿಕೊಡಿ ಎಂದು ಬಹಳಷ್ಟು ಮನವಿ ಸಲ್ಲಿಸಿದರೂ ಕಂದಾಯ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆ. ಕಂದಾಯ ಇಲಾಖೆಯ ಕಿರಿಯ ಅಧಿಕಾರಿಗಳಿಂದ ಕೃಷಿಕರಿಗೆ, ಬಡವರಿಗೆ ತೊಂದರೆಯಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ ಎಂದು ಹೆಚ್.ಕೆ. ಸೋಮಪ್ಪ, ಹೆಚ್. ಗಣೇಶ ವಾಗ್ದಾಳಿ ನಡೆಸಿದರು. ಬೇಸಿಗೆಯಲ್ಲಿ ಕೃಷಿಕರು ಪಂಪ್‌ಸೆಟ್ ಬಳಸುತ್ತಿರುವುದರಿಂದ ವಿದ್ಯುತ್ ಕೈ ಕೊಡುತ್ತಿದೆ. ಲೈನ್‌ಮೆನ್‌ಗಳ ಜತೆ ಶಾಮೀಲಾಗಿ ಕೆಲ ರೈತರು ಅನಧಿಕೃತ ವಿದ್ಯುತ್ ಬಳಸುತ್ತಿದ್ದಾರೆ ಎಂದು ಕಂಠಿ ಆರೋಪಿಸಿದರು.

ಜಲಜೀವನ್ ಯೋಜನೆಯಡಿ ಕುಂಬೂರಿನಲ್ಲಿ ನಿರ್ವಹಿಸಲಾದ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದೆ. ಹಳೆ ಪೈಪ್‌ಗಳನ್ನು ಬಳಸಲಾಗಿದೆ. ಟ್ಯಾಂಕ್ ನಿರ್ಮಾಣ ಸರಿಯಾಗಿಲ್ಲ ಎಂದು ಪ್ರಸನ್ನ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮ ಪಂಚಾಯಿತಿ ಪಿಡಿಓ ಪೂರ್ಣಕುಮಾರ್, ಪಂಚಾಯಿತಿ ವಿವಿಧ ಅಭಿವೃದ್ಧಿ ಕಾರ್ಯದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ನೋಡಲ್ ಅಧಿಕಾರಿ ಪಶುವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿ ಶ್ರೀದೇವ್ ಸಭೆಗೆ ಮಾಹಿತಿ ನೀಡುವಾಗ ಬಹುತೇಕ ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದ್ದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ, ಸದಸ್ಯರುಗಳಾದ ಕೆ.ಎ. ಲತೀಫ್, ಪಿ.ಡಿ. ಅಂತೋಣಿ, ಕೆ.ಸಿ. ಶೀಲಾ, ಭಾಗೀರಥಿ ಗಿರೀಶ್, ವಿ.ಆರ್. ಸುರೇಶ, ಹೆಚ್.ಎಸ್ .ಗೋಪಿ, ಎಂಸಿ.ಬಿದ್ದಪ್ಪ, ಬಿ.ಆರ್.ಮಾನಸ, ಎಸ್.ಗಿರೀಶ, ಜರ್ಮಿ, ದಮಯಂತಿ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾ.ಪಂ. ಲೆಕ್ಕಾಧಿಕಾರಿ ಬಿ.ಬಿ. ಅನಿತ ಉಪಸ್ಥಿತರಿದ್ದರು.