ಮಡಿಕೇರಿ, ನ. ೧೬: ಹದಗೆಟ್ಟ ರಸ್ತೆಗಳು ಸೇರಿದಂತೆ ಮೂಲಭೂತ ಸಮಸ್ಯೆಗಳು ಮಡಿಕೇರಿ ನಗರವನ್ನು ಕಾಡುತ್ತಿದ್ದು, ಮುಂದಿನ ೧೫ ದಿನಗಳೊಳಗೆ ಸೂಕ್ತ ಕ್ರಮಕೈಗೊಳ್ಳ ಬೇಕು. ತಪ್ಪಿದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಎಚ್ಚರಿಕೆ ನೀಡಿದೆ.
ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ. ಪೀಟರ್ ಅವರ ನೇತೃತ್ವದಲ್ಲಿ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರಮುಖರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ನಗರದ ೨೩ ವಾರ್ಡ್ಗಳ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಹೊಂಡ, ಗುಂಡಿಗಳಿAದ ಕೂಡಿದೆ. ಕನ್ನಂಡಬಾಣೆ ನೀರು ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸದೆ ಇರುವುದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನಗರದ ಬಹುತೇಕ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯಾಗುತ್ತಿಲ್ಲ ಎಂದರು.
ಬೀದಿ ದೀಪಗಳು ಉರಿಯದೆ ನಗರದ ಬಹುತೇಕ ಎಲ್ಲಾ ಬಡಾವಣೆ ಗಳು ಕಾರ್ಗತ್ತಲೆಯಲ್ಲಿ ಮುಳುಗಿವೆ. ನಗರದಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಮಾರುಕಟ್ಟೆ ಆವರಣ ನಿತ್ಯ ಅಶುಚಿತ್ವದಿಂದ ಕೂಡಿದೆ. ಮಾಂಸ ಮಾಡುವ ಪ್ರದೇಶ ಅವೈಜ್ಞಾನಿಕ ವಾಗಿದ್ದು, ಕೊಳಚೆ ಪ್ರದೇಶದಂತಿದೆ. ನೂತನ ಖಾಸಗಿ ಬಸ್ ನಿಲ್ದಾಣದ ಕಾಂಕ್ರೀಟ್ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಪ್ರಯಾಣಿಕರಿಗೆ ಅಡಚಣೆ ಯಾಗಿದೆ. ಇಲ್ಲಿನ ಶೌಚಾಲಯದಲ್ಲಿ ನೀರು ಮತ್ತು ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ.
ರಾಜಾಸೀಟು ಉದ್ಯಾನವನದ ಬಳಿ ಮಕ್ಕಳ ಮನರಂಜನೆಗಾಗಿ ಇದ್ದ ಪುಟಾಣಿ ರೈಲು ಸ್ಥಗಿತಗೊಂಡು ಅನೇಕ ವರ್ಷಗಳೇ ಆಗಿದೆ. ನಗರದ ತುಂಬಾ ಬೀದಿ ನಾಯಿಗಳ ಉಪಟಳ ಮಿತಿ ಮೀರಿದ್ದು, ಭಯದ ವಾತಾವರಣವಿದೆ. ನಗರಸಭಾ ಕಚೇರಿ ಯಲ್ಲಿ ನಿತ್ಯ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ. ಯಾವುದೇ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ.
ಈ ಎಲ್ಲಾ ಸಮಸ್ಯೆಗಳನ್ನು ತಾವು ಗಂಭೀರವಾಗಿ ಪರಿಗಣಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ೧೫ ದಿನಗಳೊಳಗೆ ನಗರದ ರಸ್ತೆಗಳನ್ನು ಡಾಂಬರೀಕರಣಗೊಳಿಸದಿದ್ದಲ್ಲಿ ಮತ್ತು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸೂಚಿಸದಿದ್ದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ಪೀಟರ್ ಎಚ್ಚರಿಕೆ ನೀಡಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭ ಮಡಿಕೇರಿ ನಗರ ಕಾಂಗ್ರೆಸ್ ಕಾರ್ಯ ದರ್ಶಿ ಕೌಸರ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಶೌಕತ್ ಅಲಿ, ಖಜಾಂಚಿ ಎಂ.ಹೆಚ್. ಅಝೀಜ್, ಕಾರ್ಯಕರ್ತರಾದ ಸಾಧಿಕ್, ಶಾಕೀರ್, ಅಜ್ಮಲ್ ಹಾಜರಿದ್ದರು.
