ಕಣಿವೆ, ನ. ೧೬: ತಾಲೂಕು ಕೇಂದ್ರ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಮೇಲ್ದರ್ಜೆಗಾಗಿ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಬಜೆಟ್‌ನಲ್ಲಿ ರೂ. ೩೦ ಕೋಟಿಗಳನ್ನು ಮೀಸಲಿಟ್ಟಿದೆ. ಈಗ ಇರುವ ೫೦ ಹಾಸಿಗೆಗಳ ಆಸ್ಪತ್ರೆಯನ್ನು ೧೦೦ ಹಾಸಿಗೆಯುಳ್ಳ ಸುಸಜ್ಜಿತ ಸೌಲಭ್ಯಗಳ ಆಸ್ಪತ್ರೆಯಾಗಿ ಮಾರ್ಪಡಿಸಲು ಬೇಕಾದ ಜಾಗ ದೊರಕದ ಕಾರಣ ಆಸ್ಪತ್ರೆ ಮೇಲ್ದರ್ಜೆಯ ಕನಸು ಕನಸಾಗಿಯೇ ಉಳಿದಿದೆ. ಇದಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳ ನಿರಾಸಕ್ತಿಯೋ ಅಥವಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೋ ಅಥವಾ ಕ್ಷೇತ್ರದ ಜನಪ್ರತಿನಿಧಿಗಳ ನಿರುತ್ಸಾಹವೋ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.
ಪ್ರಸಕ್ತ ಕುಶಾಲನಗರ ಪಟ್ಟಣದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ಅತ್ಯಧಿಕ ಪ್ರಮಾಣದಲ್ಲಿ ಹೊರ ರೋಗಿಗಳು ಹಾಗೂ ಒಳ ರೋಗಿಗಳು ದಾಖಲಾಗುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಹಾಸನ ಕುಶಾಲನಗರ ರಾಜ್ಯ ಹೆದ್ದಾರಿ ಮತ್ತು ಮೈಸೂರು ಮಡಿಕೇರಿ ರಾಷ್ಟಿçÃಯ ಹೆದ್ದಾರಿ ಇದೇ ಕುಶಾಲನಗರ ಪಟ್ಟಣದೊಳಗೆ ಹಾದು ಹೋಗಿರುವ ಕಾರಣ ನಿತ್ಯವೂ ಒಂದಲ್ಲ ಒಂದು ಅಪಘಾತ ಪ್ರಕರಣಗಳು ಇಲ್ಲಿ ಘಟಿಸುತ್ತಿವೆ.
ಜೊತೆಗೆ ನೆರೆಯ ಮೈಸೂರು ಜಿಲ್ಲೆಯ ಗಡಿ ಭಾಗದ ಹತ್ತಾರು ಗ್ರಾಮಗಳ ನೂರಾರು ಮಂದಿ ಹತ್ತಿರ ಎಂಬ ಕಾರಣಕ್ಕೆ ಇದೇ ಕುಶಾಲನಗರ ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿರುವು ದರಿಂದ ನಿತ್ಯವೂ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ದಾಖಲಾಗುತ್ತಿರುತ್ತಾರೆ.
ಕಳೆದ ಎರಡು ವರ್ಷಗಳ ಈಚೆಗೆ ಕುಶಾಲನಗರ ಹೊಸ ತಾಲೂಕಾಗಿ ಘೋಷಣೆಗೊಳ್ಳುವ ಮೊದಲೇ ಇದು ತಾಲೂಕು ಆಸ್ಪತ್ರೆಗಿಂತಲೂ ಹೆಚ್ಚಿನ ರೋಗಿಗಳಿಗೆ ಸೌಲಭ್ಯ ನೀಡುತ್ತಾ ಬಂದಿದೆ.
(ಮೊದಲ ಪುಟದಿಂದ) ಅಂದರೆ ತಾಲೂಕಾದ ಬಳಿಕ ಇಲ್ಲಿಗೆ ಹೆಚ್ವಿನ ರೋಗಿಗಳು ಚಿಕಿತ್ಸೆಗೆ ಧಾವಿಸುತ್ತಾರೆ ಅಂತಲ್ಲ. ಹೆಚ್ಚಿನ ಜನಸಂಖ್ಯೆಯುಳ್ಳ ಕುಶಾಲನಗರದಲ್ಲಿ ಆರೋಗ್ಯ ಸೇವೆಗೆ ಅಷ್ಟೇನು ಖಾಸಗಿ ಆಸ್ಪತ್ರೆಗಳು ತೆರೆದುಕೊಳ್ಳದ ಕಾರಣ ಬಡವನಿಂದ ಶ್ರೀಮಂತನ ತನಕ ಎಲ್ಲಾ ಹಂತದ ಜನರು ಚಿಕಿತ್ಸೆಗೆ ಈ ಆಸ್ಪತ್ರೆಗೆ ಧಾವಿಸುವ ಕಾರಣ ಬಂದವರಿಗೆ ಸೂಕ್ತ ಚಿಕಿತ್ಸೆ ಹಾಗೂ ಆರೋಗ್ಯ ಸೇವೆಯನ್ನು ಸಮರ್ಪಕವಾಗಿ ನೀಡಲು ೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ತುರ್ತಾಗಿ ೧೦೦ ಹಾಸಿಗೆಗಳ ಆಸ್ಪತ್ರೆಗಳ ಆಸ್ಪತ್ರೆಯಾಗಿ ರೂಪಿಸಬೇಕಾದದ್ದು ಸರ್ಕಾರದ ಜವಬ್ದಾರಿ. ಹಾಗಾಗಿ ಕೂಡಲೇ ಜಿಲ್ಲಾಡಳಿತ ಸೂಕ್ತ ಜಾಗವನ್ನು ಒದಗಿಸಬೇಕಿದೆ.