ಬೇಡಿಕೆಗಳು
ನಗರದ ೨೩ ವಾರ್ಡ್ಗಳ ಎಲ್ಲಾ ಬಡಾವಣೆಗಳ ರಸ್ತೆಗಳನ್ನು ಡಾಂಬರೀಕರಣಗೊಳಿಸಬೇಕು, ನಗರದ ಎಲ್ಲಾ ವಾರ್ಡ್ಗಳ ಚರಂಡಿಗಳನ್ನು ದುರಸ್ತಿಪಡಿಸಿ ಸ್ವಚ್ಛತೆ ಕಾಪಾಡಬೇಕು, ಕಸವಿಲೇವಾರಿ ಕಾರ್ಯವನ್ನು ವೈಜ್ಞಾನಿಕ ರೂಪದಲ್ಲಿ ಮಾಡಬೇಕು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು, ಕನ್ನಂಡಬಾಣೆ ವಾರ್ಡ್ನ ನೀರು ಶುದ್ಧೀಕರಣ ಘಟಕವನ್ನು ದುರಸ್ತಿಪಡಿಸಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು, ನಗರದ ಎಲ್ಲಾ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು, ಎಲ್ಲಾ ಬಡಾವಣೆಗಳ ಬೀದಿದೀಪಗಳನ್ನು ದುರಸ್ತಿಪಡಿಸಿ ಮಡಿಕೇರಿಯನ್ನು ಕತ್ತಲು ಮುಕ್ತಗೊಳಿಸಬೇಕು, ನಗರದ ಹೈಟೆಕ್ ಹೆಸರಿನ ಮಾರುಕಟ್ಟೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಮತ್ತು ಮಾಂಸ ಮಾಡುವ ಪ್ರದೇಶವನ್ನು ವೈಜ್ಞಾನಿಕ ರೂಪದಲ್ಲಿ ಅಭಿವೃದ್ಧಿಪಡಿಸಬೇಕು, ನೂತನ ಖಾಸಗಿ ಬಸ್ ನಿಲ್ದಾಣದ ಆವರಣಕ್ಕೆ ವೈಜ್ಞಾನಿಕ ರೂಪದಲ್ಲಿ ಕಾಂಕ್ರೀಟ್ ಹಾಕಿ ಸಮತಟ್ಟುಗೊಳಿಸ ಬೇಕು.
ಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿಗಳ ಅನುಕೂಲಕ್ಕಾಗಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು, ಬೀದಿ ನಾಯಿಗಳ ಉಪಟಳವನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ನಗರಸಭಾ ಕಚೇರಿಯ ತಾಂತ್ರಿಕ ತೊಂದರೆಯನ್ನು ಸರಿಪಡಿಸಬೇಕು ಮತ್ತು ಸರ್ವರ್ ಸಮಸ್ಯೆಗೆ ಪರಿಹಾರ ಕಂಡುಕೊAಡು ಸಾರ್ವಜನಿಕರ ಅರ್ಜಿಗಳು ಶೀಘ್ರ ವಿಲೇವಾರಿಯಾಗುವಂತೆ ನೋಡಿಕೊಳ್ಳ ಬೇಕು ಮತ್ತು ಪ್ರವಾಸಿತಾಣ ರಾಜಾಸೀಟು ಉದ್ಯಾನವನದ ಬಳಿ ಮಕ್ಕಳ ಮನರಂಜನೆಗಾಗಿ ನೂತನ ಪುಟಾಣಿ ರೈಲು ಸಂಚಾರಕ್ಕೆ ಕ್ರಮಕೈಗೊಳ್ಳಬೇಕು.