ಸೂಕ್ತ ಜಾಗ ಎಲ್ಲಿದೆ?
ಆಸ್ಪತ್ರೆಯ ಈಗ ಇರುವ ಜಾಗದಲ್ಲಿ ಮುಂದುವರೆದ ಯಾವುದೇ ಅಭಿವೃದ್ಧಿ ಕೈಗೊಳ್ಳಲು ಜಾಗವೇ ಇಲ್ಲ. ಹಾಗಾಗಿ ಆಸ್ಪತ್ರೆಯ ಅಧೀನದ ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಆಸ್ಪತ್ರೆಯ ಸಿಬ್ಬಂದಿಗಳ ವಸತಿ ಗೃಹಗಳು ಇರುವ ಪ್ರದೇಶದಲ್ಲಿ ಒಂದು ಎಕರೆ ಜಾಗವಿದ್ದು ಅದು ಲಯನ್ಸ್ ಸಂಸ್ಥೆಯೊAದಿಗೆ ವಿವಾದದಲ್ಲಿದೆ.
ಒಂದು ವೇಳೆ ಈ ಜಾಗ ಲಭ್ಯವಾದರೂ ಕೂಡ ಈಗಾಗಲೇ ಮೂರು ಬಾರಿ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಬಂದ ಕಾರಣ ನದಿ ಪಾತ್ರದ ಒಂದಿಷ್ಟು ಜಾಗವನ್ನು ಹೊರತು ಪಡಿಸಿ ಉಳಿದ ಜಾಗದಲ್ಲಿ ೧೦೦ ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಾಲದು ಎಂಬುದು ಆರೋಗ್ಯ ಅಧಿಕಾರಿಗಳ ವಾದ.
ಹಾಗಾಗಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಕುಶಾಲನಗರದ ಹೌಸಿಂಗ್ ಬೋರ್ಡ್ನಲ್ಲಿರುವ ೪ ಎಕರೆ ಜಾಗಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಬದಲೀ ಜಾಗವನ್ನು ನೀಡವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಇನ್ನಷ್ಟೆ ಮತ್ತೆ ಹೊಸದಾದ ಪ್ರಸ್ತಾವನೆ ಸಲ್ಲಿಸಬೇಕಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಕುಶಾಲನಗರದ ಸರ್ಕಾರಿ ಆಸ್ಪತ್ರೆ ಬಳಿ ಇರುವ ಜಾಗ ೧೦೦ ಹಾಸಿಗೆಯುಳ್ಳ ಹೊಸ ಆಸ್ಪತ್ರೆ ಕಟ್ಟಲು ಸುರಕ್ಷಿತವಲ್ಲ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ವರದಿ ನೀಡಿರುತ್ತಾರೆ. ಹಾಗಾಗಿ ಬದಲಿ ನೀರಾವರಿ ನಿಗಮದ ಜಾಗವನ್ನು ಕೇಳಿದ್ದೆವು. ಇದೀಗ ಆ ಇಲಾಖೆಯವರು ಕೂಡ ನಮ್ಮ ಮನವಿ ತಿರಸ್ಕರಿಸಿದ್ದಾರೆ. ಇದೀಗ ನಮಗೆ ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ೪ ಎಕರೆ ಜಾಗವನ್ನು ನೀಡಿದಲ್ಲಿ ನಮಗೆ ಸುಸಜ್ಜಿತವಾದ ಆಸ್ಪತ್ರೆ ಕಟ್ಟಡ ಹಾಗೂ ವೈದ್ಯ ಸಿಬ್ಬಂದಿಗಳ ವಸತಿ ಸಮುಚ್ಛಯ ನಿರ್ಮಿಸಲು ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ.
ಏನೇ ಇರಲಿ, ಜಿಲ್ಲಾಡಳಿತ ಕೂಡಲೇ ಕುಶಾಲನಗರದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸೂಕ್ತ ಸ್ಥಳಾವಕಾಶವನ್ನು ಒದಗಿಸುವ ಮೂಲಕ ಸರ್ಕಾರದಿಂದ ಬಿಡುಗಡೆಯಾಗಿರುವ ರೂ. ೩೦ ಕೋಟಿಗಳನ್ನು ಸದುಪಯೋಗಪಡಿಸಲು ಮುಂದಾಗಬೇಕಿದೆ.
ವರದಿ: ಕೆ.ಎಸ್. ಮೂರ್ತಿ